ಕೆ.ಆರ್.ಪೇಟೆ,ಏ.24: ಕರ್ನಾಟಕ ರತ್ನ, ಪದ್ಮಭೂಷಣ, ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತರು, ಅಮೇರಿಕಾದ ಅತ್ಯುನ್ನ ಪ್ರಶಸ್ತಿ ಕೆಂಟಕಿ ಕರ್ನಲ್ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ, ವರನಟ ಡಾ.ರಾಜ್ಕುಮಾರ್ ಕನ್ನಡ ಚಿತ್ರರಂಗದ ಅಪರೂಪದ ಕಣ್ಮಣಿಯಾಗಿದ್ದಾರೆ. ಇವರು ನಟಿಸಿದ ಎಲ್ಲಾ ಚಿತ್ರಗಳು ಸದಭಿರುಚಿಯ ಹಾಗೂ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವ ಚಿತ್ರಗಳಾಗಿವೆ ಇವರ ಹೆಸರು ಸೂರ್ಯ-ಚಂದ್ರರು ಇರುವವರೆವಿಗೂ ಶಾಶ್ವತವಾಗಿ ಉಳಿಯುತ್ತದೆ ಎಂದು ತಾಲ್ಲೂಕು ಡಾ.ರಾ ಕಲಾ ಸಂಘದ ಅಧ್ಯಕ್ಷ ಪಿ.ಬಿ.ಮಂಚನಹಳ್ಳಿ ಕುಮಾರ್ ತಿಳಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಡಾ.ರಾಜ್ಕುಮಾರ್ ಕಲಾ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ವತಿಯಿಂದ ದಿ: ಡಾ ರಾಜ್ಕುಮಾರ್ ಅವರ 97ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ರಾಜ್ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ.ರಾಜ್ಕುಮಾರ್ ಅವರು ಪೌರಾಣಿಕ, ಸಾಮಾಜಿಕ, ಐತಿಹಾಸಿಕ ನಾಟಕಗಳು ಹಾಗೂ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ತಾವೊಬ್ಬ ಮೇರು ನಟ ಎಂಬುದನ್ನು ತಮ್ಮ ನಟನೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಪ್ರತಿಯೊಂದು ಪಾತ್ರಗಳಿಗೂ ಜೀವ ತುಂಬುವ ಮೂಲಕ ಸಾಮಾಜಿಕ ಬದಲಾವಣೆಗೆ ಶ್ರಮಸಿದ್ದಾರೆ.

ಇವರ ಬಂಗಾರದ ಮನುಷ್ಯ ಸಿನಿಮಾ ಬಿಡುಗಡೆ ಆದಾಗ ಸಾವಿರಾರು ಮಂದಿ ಸರ್ಕಾರಿ ಉದ್ಯೋಗ ಬಿಟ್ಟು ಕೃಷಿ ಕಡೆಗೆ ಒಲವು ತೋರಿಸುವ ಮೂಲಕ ಪ್ರಗತಿಪರ ರೈತರಾಗಿ ಹೊರಹೊಮ್ಮಿದ್ದು ಇತಿಹಾಸವಾಗಿ ಉಳಿದಿದೆ. ಸಾವಿರಾರು ನಾಟಕಗಳು, ಸುಮಾರು 206ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಯಾವುದೇ ಪಾತ್ರಕ್ಕೂ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಕನ್ನಡ ಭಾಷೆಗೆ ದಕ್ಕೆಯಾದಾಗ ನಾಡಿನ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ನಡೆಸಿದ ಗೋಕಾಕ್ ಚಳವಳಿಯಲ್ಲಿ ಭಾಗಿಯಾಗುವ ಮೂಲಕ ಕನ್ನಡಿಗರನ್ನು ಜಾಗೃತಗೊಳಿಸುವ ಮೂಲಕ ತಮ್ಮಲ್ಲಿನ ಭಾಷಾಭಿಮಾನವನ್ನು ಮರೆದಿದ್ದರು. ಇಂತಹ ಅಪರೂಪದ ನಟ ಭಾರತೀಯ ಚಿತ್ರರಂಗದಲ್ಲಿಯೂ ಸಿಗುವುದಿಲ್ಲ ಹಾಗಾಗಿ ಡಾ.ರಾಜ್ಕುಮಾರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಇದರಿಂದ ಭಾರತ ರತ್ನ ಪ್ರಶಸ್ತಿಯ ಮೌಲ್ಯ ಇನ್ನೂ ಹೆಚ್ಚಾಗುತ್ತದೆ ಎಂದು ಕುಮಾರ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಾ.ರಾಜ್ಕುಮಾರ್ ಕಲಾ ಸಂಘದ ಗೌರವಾಧ್ಯಕ್ಷ ಶಂಕರೇಗೌಡ, ಉಪಾಧ್ಯಕ್ಷ ಮರಡಹಳ್ಳಿ ನಟರಾಜ್, ತಾಲ್ಲೂಕು ಡಾ.ಪುನೀತ್ರಾಜ್ಕುಮಾರ್ ಸಂಘದ ಅಧ್ಯಕ್ಷ ಕೆ.ಎಲ್.ಮಹೇಶ್, ಹಿರಿಯ ರಂಗಭೂಮಿ ಕಲಾವಿದರಾದ ಕೆ.ಬಿ.ಕಾಳಯ್ಯ, ಹರಿಹರಪುರ ಮಹಾದೇವೇಗೌಡ, ಶಬ್ಬೀರ್ಅಹಮದ್, ಚಿಕ್ಕೋಸಹಳ್ಳಿ ದೇವರಾಜು, ಡ್ರಾಮ ಮಾಸ್ಟರ್ ವಿಷಕಂಠ, ಹೊಸಹೊಳಲು ದೇವರಾಜ್, ಸುರೇಶ್ ಹರಿಜನ ಸೇರಿದಂತೆ ಹಲವಾರು ಕಲಾವಿದರು ಭಾಗವಹಿಸಿ ಡಾ.ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸಿದರು.
– ಶ್ರೀನಿವಾಸ್ ಆರ್
