ಹಾಸನ: ನಗರದ ಶಾಂತಲಾ ಚಿತ್ರಕಲಾ ಕಾಲೇಜಿನಿಂದ ಹಲವು ಪ್ರತಿಭಾವಂತ ಚಿತ್ರಕಲಾವಿದರು ಶಿಕ್ಷಣ ಪಡೆದು ಕಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇದೇ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಲತಾ ಎಲ್.ಜಿ. ಅವರು ಹಲವು ವರ್ಷಗಳಿಂದ ಚಿತ್ರಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಹಲವಾರು ಗ್ರೂಪ್ ಶೋಗಳಲ್ಲಿ ಭಾಗವಹಿಸಿದ್ದಾರೆ.
ಮಕ್ಕಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಅವರು ಹಲವು ಬಾರಿ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಿ, ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಿದ್ದಾರೆ.
ಇದೀಗ ಲತಾ ಎಲ್.ಜಿ. ಅವರು ತಮ್ಮದೇ ಕಲಾಕೃತಿಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ, ತಮ್ಮದೇ ಆದ ಶಾಂತಲಾ ಆರ್ಟ್ಸ್ ಗ್ರೂಪ್ ವತಿಯಿಂದ ಆಯೋಜಿಸಿದ್ದಾರೆ. ಪ್ರದರ್ಶನದಲ್ಲಿ ಅವರ ‘ಬುದ್ಧ ಸೀರೀಸ್’ ಹಾಗೂ ‘ಆಫ್ರಿಕನ್ ಟ್ರೆಡಿಷನಲ್ ಪೇಂಟಿಂಗ್’ ಕಲಾಕೃತಿಗಳು ಪ್ರಮುಖ ಆಕರ್ಷಣೆಯಾಗಲಿವೆ.

ಪ್ರದರ್ಶನವು ಆಗಸ್ಟ್ 16ರಂದು ಹಾಸನದ ಅರಳಿಕಟ್ಟಿ ಸರ್ಕಲ್ನಲ್ಲಿರುವ ಸಂಸ್ಕೃತ ಭವನದಲ್ಲಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಲಲಿತಕಲಾ ಅಕಾಡೆಮಿ ಸದಸ್ಯ ಮಂಜುನಾಥ್, ಲೇಖಕಿ ಶ್ರೀಮತಿ ಸುವರ್ಣ ಕೆ.ಟಿ. ಶಿವಪ್ರಸಾದ್, ಸಾಹಿತಿ ಗೊರೂರು ಅನಂತರಾಜು ಹಾಗೂ ಚಿತ್ರಕಲಾವಿದ ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ
ಪ್ರದರ್ಶನದ ಅಂಗವಾಗಿ ಆಗಸ್ಟ್ 16ರಂದು ಬೆಳಿಗ್ಗೆ 10 ಗಂಟೆಗೆ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿವಾರು ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ₹50 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಹಾಗೂ ಪೋಷಕರು 9900812182 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಆಯೋಜಕರು ತಿಳಿಸಿದ್ದಾರೆ.
