ಕೊರಟಗೆರೆ:– ತಾಲ್ಲೂಕಿನ ಜೆಟ್ಟಿ ಅಗ್ರಹಾರ ಗ್ರಾಮದ ಗ್ರಾಮ ದೇವತೆ ಶ್ರೀ ಬೇವಿನಾಳಮ್ಮ ದೇವಿಯ ಜಲಧಿ ಮಹೋತ್ಸವವು ಸಡಗರ-ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಮುಂಜಾನೆ ದೇವಾಲಯದಲ್ಲಿ ದೇವಿಗೆ ವಿಶೇಷ ಅಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ವಿವಿಧ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಲಾಯಿತು. ಬಳಿಕ ದೇವಿಯ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ನಂತರ ಗ್ರಾಮದ ಕಲ್ಯಾಣಿಯಲ್ಲಿ ಜಲಧಿ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ಹಾಗೂ ಸಾಂಪ್ರದಾಯಿಕವಾಗಿ ನಡೆಸಲಾಯಿತು.

6 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನದಾಸೋಹ
ಬೇವಿನಾಳಮ್ಮ ದೇವಿಯ ಜಲದಿ ಮಹೋತ್ಸವದ ಅಂಗವಾಗಿ ದೇವಿಗೆ ವಿಶೇಷ ನೈವೇದ್ಯ ಸಮರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ಆಗಮಿಸಿದ್ದ ಸುಮಾರು ಆರು ಸಾವಿರಕ್ಕೂ ಅಧಿಕ ಭಕ್ತಾದಿಗಳಿಗೆ ಭವ್ಯ ಅನ್ನದಾಸೋಹ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.
ಜಾತ್ರಾ ಮಹೋತ್ಸವಕ್ಕೆ ಜೆಟ್ಟಿ ಅಗ್ರಹಾರ ಸೇರಿದಂತೆ ಸುತ್ತಮುತ್ತಲಿನ ಏಳು ಗ್ರಾಮಗಳ ಭಕ್ತರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತ ಸಾಗರ ಹರಿದುಬಂದು, ದೇವಿಯ ದರ್ಶನ ಪಡೆದು ಪುನೀತರಾದರು.
ಈ ಧಾರ್ಮಿಕ ಮಹೋತ್ಸವದ ಯಶಸ್ಸಿನ ಹಿಂದೆ ಗ್ರಾಮದ ಮುಖಂಡರಾದ ತಿಮ್ಮರಾಜು, ಮಧುಸೂದನ್, ನಾಗರಾಜು, ನಿತಿನ್, ನಿರಂಜನ್, ಮಂಜುನಾಥ್, ಸಿದ್ದಗಂಗಯ್ಯ, ದಯಾನಂದ, ದೇವರಾಜು ಸೇರಿದಂತೆ ಊರಿನ ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಶ್ರಮಿಸಿದರು.
– ಶ್ರೀನಿವಾಸ್ ಕೊರಟಗೆರೆ.
