ಕೊರಟಗೆರೆ :- ತಾಲ್ಲೂಕಿನ ಗಡಿಭಾಗದಲ್ಲಿರುವ ಕಾಶಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಅಭಿವೃದ್ಧಿಯಿಂದ ವಂಚಿತವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಶಾಲೆಯ ಮೂಲಭೂತ ಸೌಕರ್ಯಗಳ ಕೊರತೆ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯನ್ನುಂಟು ಮಾಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಶಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಸುಮಾರು 78ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಶಾಲೆಗೆ ಅಗತ್ಯವಾದ ಮೂಲಸೌಕರ್ಯಗಳ ಕೊರತೆ, ಮಳೆಗಾಲದಲ್ಲಿ ಶಾಲಾ ಆವರಣ ಹಾಗೂ ಕೊಠಡಿಗಳಿಗೆ ನೀರು ನುಗ್ಗುವ ಸಮಸ್ಯೆ ಮತ್ತು ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಚರಂಡಿ ನೀರು ನೇರವಾಗಿ ಶಾಲೆಗೆ ಹರಿದುಬರುವ ಪರಿಸ್ಥಿತಿ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರತಿ ವರ್ಷ ಮಳೆಗಾಲ ಆರಂಭವಾದಾಗ ಶಾಲಾ ಆವರಣ ಜಲಾವೃತವಾಗುತ್ತಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಶಾಲೆಗೆ ಸಮರ್ಪಕ ಕಾಂಪೌಂಡ್ ವ್ಯವಸ್ಥೆಯೂ ಇಲ್ಲದ ಕಾರಣ ಭದ್ರತೆ ಪ್ರಶ್ನಾರ್ಹವಾಗಿದೆ.
ಇದಲ್ಲದೆ, ಶಾಲೆಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳ ಕೊರತೆ ಇದ್ದು, ಅಂಗವಿಕಲ ಮಕ್ಕಳಿಗಾಗಿ ನಿರ್ಮಿಸಿರುವ ಶೌಚಾಲಯವನ್ನೇ ಎಲ್ಲ ವಿದ್ಯಾರ್ಥಿಗಳು ಬಳಸುವಂತಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಇದು ವಿದ್ಯಾರ್ಥಿಗಳ ಆರೋಗ್ಯ ಮತ್ತು ಸ್ವಚ್ಛತೆಗೆ ಧಕ್ಕೆಯುಂಟು ಮಾಡುತ್ತಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಗಡಿಭಾಗ ಎಂಬ ಕಾರಣಕ್ಕೆ ನಿರ್ಲಕ್ಷ್ಯ?
“ನಮ್ಮೂರ ಕಾಶಾಪುರ ಸರ್ಕಾರಿ ಶಾಲೆ ಕೊರಟಗೆರೆ ತಾಲ್ಲೂಕಿನ ಗಡಿಭಾಗದಲ್ಲಿರುವ ಕಾರಣಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಲೆಯ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ. ಮಕ್ಕಳಿಗೆ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲ. ಗ್ರಾಮಕ್ಕೆ ಸಮರ್ಪಕ ಬಸ್ ವ್ಯವಸ್ಥೆಯೂ ಇಲ್ಲ,” ಎಂದು ಗ್ರಾಮದ ಯುವಕ ವಿಜಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಇಲಾಖೆಯು ಹಾಗೂ ಅರಸಾಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಶಾಲೆಯ ಸಮಸ್ಯೆಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಗಡಿಭಾಗದಲ್ಲಿದೆ ಎಂಬ ಕಾರಣಕ್ಕೆ ಸರ್ಕಾರಿ ಶಾಲೆಗಳು ಅಭಿವೃದ್ಧಿಯಿಂದ ವಂಚಿತವಾಗಬಾರದು. ಕಾಶಾಪುರ ಶಾಲೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಈಗ ಸ್ಥಳೀಯರ ನಿರೀಕ್ಷೆಯಾಗಿದೆ.
– ಶ್ರೀನಿವಾಸ್ ಕೊರಟಗೆರೆ.
