ಕೊರಟಗೆರೆ: “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂಬ ನಾಣ್ಣುಡಿಯನ್ನು ಹೊಳವನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಪುಣ್ಯಶ್ರೀ ನಿಜಗೊಳಿಸಿದ್ದಾಳೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 580 ಅಂಕಗಳನ್ನು ಗಳಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುವ ಪುಣ್ಯಶ್ರೀ, ಶಾಲೆಗೆ ಹಾಗೂ ಪೋಷಕರಿಗೆ ಹೆಮ್ಮೆ ತಂದಿದ್ದಾಳೆ.
ಪುಣ್ಯಶ್ರೀಯ ಸಾಧನೆಯ ಹಿಂದೆ ಬಡತನದ ಹಾದಿಯ ಕಥೆಯಿದೆ. ತಂದೆ ಕೂಲಿ ಕೆಲಸ ಮಾಡುತ್ತಿದ್ದು, ತಾಯಿ ಆಶಾ ಕಾರ್ಯಕರ್ತೆಯಾಗಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ದಿನನಿತ್ಯದ ಕಷ್ಟಗಳ ನಡುವೆಯೂ ತಮ್ಮ ಇಬ್ಬರು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಪೋಷಕರ ಕನಸನ್ನು ಅರಿತ ಪುಣ್ಯಶ್ರೀ, ಶ್ರದ್ಧೆಯಿಂದ ಅಭ್ಯಾಸ ಮಾಡಿ ಈ ಸಾಧನೆ ಮಾಡಿದ್ದಾಳೆ.
ಓದಿನ ಮೇಲೆ ಅಪಾರ ಆಸಕ್ತಿ ಹೊಂದಿರುವ ಆಕೆ ಕೇವಲ ಪರೀಕ್ಷೆಗೆ ಸೀಮಿತವಾಗದೆ, ವಿಷಯದ ಮೇಲಿನ ಅಭಿರುಚಿಯಿಂದಲೇ ಅಭ್ಯಾಸ ಮಾಡುತ್ತಿದ್ದಳು. ಮನೆಯ ಪರಿಸ್ಥಿತಿಯನ್ನು ಮನಗಂಡು ಪೋಷಕರ ಶ್ರಮಕ್ಕೆ ಬೆಲೆ ತರುವ ಛಲದಿಂದ ಮುಂದೆ ಬಂದಿರುವುದು ವಿಶೇಷವಾಗಿದೆ. ಆಕೆಯ ಸಾಧನೆ ಗ್ರಾಮದಲ್ಲಿನ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು ಮಾದರಿಯಾಗಿದೆ.
ಮಗಳ ಸಾಧನೆ ಕುರಿತು ಸಂತಸ ವ್ಯಕ್ತಪಡಿಸಿದ ತಾಯಿ, “ಕಷ್ಟಪಟ್ಟು ಓದದೆ, ಇಷ್ಟಪಟ್ಟು ಓದಿದ ಪರಿಣಾಮವೇ ಈ ಸಾಧನೆ. ನಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗಿದೆ. ಎಲ್ಲ ಮಕ್ಕಳು ಕೂಡ ಓದಿನಲ್ಲಿ ಆಸಕ್ತಿ ತೋರಿಸಿ ಪೋಷಕರ ಕನಸುಗಳನ್ನು ನನಸಾಗಿಸಲಿ” ಎಂದು ಆಶಿಸಿದರು.
ಪುಣ್ಯಶ್ರೀ ಮುಂದಿನ ವಿದ್ಯಾಭ್ಯಾಸದಲ್ಲಿಯೂ ಇದೇ ರೀತಿಯ ಸಾಧನೆ ಮಾಡಿ, ಉತ್ತಮ ಪ್ರಜೆಯಾಗಿ ಬೆಳೆಯಲಿ ಎಂದು ಶಿಕ್ಷಕರು ಹಾಗೂ ಪೋಷಕರು ಶುಭ ಹಾರೈಸಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ
