ಕೊರಟಗೆರೆ:- ಆಧುನಿಕತೆಯ ಅಬ್ಬರದ ನಡುವೆಯೂ ಗ್ರಾಮೀಣ ಭಾಗದಲ್ಲಿ ಪೌರಾಣಿಕ ನಾಟಕಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿವೆ ಎನ್ನುವುದಕ್ಕೆ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋಡಗದಾಲ ಗ್ರಾಮದಲ್ಲಿ ನಡೆದ ಅದ್ಧೂರಿ ನಾಟಕ ಪ್ರದರ್ಶನವೇ ಸಾಕ್ಷಿ.

ಗ್ರಾಮದ ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಗ್ರಾಮ ದೇವತೆಗಳಾದ ಶ್ರೀ ಮಾರಿಯಮ್ಮ ದೇವಿ, ಶ್ರೀ ಕೊಲ್ಲಾಪುರದಮ್ಮ ದೇವಿ ಹಾಗೂ ಶ್ರೀ ಶೆಟ್ಟಿಹಳ್ಳಿ ಮಾರಿಯಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ‘ಕುರುಕ್ಷೇತ್ರ’ ಅಥವಾ ‘ಭಗವದ್ಗೀತೆ’ ಎಂಬ ಸುಂದರ ಪೌರಾಣಿಕ ನಾಟಕವು ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ನಾಟಕದ ಯಶಸ್ಸಿನಲ್ಲಿ ರಂಗಸಜ್ಜಿಕೆಯ ಪಾತ್ರ ಬಹುಮುಖ್ಯವಾಗಿತ್ತು. ಕೋಡಿಗೆನಹಳ್ಳಿ ನಾಗರಾಜು ಅವರ ‘ಶ್ರೀ ಲಕ್ಷ್ಮಿ ನರಸಿಂಹ ಡ್ರಾಮಾ ಸೀನರಿ’ ಇವರು ಸಿದ್ಧಪಡಿಸಲಾಗಿದ್ದ ಅತ್ಯಾಧುನಿಕ ಹಾಗೂ ಜಗ ಜಗಿಸುವ ರಂಗ ಸಜ್ಜಿಕೆಯಲ್ಲಿ ಬೆಳ್ಳಿ ಕಿರೀಟ ಪುರಸ್ಕೃತ ಹೆಚ್. ಗೋವಿಂದರಾಜು ರವರ ಹಾರ್ಮೋನಿಯಂ ಮತ್ತು ಸಂಗೀತ ನಿರ್ದೇಶನದಲ್ಲಿ ಹಾಗೂ ಅಶ್ವತಪ್ಪ ಡಿ ರವರ ಉಸ್ತುವಾರಿಯಲ್ಲಿ ಮೂಡಿಬಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.

*ಪಾತ್ರಧಾರಿಗಳ ನೈಜ ಅಭಿನಯ*
ನಾಟಕದಲ್ಲಿ ಭಾಗವಹಿಸಿದ್ದ ಎಲ್ಲಾ ನುರಿತ ಪಾತ್ರಧಾರಿಗಳು ತಮ್ಮ ಕಂಚಿನ ಕಂಠದ ಸಂಭಾಷಣೆ ಹಾಗೂ ನೈಜ ಅಭಿನಯದ ಮೂಲಕ ಕಲಾ ಪ್ರೇಮಿಗಳ ಪ್ರಶಂಸೆಗೆ ಪಾತ್ರರಾದರು.
ಪ್ರತಿ ಪಾತ್ರವೂ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.

*ಭೀಮನ ಪಾತ್ರಧಾರಿ ಕಾಂತರಾಜು ಅಭಿಮಾನಿಗಳಿಂದ ಮೆಚ್ಚುಗೆ*
ನಾಟಕದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದ ಭೀಮಸೇನನ ಪಾತ್ರಧಾರಿ ಕಾಂತರಾಜು (ರಾಜಾಹುಲಿ). ಭೀಮನ ಗದಾಯುದ್ಧದ ಸನ್ನಿವೇಶಗಳಲ್ಲಿ ಮತ್ತು ವೀರಾವೇಶದ ಸಂಭಾಷಣೆಗಳಲ್ಲಿ ಅವರ ಅಭಿನಯವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ದ್ರೌಪದಿ ಪಾತ್ರದಲ್ಲಿ ಮಧುಗಿರಿಯ ಜಯಶ್ರೀ ರವರು ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದರು.
ಕಾಂತರಾಜು ಅವರ ಅದ್ಭುತ ನಟನೆಗೆ ಮನಸೋತ ಕಲಾ ಅಭಿಮಾನಿಗಳು, ನಾಟಕ ನಡೆಯುತ್ತಿರುವಾಗಲೇ ವೇದಿಕೆಯ ಮೇಲೆ ಹಾರ ಹಾಕಿ, ಗೌರವಿಸಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.
*ಗಣ್ಯರ ಮೆಚ್ಚುಗೆ ಮತ್ತು ಸನ್ಮಾನ*
ನಾಟಕದ ಯಶಸ್ಸನ್ನು ಕಣ್ತುಂಬಿಕೊಳ್ಳಲು ಅನೇಕ ಗಣ್ಯರು ಭಾಗವಹಿಸಿದ್ದರು. ಜನಸ್ನೇಹಿ ನಿರಾಶ್ರಿತರ ಆಶ್ರಮದ ಯೋಗೀಶ್ ರವರು, ಕರ್ನಾಟಕದ ಪ್ರಪ್ರಥಮ ಮಹಿಳಾ ಅಘೋರಿ ಅಗರ್ಭನಾಥ್ ಭೈರವಿ ಅಮ್ಮನವರು, ಅಂಜನಾದ್ರಿ ಶಕ್ತಿ ಪೀಠದ ಚರಣ್ ಗುರೂಜಿ, ಹೊನ್ನಮಾರನಹಳ್ಳಿ ಶ್ರೀ ಭಗವಾನ್ ಶನೇಶ್ಚರ ಮಠದ ಕುಮಾರ ಸ್ವಾಮಿ ರವರು ಹಾಗೂ ಚಿಂಪುಗಾನಹಳ್ಳಿಯ ಶ್ರೀ ಮಹಾಲಕ್ಷ್ಮಿ ಶಿವ ಆಂಜನೇಯ ಸ್ವಾಮಿ ನವಗ್ರಹ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಲಕ್ಷ್ಮಿ ಪ್ರಸಾದ್ ಅವರು ಭೇಟಿ ನೀಡಿ, ಕಲಾವಿದರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಭೀಮನ ಪಾತ್ರಧಾರಿ ಕಾಂತರಾಜು ಅವರನ್ನು ಸನ್ಮಾನಿಸಿ ಗೌರವಿಸಿದರು.
ಒಂದೇ ಕುಟುಂಬದ ನಾಲ್ಕು ಜನ ಪಾತ್ರಧಾರಿಗಳು ಈ ನಾಟಕದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಶ್ರೀ ಮಹಾಮುನೇಶ್ವರ ಸ್ವಾಮಿ ಪ್ರದಾನ ಅರ್ಚಕರಾದ ದಾಸಪ್ಪನವರು ಶಕುನಿ ಪಾತ್ರದಲ್ಲಿ, ಎರಡನೇ ಮಗ ದುರ್ಯೋಧನ ಪತ್ರದಲ್ಲಿ , ಮೂರನೇ ಮಗ ಪ್ರಚಂಡ ಭೀಮನ ಪಾತ್ರದಲ್ಲಿ ಮತ್ತು ದಾಸಪ್ಪನವರ ಮೊಮ್ಮಗ ಸಾತ್ಯಕಿ ಪತ್ರದಲ್ಲಿ ಅಭಿನಯಿಸಿದ್ದರು .
ಸಾಂಸ್ಕೃತಿಕ ಪರಂಪರೆಯ ಉಳಿವಿನ ಸಂಕೇತ
ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಈ ನಾಟಕ ಪ್ರದರ್ಶನವು ಕೇವಲ ಮನರಂಜನೆಯಾಗಿರದೆ, ನಮ್ಮ ಸಂಸ್ಕೃತಿ ಮತ್ತು ಪೌರಾಣಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನವಾಗಿತ್ತು.
ಗ್ರಾಮದ ಹಿರಿಯರು, ಯುವಕರು ಹಾಗೂ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಕಲಾಭಿಮಾನಿಗಳು ರಾತ್ರಿಯಿಡೀ ನಾಟಕವನ್ನು ವೀಕ್ಷಿಸಿ ಆನಂದಿಸಿದರು.
– ಶ್ರೀನಿವಾಸ್ ಕೊರಟಗೆರೆ
