ಕೆ.ಆರ್.ಪೇಟೆ, ಜು.15: ಪಟ್ಟಣದಲ್ಲಿರುವ ಹೇಮಾವತಿ ಜಲಾಶಯ ಯೋಜನೆಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಪ್ರಧಾನ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಶೃಂಗ ಮಹಾಮಂಡಳಕ್ಕೆ ರಾಜ್ಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಆರ್.ಎ. ನಾಗಣ್ಣ ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿರುವ ಹೆಚ್.ಸಿ. ಚೌಡೇಗೌಡ, ಕೆ.ಎಲ್. ದೊಡ್ಡಲಿಂಗೇಗೌಡ ಮತ್ತು ಟಿ.ಪಿ. ಕುಮಾರಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ರಾಜ್ಯ ಉಪಾಧ್ಯಕ್ಷ ಆರ್.ಎ. ನಾಗಣ್ಣ, ಕರ್ನಾಟಕ ರಾಜ್ಯದ ಎಲ್ಲಾ ಅಣೆಕಟ್ಟೆಗಳ ನೀರು ಬಳಕೆದಾರರ ಸಹಕಾರ ಸಂಘಗಳ ಶೃಂಗ ಮಹಾಮಂಡಳದ ಅಧ್ಯಕ್ಷರಾಗಿ ರಾಜ್ಯದ ಭಾರೀ ನೀರಾವರಿ ಸಚಿವರು ಕಾರ್ಯನಿರ್ವಹಿಸುವ ಪದ್ಧತಿಯಿದ್ದು, ಪ್ರಸ್ತುತ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.
ತಮ್ಮನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಶೃಂಗ ಮಹಾಮಂಡಳದ ನಿರ್ದೇಶಕರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಭಾರೀ ನೀರಾವರಿ ಸಚಿವ ರಾಮಲಿಂಗಾರೆಡ್ಡಿ, ಅಧಿಕಾರಿಗಳು ಹಾಗೂ ಇಂಜಿನಿಯರ್ಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು, ಅಧಿಕಾರದ ಅವಧಿಯಲ್ಲಿ ರಾಜ್ಯದ ಎಲ್ಲಾ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳು ಮತ್ತು ಅನುದಾನ ದೊರಕಿಸುವ ಮೂಲಕ ಕಟ್ಟಕಡೆಯ ರೈತನಿಗೂ ನೀರಾವರಿ ಸೌಲಭ್ಯ ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.
ಸರ್ಕಾರ ಮತ್ತು ನೀರು ಬಳಕೆದಾರರ ಮಹಾಮಂಡಳಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿ, ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರುವುದು ಹಾಗೂ ರಾಜ್ಯದ ವಿವಿಧ ನೀರಾವರಿ ಯೋಜನೆಗಳ ವ್ಯಾಪ್ತಿಯಲ್ಲಿರುವ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಒಗ್ಗೂಡಿಸಿ ಅವುಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ರೈತರಿಗೆ ಸಮರ್ಪಕವಾಗಿ ನೀರು ಹಂಚಿಕೆ ಆಗುವಂತೆ ನೋಡಿಕೊಳ್ಳುವುದು, ನೀರಾವರಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಸಂಘಗಳ ಸಾಮರ್ಥ್ಯ ವೃದ್ಧಿಗೆ ಶೃಂಗ ಮಹಾಮಂಡಳದ ಎಲ್ಲಾ ಪದಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವುದಾಗಿ ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹಾರಂಗಿ, ಕೆ.ಆರ್.ಎಸ್., ಕಬಿನಿ ಹಾಗೂ ಹೇಮಾವತಿ ಜಲಾಶಯ ಯೋಜನೆಗಳ ಮಹಾಮಂಡಳಗಳ ಸಿಇಒಗಳು, ವಿವಿಧ ಅಧಿಕಾರಿಗಳು, ನಿರ್ದೇಶಕರು, ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
