ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದಲ್ಲಿ 09-04-2026 ರಿಂದ 11-04-2026 ರ ವರಗೆ ರಂಗದ ಹಬ್ಬವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಮರೆಯಾಗುತ್ತಿರುವ ಜನಪದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ ನಡೆಸಿದ ಈ ಹಬ್ಬವು ಜನಪದ ಕಲೆಗೆ ಸಾಕ್ಷಿಯಾಯಿತು .
ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ಹಬ್ಬದ ಪ್ರಯುಕ್ತ ಗ್ರಾಮದ ರಸ್ತೆಗಳು ಹಾಗೂ ದೇವಸ್ಥಾನಗಳನ್ನು ವಿಶೇಷವಾಗಿ ಶೃಂಗರಿಸಲಾಗಿತ್ತು. ಗ್ರಾಮದ ಎಲ್ಲಾ ದೇವಸ್ಥಾನಗಳಿಗೆ ಆಕರ್ಷಕ ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ಪ್ರಮುಖವಾಗಿ ಗ್ರಾಮದೇವತೆಗಳಾದ ದೇವಮ್ಮ ಮತ್ತು ಮನೆಯಮ್ಮ, ಲಕ್ಷೀದೇವಮ್ಮ, ಮಾರಮ್ಮ, ಆಂಜನೇಯ ಸ್ವಾಮಿ, ಭೈರವೇಶ್ವ, ನಾಗರ ಕಲ್ಲು, ಮಾಸ್ತಮ್ಮ, ದೇವರುಗಳಿಗೆ ವಿಶೇಷ ಪೂಜೆಗಳನ್ನು ನೆರವೇರಿಸುವ ಮೂಲಕ ಭಕ್ತರು ಭಕ್ತಿ ಸಮರ್ಪಿಸಿದರು.
ಈ ರಂಗದ ಹಬ್ಬವು ಕೇವಲ ಗುಡ್ಡೇನಹಳ್ಳಿಗೆ ಸೀಮಿತವಾಗದೆ, ನೆರೆಹೊರೆಯ ಗ್ರಾಮಗಳಾದ ಅರೆಬೋಪ್ಪನಹಳ್ಳಿ ಮತ್ತು ಬೆಲದಕೆರೆ ಗ್ರಾಮಸ್ಥರ ಪಾಲ್ಗೊಳ್ಳುವಿಕೆಯಿಂದ ಕಳೆಗಟ್ಟಿತ್ತು. ಮನಸೂರೆಗೊಂಡ ರಂಗ ಕುಣಿತ, ದೇವರ ಗುಡ್ಡ ಕುಣಿತ, ಕೋಲಾಟ, ಹಸಿರು ಬಂಡಿ, ಕನ್ನಾಕಡಿ, ಇಂತಹ ಕಾರ್ಯಕ್ರಮವನ್ನು ನೆಡೆಸಲಾಯಿತು. ಹಬ್ಬದ ಪ್ರಮುಖ ಆಕರ್ಷಣೆಯಾದ ‘ರಂಗ ಕುಣಿತ’ ಎಲ್ಲರ ಗಮನ ಸೆಳೆಯಿತು.
ಯುವಕರು ಮತ್ತು ಹಿರಿಯರು ಸಂಪ್ರದಾಯಬದ್ಧವಾಗಿ ರಂಗ ಕುಣಿಯುವ ಮೂಲಕ ಸಂಭ್ರಮಿಸಿದರು. ನಶಿಸಿ ಹೋಗುತ್ತಿರುವ ಇಂತಹ ಜಾನಪದ ಕಲೆಗಳನ್ನು ಜೀವಂತವಾಗಿರಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ನೋಡುಗರಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿತು.
”ನಮ್ಮ ಹಿರಿಯರು ಬೆಳೆಸಿಕೊಂಡು ಬಂದ ಇಂತಹ ಗ್ರಾಮೀಣ ಕಲೆಗಳು ಇಂದು ನಶಿಸಿ ಹೋಗುತ್ತಿವೆ. ಇವುಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಇದೆ ಸಂದರ್ಭದಲ್ಲಿ ಗುಡ್ಡೇನಹಳ್ಳಿ ಗ್ರಾಮದ ಹಿರಿಯರು, ಯುವಕರು, ಗ್ರಾಮಸ್ಥರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
- ಶ್ರೀನಿವಾಸ್ ಆರ್.
