ಕೆ.ಆರ್.ಪೇಟೆ: ಕರ್ನಾಟಕ ರತ್ನ, ಕನ್ನಡದ ಸಾರ್ವಭೌಮ ಎಂಬ ಬಿರುದುಗಳಿಗೆ ಭಾಜನರಾಗಿದ್ದ ರಾಜ್ಕುಮಾರ್ ಅವರು ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದು ಡಾ ರಾಜ್ ರಂಗ ಕಲಾ ವೇದಿಕೆ ಅಧ್ಯಕ್ಷ ರಾಗಿಮುದ್ದನಹಳ್ಳಿ ಕೆ.ದೇವರಾಜು ತಿಳಿಸಿದರು.
ಪಟ್ಟಣದ ಡಾ.ರಾಜ್ ರಂಗ ಕಲಾ ವೇದಿಕೆ ವತಿಯಿಂದ ಸಂಘದ ಕಚೇರಿಯಲ್ಲಿ ದಿ:ಡಾ ರಾಜ್ ಕುಮಾರ್ ಅವರ 97ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಏರ್ಪಡಿಸಿದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ ಮಾತನಾಡಿದರು.ಕನ್ನಡಿಗರ ಪಾಲಿಗೆ ಕೇವಲ ಡಾ ರಾಜ್ ಕುಮಾರ್ ನಟ ಮಾತ್ರವಲ್ಲ.ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ. ಕರ್ನಾಟಕದ ಅಭಿಮಾನಿಗಳ ಪಾಲಿಗೆ ಮನೆ ದೇವರು ಎನ್ನುವ ನಿಟ್ಟಿನಲ್ಲಿ ಅಭಿಮಾನಿ ಪೂಜ್ಯ ಭಾವನೆಯಲ್ಲಿ ಇದ್ದಾರೆ.ಅವರಲ್ಲಿದ್ದ ಸರಳತೆ, ಮುಗ್ಧತೆ, ಅವರ ಒಳ್ಳೆಯತನ ಹೀಗೆ ಪಟ್ಟಿ ಉದ್ದ ಸಾಗುತ್ತದೆ.ಕನ್ನಡ ಕಲೆ, ಸಾಹಿತ್ಯಕ್ಕೆ ಕೀರ್ತಿಯನ್ನು ತಂದುಕೊಟ್ಟ ಶ್ರೇಯಸ್ಸು ರಾಜ್ಕುಮಾರ್ ಅವರಿಗೆ ಸಲ್ಲುತ್ತದೆ. ಅವರು ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪೌರಾಣಿಕ ಹಾಗೂ ಐತಿಹಾಸಿಕ ಪಾತ್ರಗಳಿಗೆ ಜೀವತುಂಬಿದ್ದಾರೆ. ಗೋಕಾಕ್ ಚಳವಳಿಯಲ್ಲಿ ಭಾಗಿಯಾಗುವ ಮೂಲಕ ಕನ್ನಡಿಗರ ಭಾಷಾಭಿಮಾನವನ್ನು ಬಡಿದೆಬ್ಬಿಸಿದ್ದರು ಎಂದು ಡಾ.ರಾಜ್ ಕುಮಾರ್ ಅವರ ಬಗ್ಗೆ ದೇವರಾಜು ಗುಣಗಾನ ನಡೆಸಿದರು.
ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿದ ಅಭಿಮಾನಿಗಳು, ಕೇಕ್ ಕತ್ತರಿಸಿ, ಸಿಹಿಹಂಚಿ, ಪಟಾಕಿ ಸಿಡಿಸುವ ಮೂಲಕ ಡಾ ರಾಜ್ ಕುಮಾರ್ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಡಾ ರಾಜ್ ರಂಗ ಕಲಾ ವೇದಿಕೆಯ ಗೌರವಧ್ಯಕ್ಷ ಡ್ರಾಮಾ ಮಾಸ್ಟರ್ ಮಂಜುನಾಥ್,ಉಪಾಧ್ಯಕ್ಷ ಸಣ್ಣತಮ್ಮೆಗೌಡ,ಕಾರ್ಯದರ್ಶಿ ಕೆ.ಎಸ್ ದೇವರಾಜು, ಹಿರಿಯ ಕಲಾವಿದರಾದ ಹರಿಹರಪುರ ಮಾದೇವೇಗೌಡ,ರಾಜು ಎಲ್.ಡಿ, ಯೊಗೇಂದ್ರ, ಚಂದ್ರೆಗೌಡ, ಸುರೇಶ್ ಹರಿಜನ್,ಲಿಂಗಾಪುರ ಸತೀಶ್,ಪತ್ರಕರ್ತ ಕಲಾವಿದ ಹೊಸಹೊಳಲು ರಘು,ರವಿ, ಪೊಲೀಸ್ ಜಯರಾಮ್, ರಮೇಶ್, ಆಟೋ ಆನಂದ್,ಅಕ್ಕಿಹೆಬ್ಬಾಳು ಲೋಕೇಶ್, ಸೇರಿದಂತೆ ಕಲಾವಿದರು ಪಾಲ್ಗೊಂಡಿದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
