ಕೊರಟಗೆರೆ:- ತಾಲ್ಲೂಕಿನ ಹೂಲೀಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂಲೀಕುಂಟೆ ಗ್ರಾಮದ ವನ ಧನ ವಿಕಾಸ ಕೇಂದ್ರದಲ್ಲಿ ವನಧನ ವಿಕಾಸ ಸದಸ್ಯರಿಗೆ ಶೇಂಗಾ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶೇಂಗಾ ಬೆಳೆ ಆಧಾರಿತ ಉತ್ಪನ್ನಗಳ ಸಂಸ್ಕರಣೆ, ಗುಣಮಟ್ಟದ ಉತ್ಪನ್ನ ತಯಾರಿಕೆ, ಪ್ಯಾಕಿಂಗ್, ಮಾರುಕಟ್ಟೆ ವ್ಯವಸ್ಥೆ ಹಾಗೂ ಮೌಲ್ಯವರ್ಧನೆಯ ಮೂಲಕ ಹೆಚ್ಚಿನ ಆದಾಯ ಗಳಿಸುವ ಕುರಿತು ಸದಸ್ಯರಿಗೆ ಮಾಹಿತಿ ನೀಡಲಾಯಿತು.
ಗ್ರಾಮೀಣ ಮಹಿಳೆಯರು ಸ್ವಾವಲಂಬಿಗಳಾಗಲು ಹಾಗೂ ಸ್ವ-ಉದ್ಯೋಗ ಅವಕಾಶಗಳನ್ನು ವೃದ್ಧಿಸಿಕೊಳ್ಳಲು ಇಂತಹ ತರಬೇತಿಗಳು ಸಹಕಾರಿಯಾಗಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾಧಿಕಾರಿಗಳಾದ ಮಧುಸೂದನ ಎಸ್ ಅವರು ಸದಸ್ಯರಿಗೆ ವಿಶೇಷವಾಗಿ ಮಾಹಿತಿ ನೀಡಿ ಪ್ರೋತ್ಸಾಹಿಸಿದರು. ಶೇಂಗಾ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಚಟುವಟಿಕೆಗಳ ಮೂಲಕ ಮಹಿಳಾ ಸಂಘಗಳು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ತರಬೇತುದಾರರಾದ ಸನತ್ ಅವರು ಶೇಂಗಾ ಆಧಾರಿತ ವಿವಿಧ ಉತ್ಪನ್ನಗಳ ತಯಾರಿಕೆ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು. ತರಬೇತಿಯಲ್ಲಿ ಭಾಗವಹಿಸಿದ್ದ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು ಮಾಹಿತಿ ಪಡೆದರು.
ಕಾರ್ಯಕ್ರಮದಲ್ಲಿ ವನಧನ ವಿಕಾಸ ಕೇಂದ್ರದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು, ಎಂಬಿಕೆ, ಎಲ್ಸಿಆರ್ಪಿ ಹಾಗೂ ಟಿಎಂಎಂಯು ಸಿಬ್ಬಂದಿ ಹಾಜರಿದ್ದರು.
– ಶ್ರೀನಿವಾಸ್ ಕೊರಟಗೆರೆ.
