ಕೊರಟಗೆರೆ: ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಶಾಲೆಗಳ 24 ತಂಡಗಳ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿ ಗಣ್ಯರಿಗೆ ಗೌರವ ಸಲ್ಲಿಸಿದರು.

ತಹಶೀಲ್ದಾರ್ ಮಂಜುನಾಥ್ ಧ್ವಜಾರೋಹಣ ನೆರವೇರಿಸಿ, ಸುಮಾರು 45 ನಿಮಿಷಗಳ ಕಾಲ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು.
‘ಸ್ವಾತಂತ್ರ್ಯವೆಂದರೆ ಕೇವಲ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಪಡೆದ ದಿನವಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ, ಸ್ವಾಭಿಮಾನ ಹಾಗೂ ಜವಾಬ್ದಾರಿಯನ್ನು ನೀಡಿದ ಮಹತ್ವದ ದಿನ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಮತ್ತು ಬಲಿದಾನವನ್ನು ಇಂದಿನ ಯುವಜನತೆ ಸದಾ ಸ್ಮರಿಸಬೇಕು. ದೇಶದ ಏಕತೆ, ಅಖಂಡತೆ ಹಾಗೂ ಸಂವಿಧಾನದ ಆಶಯಗಳನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಹೇಳಿದರು.
‘ಸ್ವಾತಂತ್ರ್ಯ ನಮಗೆ ಸುಲಭವಾಗಿ ದೊರೆತದ್ದಲ್ಲ. ಅನೇಕ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಫಲವಾಗಿ ಇಂದು ನಾವು ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡುತ್ತಿದ್ದೇವೆ. ಕೊರಟಗೆರೆ ಸೇರಿದಂತೆ ತುಮಕೂರು ಜಿಲ್ಲೆಯ ಅನೇಕ ಹೋರಾಟಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಆದರ್ಶಗಳನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.
ಮಕ್ಕಳಿಂದ ದೇಶಭಕ್ತಿ ಗೀತೆ
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಸುಮಾರು 150 ವರ್ಷಗಳ ಇತಿಹಾಸ ಹೊಂದಿರುವ ‘ವಂದೇ ಮಾತರಂ’ ಗೀತೆಯನ್ನು ವಿದ್ಯಾರ್ಥಿಗಳು ಸಾಮೂಹಿಕವಾಗಿ ಹಾಡಿ ದೇಶಭಕ್ತಿಯ ವಾತಾವರಣ ನಿರ್ಮಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕೊರಟಗೆರೆ ತಾಲ್ಲೂಕು ಸೇರಿದಂತೆ ತುಮಕೂರು ಜಿಲ್ಲೆಯ ಅನೇಕ ಮಹನೀಯರು ಸಲ್ಲಿಸಿದ ತ್ಯಾಗ ಮತ್ತು ಬಲಿದಾನವನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು. ತ್ರಿವರ್ಣ ಧ್ವಜ, ದೇಶಭಕ್ತಿ ಘೋಷಣೆಗಳು ಹಾಗೂ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನದೊಂದಿಗೆ ಕೊರಟಗೆರೆಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ನಡೆಯಿತು.
ವರದಿ: ನರಸಿಂಹಯ್ಯ. ಹೊಸಕೋಟಿ
