ಹಾಸನದಲ್ಲಿ Karnataka State Primary School Teachers Association ಚುನಾವಣೆಯಲ್ಲಿ ಗಂಭೀರ ಅಕ್ರಮದ ಆರೋಪ ಕೇಳಿಬಂದಿದ್ದು, ನಾಮಪತ್ರ ವಾಪಾಸ್ ಪಡೆಯದೇ ಇದ್ದರೂ ಅಭ್ಯರ್ಥಿಯ ಹೆಸರನ್ನು ಅಂತಿಮ ಪಟ್ಟಿಯಿಂದ ಕೈಬಿಟ್ಟಿರುವ ಘಟನೆ ವಿವಾದಕ್ಕೆ ಕಾರಣವಾಗಿದೆ.
ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಮಡೆನೂರು ಪ್ರಾಥಮಿಕ ಶಾಲೆಯ ಶಿಕ್ಷಕ ಜೆ.ಆರ್. ಮಂಜುನಾಥ್ ಅವರು ಏಪ್ರಿಲ್ 12ರಂದು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ವಾಪಾಸ್ ಪಡೆಯಲು ಏಪ್ರಿಲ್ 14 ಕೊನೆಯ ದಿನವಾಗಿದ್ದರೂ, ಅವರು ನಾಮಪತ್ರ ಹಿಂಪಡೆಯದೆ ಇದ್ದರೂ ಅಂತಿಮ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರು ಕಾಣಿಸದೇ ಇರುವುದು ಅನುಮಾನಗಳಿಗೆ ಕಾರಣವಾಗಿದೆ.

ಈ ಕುರಿತು ಚುನಾವಣಾಧಿಕಾರಿಗಳನ್ನು ಪ್ರಶ್ನಿಸಿದಾಗ, “ನಿಮ್ಮ ಸಹಿಯನ್ನು ಹಾಕಿ ಮತ್ತೊಬ್ಬರು ನಾಮಪತ್ರ ವಾಪಾಸ್ ಪಡೆದಿದ್ದಾರೆ” ಎಂಬ ಸ್ಪಷ್ಟತೆಯಿಲ್ಲದ ಉತ್ತರ ನೀಡಿರುವುದಾಗಿ ಮಂಜುನಾಥ್ ಆರೋಪಿಸಿದ್ದಾರೆ.

ಈ ನಡೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಧಕ್ಕೆ ತರುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 19ರಂದು ಚುನಾವಣೆ ನಿಗದಿಯಾಗಿರುವ ಹಿನ್ನೆಲೆ, ತಕ್ಷಣ ನ್ಯಾಯ ಒದಗಿಸಿ ತನ್ನ ಹೆಸರನ್ನು ಅಂತಿಮ ಪಟ್ಟಿಯಲ್ಲಿ ಸೇರಿಸುವಂತೆ ಅವರು ಒತ್ತಾಯಿಸಿದ್ದಾರೆ.
