ಬಾದಾಮಿ, ಜು.24: ಕದಂಬ ಸೈನ್ಯ ಕನ್ನಡ ಸಂಘಟನೆಯ ವತಿಯಿಂದ ಕನ್ನಡ ನಾಡಿನ ಹೆಮ್ಮೆಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಅವರ ಸ್ಮರಣಾರ್ಥ ‘ಇಮ್ಮಡಿ ಪುಲಿಕೇಶಿ ಪ್ರಶಸ್ತಿ ಪ್ರದಾನ ಸಮಾರಂಭ’, ಚಾಲುಕ್ಯ ವರಸಿರಿ ಕೃತಿ ಲೋಕಾರ್ಪಣೆ ಹಾಗೂ ಇಮ್ಮಡಿ ಪುಲಿಕೇಶಿ ಭಾವಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಗಸ್ಟ್ 8ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಬನಶಂಕರಿಯ ಶ್ರೀ ಗಾಯತ್ರಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಬಾದಾಮಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಕನ್ನಡದ ಇತಿಹಾಸ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ 11 ಜಿಲ್ಲೆಗಳ ಪ್ರಶಸ್ತಿ ಪುರಸ್ಕೃತರು ಹಾಗೂ 21 ಜಿಲ್ಲೆಗಳ ಕದಂಬ ಸೈನ್ಯದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಕನ್ನಡದ ಇತಿಹಾಸ, ಚಾಲುಕ್ಯರ ಪರಂಪರೆ ಹಾಗೂ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಅವರ ಸಾಧನೆಗಳನ್ನು ಸ್ಮರಿಸುವ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಾಲುಕ್ಯ ವರಸಿರಿ ಕೃತಿಯನ್ನು ಲೋಕಾರ್ಪಣೆ ಮಾಡುವುದರ ಜೊತೆಗೆ, ಇಮ್ಮಡಿ ಪುಲಿಕೇಶಿ ಭಾವಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಹಾಗೂ ಸನ್ಮಾನ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ವಿನಾಯಕ ಸಂಡೂರ, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಬಾಗಲಕೋಟೆ ಜಿಲ್ಲಾಧ್ಯಕ್ಷ ಶಿವು ನಿಂಗಪ್ಪ ಇಸರಡ್ಡಿ, ವಿಜಯಪುರ ಜಿಲ್ಲಾಧ್ಯಕ್ಷ ಈರಯ್ಯ ಶಾಂತಯ್ಯ ಹಿರೇಮಠ, ಗದಗ ಜಿಲ್ಲೆ ಉಪಾಧ್ಯಕ್ಷ ಗವಿಸಿದ್ದಯ್ಯ ಹಳ್ಳಿಕೇರಿ ಮಠ, ರಾಜ್ಯ ಸಮಿತಿ ಸದಸ್ಯರಾದ ಅಪ್ಪಣ್ಣ ಹುಂಡೇಕಾರ, ಬಸವನಗೌಡ ಪಾಟೀಲ್, ರೈತ ಸೇನಾ ಕರ್ನಾಟಕ ಬಾದಾಮಿ ತಾಲೂಕು ಅಧ್ಯಕ್ಷ ಅಶೋಕ್ ಸಾತನ್ನವರ, ಆನಂದ ಸಂಗಪ್ಪ ಕಾಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
