ರಾಮನಾಥಪುರ : ನಮ್ಮ ಪಾರಂಪರಿಕ ಸಂಸ್ಕೃತಿಯನ್ನು ಸಾರುವ ದುರ್ಗ ನಮಸ್ಕಾರದಂತಹ ಧಾರ್ಮಿಕ ಆಚರಣೆಗಳು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ, ಪ್ರತಿನಿತ್ಯದ ಜೀವನದಲ್ಲಿ ಕೆಟ್ಟದ್ದನ್ನು ದೂರ ಮಾಡಿ ಒಳಿತನ್ನು ಅಳವಡಿಸಿಕೊಳ್ಳಲು ಪ್ರೇರಣೆಯಾಗಬೇಕು ಎಂದು ರಾಮನಾಥಪುರದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ತಂತ್ರಿಗಳಾದ ಭಾರತೀ ರಮಣ ಆಚಾರ್ಯ ತಿಳಿಸಿದರು.
ರಾಮನಾಥಪುರದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದುರ್ಗ ನಮಸ್ಕಾರ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಹಾಮಂಗಳಾರತಿ ಬಳಿಕ ಪ್ರವಚನ ನೀಡಿದ ಅವರು, ಜೀವನದಲ್ಲಿ ಎದುರಾಗುವ ಸಂಕಷ್ಟಗಳ ನಿವಾರಣೆಗೆ ದೈವಭಕ್ತಿಯ ಮೇಲೆ ನಂಬಿಕೆ ಇರಿಸಿಕೊಳ್ಳುವುದು ಅಗತ್ಯವಾಗಿದೆ. ಭಗವಂತನನ್ನು ಪ್ರತಿಕ್ಷಣವೂ ಆರಾಧಿಸುತ್ತಾ ಧಾರ್ಮಿಕ ಹಾಗೂ ಸಾತ್ವಿಕ ಜೀವನ ನಡೆಸಬೇಕು ಎಂದು ಹೇಳಿದರು.
ಭಕ್ತರಿಗೆ ಪ್ರತಿನಿತ್ಯ ಅನ್ನದಾಸೋಹ
ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಆಗಮಿಸುವ ಭಕ್ತರಿಗಾಗಿ ಪ್ರತಿನಿತ್ಯ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಾಲಯದಲ್ಲಿ ಮಧ್ಯಾಹ್ನ ಮಹಾಪೂಜೆ ಮುಕ್ತಾಯವಾದ ಬಳಿಕ ಆಗಮಿಸುವ ಎಲ್ಲ ಭಕ್ತರಿಗೆ ಮಧ್ಯಾಹ್ನ 2 ಗಂಟೆಯವರೆಗೆ ಅನ್ನದಾಸೋಹ ನೀಡಲಾಗುತ್ತಿದೆ.
ದೇವಾಲಯದಲ್ಲಿ ನಡೆಯುವ ವಿವಿಧ ಸೇವೆಗಳು ಹಾಗೂ ಕಾರ್ಯಕ್ರಮಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ದೇವಾಲಯದ ವ್ಯವಸ್ಥಾಪಕರಾದ ವೇ. ಸೋಮಶೇಖರ್ ಅವರನ್ನು 9964546947 ಅಥವಾ 8660436527 ಸಂಖ್ಯೆಯಲ್ಲಿ ಹಾಗೂ ಸಹಾಯಕ ವ್ಯವಸ್ಥಾಪಕರಾದ ವೇ. ಅಭಿಷೇಕ್ ಅವರನ್ನು 9482033754 ಸಂಖ್ಯೆಯಲ್ಲಿ ಸಂಪರ್ಕಿಸುವಂತೆ ದೇವಾಲಯದ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿದೆ.
ವರದಿ : ಕುಮಾರಸ್ವಾಮಿ ರಾಮನಾಥಪುರ
