ಮಾಡಾಳು: ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಪ್ರತಿಷ್ಠಿತ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿಯ 12 ದಿನಗಳ ಜಾತ್ರಾ ಮಹೋತ್ಸವ ಶುಕ್ರವಾರ ವೈಭವದಿಂದ ನಡೆಯಿತು. ಚಂದ್ರಮಂಡಲೋತ್ಸವ, ದುಗ್ಗಳ ಹರಕೆ, ಮಡಿಲಕ್ಕಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಸಂಜೆ ಗ್ರಾಮದ ಕಲ್ಯಾಣಿಯಲ್ಲಿ ದೇವಿಯ ವಿಸರ್ಜನೆ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಶ್ರಾವಣ ಮಾಸ ಮುಗಿದು ಭಾದ್ರಪದ ಮಾಸ ಆರಂಭವಾಗುತ್ತಿದ್ದಂತೆ ರಾಜ್ಯದಾದ್ಯಂತ ಗಣೇಶೋತ್ಸವ ನಡೆಯುತ್ತಿದ್ದರೆ, ಮಾಡಾಳು ಗ್ರಾಮದಲ್ಲಿ ಗಣಪನ ತಾಯಿ ಗೌರಮ್ಮ ದೇವಿಯ ಆರಾಧನೆ ವಿಶೇಷವಾಗಿ ನಡೆಯುತ್ತದೆ. ‘ಕರ್ಪೂರ ಪ್ರಿಯೆ’, ‘ಮೂಗುತಿ ಸುಂದರಿ’ ಎಂದೇ ಭಕ್ತರಿಂದ ಕರೆಯಲ್ಪಡುವ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿಯ ಉತ್ಸವವು ಗ್ರಾಮದಲ್ಲಿ ವಿಶೇಷ ಭಕ್ತಿಭಾವದಿಂದ ನಡೆಯಿತು.
ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶಿಲಾ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವಿಯು 12 ದಿನಗಳ ಕಾಲ ಭಕ್ತರಿಂದ ತ್ರಿಕಾಲ ಪೂಜೆ ಸ್ವೀಕರಿಸಿದರು. ಶುಕ್ರವಾರ ನಡೆದ ವಿವಿಧ ಧಾರ್ಮಿಕ ವಿಧಿವಿಧಾನಗಳ ಬಳಿಕ ದೇವಿಯ ವಿಸರ್ಜನೆ ನೆರವೇರಿಸಲಾಯಿತು.
ಚಂದ್ರಮಂಡಲೋತ್ಸವ ಹಾಗೂ ದುಗ್ಗಳ ಹರಕೆ
ಶುಕ್ರವಾರ ಮುಂಜಾನೆ ದೇವಾಲಯದ ಮುಂಭಾಗ ವಿಶೇಷವಾಗಿ ಸಿದ್ಧಪಡಿಸಿದ್ದ ವೇದಿಕೆಯಲ್ಲಿ ಪುಷ್ಪಾಲಂಕೃತ ಮಂಟಪದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರ ಸಮ್ಮುಖದಲ್ಲಿ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವಣ್ಣನವರ ಪಕ್ಕದಲ್ಲಿ ದೇವಿಯನ್ನು ಕೂರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ನೂರಾರು ಮಹಿಳೆಯರು ತಲೆಯ ಮೇಲೆ ‘ದುಗ್ಗಳದ ಬಟ್ಟಲ’ನ್ನು ಹೊತ್ತು ದೇವಿಗೆ ಹರಕೆ ತೀರಿಸಿದರು. ಕರ್ಪೂರದ ಜ್ಯೋತಿಯ ಬೆಳಕಿನಲ್ಲಿ ಅಲಂಕೃತ ಗೌರಮ್ಮ ದೇವಿಯ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಮಡಿಲಕ್ಕಿ ಸೇವೆಗೆ ಭಕ್ತರ ಸಮರ್ಪಣೆ
ಬೆಳಿಗ್ಗೆ 11 ಗಂಟೆಗೆ ಪುಷ್ಪಾಲಂಕೃತ ಮಂಟಪವನ್ನು ಹೊತ್ತ ಭಕ್ತರು ದೇವಿಯ ಮಡಿಲಕ್ಕಿ ಸೇವೆಗಾಗಿ ಉತ್ಸವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದರು. ಉತ್ಸವ ಸಾಗುವ ಮಾರ್ಗದುದ್ದಕ್ಕೂ ಮಹಿಳೆಯರು ನೀರು ಹಾಕಿ, ವಿವಿಧ ಬಣ್ಣಗಳ ರಂಗೋಲಿ ಬಿಡಿಸಿ ದೇವಿಯನ್ನು ಸ್ವಾಗತಿಸಿದರು. ಭಕ್ತರು ಪೂಜೆ ಸಲ್ಲಿಸಿ ಮಡಿಲಕ್ಕಿ ಸಮರ್ಪಿಸಿದರು.
ವಿಸರ್ಜನಾ ಮಹೋತ್ಸವದ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ತಳಿರು ತೋರಣ, ಬಾಳೆಕಂದು ಹಾಗೂ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮದಾದ್ಯಂತ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು.
ಕಲ್ಯಾಣಿಯಲ್ಲಿ ದೇವಿ ವಿಸರ್ಜನೆ
ಶುಕ್ರವಾರ ಸಂಜೆ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.
ಬಳಿಕ ಸಂಜೆ 4 ಗಂಟೆಗೆ ಗ್ರಾಮದ ಕಲ್ಯಾಣಿಯಲ್ಲಿ ದೇವಿಯನ್ನು ಭಕ್ತಿಭಾವದಿಂದ ವಿಸರ್ಜಿಸಲಾಯಿತು. ಇದರೊಂದಿಗೆ 12 ದಿನಗಳ ಕಾಲ ನಡೆದ ಶ್ರೀ ಸ್ವರ್ಣ ಗೌರಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ವಿಧಿವತ್ತಾಗಿ ತೆರೆ ಬಿದ್ದಿತು.
ಕಾರ್ಯಕ್ರಮದಲ್ಲಿ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು, ಐನಹಳ್ಳಿ ಪ್ರಶಾಂತ್ ದೇವರು, ಡಿವೈಎಸ್ಪಿ ಗೋಪಿ, ಪಿಎಸ್ಐ ಸುರೇಶ್, ಕೋಡಿಮಠದ ಏಜೆಂಟ್ ಮಹದೇವಪ್ಪ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಹಾಗೂ ಗ್ರಾಮಸ್ಥರು, ಮುಖಂಡರು ಉಪಸ್ಥಿತರಿದ್ದರು.
