ಕೊರಟಗೆರೆ, ಜೂನ್ 21: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ, ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠದ 20ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜನಜಾಗೃತಿ ಧರ್ಮ ಸಮಾರಂಭವು ಭಾನುವಾರ ಅತ್ಯಂತ ವೈಭವದಿಂದ ನಡೆಯಿತು.

ಶ್ರೀ ಕ್ಷೇತ್ರ ತಪೋಭೂಮಿ ಸಸ್ಯಸಂಜೀವಿನಿ ನಾಡಿನ ಸಿದ್ಧಪುರುಷರಾದ ಪೂಜ್ಯ ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಧರ್ಮಜಾಗೃತಿ, ಸಾಮೂಹಿಕ ವಿವಾಹ, ದೀಕ್ಷಾ ಕಾರ್ಯಕ್ರಮ, ದಾರೆ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ಕಾರ್ಯಕ್ರಮದ ಅಂಗವಾಗಿ 17 ನವಜೋಡಿಗಳ ಸಾಮೂಹಿಕ ವಿವಾಹ ನೆರವೇರಿದ್ದು, ನವದಂಪತಿಗಳು ಹೊಸ ಜೀವನಕ್ಕೆ ಕಾಲಿಟ್ಟರು. ಶ್ರೀ ಕ್ಷೇತ್ರನಾಥ ಸಿದ್ದೇಶ್ವರ ಸ್ವಾಮಿ, ಶ್ರೀ ಮಹಾಗಣಪತಿ, ಜಗದ್ಗುರು ರೇಣುಕಾಚಾರ್ಯರು ಹಾಗೂ ವೀರಭದ್ರ ಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಗಂಗಾಪೂಜೆ ಸೇರಿದಂತೆ ವಿಶೇಷ ಪೂಜೆಗಳು ನಡೆದವು.

ಭಾನುವಾರ ಬೆಳಿಗ್ಗೆ ಬಸವೇಶ್ವರರ ಬೆಳ್ಳಿ ಪಲ್ಲಕ್ಕಿ ಉತ್ಸವ, ದನಗಳ ಮೆರವಣಿಗೆ ಹಾಗೂ ವೀರಗಾಸೆ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆದವು. ಪುಸ್ತಕ ದಾಸೋಹ ಕಾರ್ಯಕ್ರಮದಲ್ಲಿ ಒಂದು ಪುಸ್ತಕ ತಂದು ಎರಡು ಪುಸ್ತಕಗಳನ್ನು ಪಡೆಯುವ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಭಕ್ತರಿಗೆ ವಿತರಿಸಲಾಯಿತು.
ಸಂಜೀವಿನಿ ಕ್ಷೇತ್ರದಲ್ಲಿ 108 ಅಡಿ ಎತ್ತರದ ಶಿವಲಿಂಗ ಪ್ರತಿಷ್ಠಾಪನೆ ಕುರಿತು ಚಿಂತನೆ ನಡೆಸಲಾಗಿದ್ದು, 150 ಜನರಿಗೆ ಸಾಮೂಹಿಕ ದೀಕ್ಷೆ ನೀಡಲಾಯಿತು.

ಕಾರ್ಯಕ್ರಮವನ್ನು ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಶ್ರೀ ಶ್ರೀ 1008 ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಆಶೀರ್ವಚನ ನೀಡಿದ ಅವರು ಧರ್ಮ, ಸಂಸ್ಕೃತಿ ಮತ್ತು ಸೇವೆಯ ಮಹತ್ವವನ್ನು ವಿವರಿಸಿದರು.
ಸಾಮೂಹಿಕ ವಿವಾಹದ ನವಜೋಡಿಗಳಿಗೆ ಗೌರಿಬಿದನೂರು ಕ್ಷೇತ್ರದ ಶಾಸಕ ಪುಟ್ಟಸ್ವಾಮಿಗೌಡರು ಮಾಂಗಲ್ಯಗಳನ್ನು ವಿತರಿಸಿದರು. ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ್ ವಸ್ತ್ರಗಳನ್ನು ವಿತರಿಸಿದರು. ಶಿರಾ ಶಾಸಕ ಟಿ.ಬಿ. ಜಯಚಂದ್ರ ಮೂಗುತಿಗಳನ್ನು ಹಾಗೂ ತುಮಕೂರು ಶಾಸಕ ಜಿ.ಬಿ. ಜ್ಯೋತಿ ಗಣೇಶ್ ರೈತರಿಗೆ ಸಸಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಲೆರಾಂಪುರ ನರಸಿಂಹಗಿರಿ ಮಠದ ಶ್ರೀಗಳು, ಸಿದ್ದರಬೆಟ್ಟದ ಸ್ವಾಮೀಜಿಗಳ ದೂರದೃಷ್ಟಿ, ದಾಸೋಹ, ಶಿಕ್ಷಣ, ಪರಿಸರ ಸಂರಕ್ಷಣೆ ಹಾಗೂ ರೈತಪರ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಗೋವುಗಳ ವಿತರಣೆ, ಕೆರೆಗಳ ಹೂಳೆತ್ತುವಿಕೆ, ಗಿಡ ನೆಡುವ ಅಭಿಯಾನ ಹಾಗೂ ಬೆಳದಿಂಗಳ ಕೂಟದಂತಹ ಸಾಮಾಜಿಕ ಕಾರ್ಯಕ್ರಮಗಳಿಂದ ಮಠವು ಜನರ ವಿಶ್ವಾಸ ಗಳಿಸಿದೆ ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ ಮಾತನಾಡಿ, ಸಿದ್ದರಬೆಟ್ಟವು ಸಿದ್ಧಪುರುಷರ ಸಂಜೀವಿನಿ ಪರ್ವತದಂತಿರುವ ಪುಣ್ಯಕ್ಷೇತ್ರವಾಗಿದೆ. ಶ್ರೀಗಳ ಮಾರ್ಗದರ್ಶನದಲ್ಲಿ ಸಮಾಜ ಸೇವೆ ನಡೆಸುವುದು ಜೀವನದ ಸಾರ್ಥಕತೆ ಎಂದು ಹೇಳಿದರು.
ಅಲ್ಲದೆ, ಶ್ರೀಮಠದ ಜಾಗದಲ್ಲಿ ಸುಮಾರು ₹1.50 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ (ಸಮುದಾಯ ಭವನ) ನಿರ್ಮಿಸಿ, ಭಕ್ತರಿಗೆ ಉಚಿತ ಸೇವೆ ಒದಗಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು. ಈ ಯೋಜನೆಗೆ ಒಂದು ವರ್ಷದ ಅವಧಿ ನೀಡುವಂತೆ ಶ್ರೀಗಳ ಬಳಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ, ಕಾರದ ಮಠದ ವೀರಬಸವ ಸ್ವಾಮೀಜಿ, ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್, ಮಹಾಲಿಂಗಪ್ಪ, ರುದ್ರೇಶ್, ದರ್ಶನ್, ಆರ್.ಎಸ್. ರಾಜಣ್ಣ, ಮಲ್ಲೇಕಾವು ಸೋಮಣ್ಣ ಸೇರಿದಂತೆ ಅನೇಕ ಗಣ್ಯರು, ಸಮಾಜಸೇವಕರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.
– ವರದಿ: ನರಸಿಂಹಯ್ಯ ಹೊಸಕೋಟೆ
