ಕೊರಟಗೆರೆ, ಜು.20: ಕೊರಟಗೆರೆ ಪಟ್ಟಣದ ರೋಟರಿ ಕ್ಲಬ್ನ 2026–27ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಕಳೆದ ಮೂರು ವರ್ಷಗಳಿಂದ ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ತನ್ನದೇ ಆದ ವೈಶಿಷ್ಟ್ಯತೆಯನ್ನು ಮೂಡಿಸಿರುವ ರೋಟರಿ ಕ್ಲಬ್, ಮುಂದಿನ ದಿನಗಳಲ್ಲಿಯೂ ಸೇವಾ ಪರಂಪರೆಯನ್ನು ಇನ್ನಷ್ಟು ವಿಸ್ತರಿಸುವ ಸಂಕಲ್ಪ ವ್ಯಕ್ತಪಡಿಸಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ನ ನೂತನ ಅಧ್ಯಕ್ಷರಾಗಿ ಡಾ. ನರಸಿಂಹಮೂರ್ತಿ ವಿ.ಕೆ. ಹಾಗೂ ಕಾರ್ಯದರ್ಶಿಯಾಗಿ ಹೊನ್ನೇಶ್ ಪಿ.ಕೆ. ಅವರು ಒಂದು ವರ್ಷದ ಅವಧಿಗೆ ಅಧಿಕಾರ ಸ್ವೀಕರಿಸಿದರು. ರೋಟರಿ ಜಿಲ್ಲೆ 3192ರ ಚುನಾಯಿತ ಜಿಲ್ಲಾ ಪಾಲಕರಾದ ರೊಟೇರಿಯನ್ ವಿನೋದ್ ಕುಮಾರ್ ಬಿ.ಎಸ್. ಅವರು ನೂತನ ಅಧ್ಯಕ್ಷರಿಗೆ ಕಾಲರ್ ಧರಿಸುವ ಮೂಲಕ ಪದಗ್ರಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಯದರ್ಶಿ ರೊಟೇರಿಯನ್ ಪ್ರಸನ್ನಕುಮಾರ್, ವಲಯ (ಜೋನಲ್) ಗವರ್ನರ್ ಶ್ರೀಮತಿ ಪ್ರಮೀಳಾ ಶಿವಕುಮಾರ್, ಸಹಾಯಕ ಗವರ್ನರ್ಗಳಾದ ಸಿ. ನಾಗರಾಜು ಹಾಗೂ ಉಮಾಮಹೇಶ್, ಜಿಲ್ಲಾ ಜಿಒವಿ ನಿರ್ದೇಶಕ ಎಂ.ಜಿ. ಶ್ರೀನಿವಾಸಮೂರ್ತಿ, ವಿವಿಧ ತಾಲ್ಲೂಕುಗಳ ರೋಟರಿ ಕ್ಲಬ್ಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಹಾಗೂ ಗಣ್ಯರು ಭಾಗವಹಿಸಿದ್ದರು.
ನೂತನ ಅಧ್ಯಕ್ಷ ಡಾ. ನರಸಿಂಹಮೂರ್ತಿ ವಿ.ಕೆ. ಮಾತನಾಡಿ, ರೋಟರಿ ಸಂಸ್ಥೆಯ ಸಮಾಜಮುಖಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಉತ್ತಮ ಯೋಜನೆಗಳನ್ನು ಜಾರಿಗೊಳಿಸಲು ಎಲ್ಲ ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿದರು.
ರೋಟರಿ ಜಿಲ್ಲೆ 3192ರ ಜಿಲ್ಲಾ ಪಾಲಕರಾದ ವಿನೋದ್ ಕುಮಾರ್ ಬಿ.ಎಸ್. ಮಾತನಾಡಿ, ಈ ವರ್ಷ ಪರಿಸರ ಸಂರಕ್ಷಣೆ, ಪ್ರಕೃತಿ ಹಾಗೂ ಪ್ರಾಣಿ-ಪಕ್ಷಿಗಳ ಉಳಿವಿಗೆ ವಿಶೇಷ ಆದ್ಯತೆ ನೀಡಲಾಗಿದೆ. ರಾಜ್ಯಾದ್ಯಂತ ವ್ಯಾಪಕವಾಗಿ ಗಿಡಗಳನ್ನು ನೆಡುವುದು ಹಾಗೂ ಬೇಸಿಗೆಯಲ್ಲಿ ಮೂಕ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತಹ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ಭಾಗ್ಯಶ್ರೀ ಅವರಿಗೆ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಿಸಲಾಯಿತು. ಕಾವ್ಯ ಅವರಿಗೆ ಗಾಲಿಕುರ್ಚಿ (ವ್ಹೀಲ್ಚೇರ್) ವಿತರಿಸಲಾಯಿತು. ವಿದ್ಯಾರ್ಥಿನಿಯರಾದ ನವ್ಯ ಮತ್ತು ಸ್ವಾತಿ ಅವರಿಗೆ ಲ್ಯಾಪ್ಟಾಪ್ಗಳನ್ನು ವಿತರಿಸಲಾಯಿತು.
ಅದೇ ವೇಳೆ ಕ್ರೀಡಾ ಕ್ಷೇತ್ರದ ಸಾಧಕರಾದ ಡಾ. ಎಸ್.ಸಿ. ನಾಗನಂದ ಸ್ವಾಮಿ ಅವರಿಗೆ ಕ್ರೀಡಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ “ಜಲ ಸ್ತಂಭನ ಸಾರ್ವಭೌಮ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಮತ್ತೋರ್ವ ಸಾಧಕಿ ಶ್ರೀಮತಿ ವಿಜಯಲಕ್ಷ್ಮಿ ಅವರಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ “ಪಾರಂಪರಿಕ ಕಲಾರತ್ನ ಪ್ರಶಸ್ತಿ” ಪ್ರದಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಡಿ.ಟಿ. ಶ್ರೀನಿವಾಸಮೂರ್ತಿ, ನಿಕಟ ಪೂರ್ವ ಅಧ್ಯಕ್ಷ ಮಂಜುನಾಥ್ ಎ.ಜಿ., ನಿರ್ದೇಶಕರಾದ ನಾಗೇಂದ್ರ ಎಚ್.ಎನ್., ಚೇತನ್ (ದಾಸರಹಳ್ಳಿ), ನಂದನ್ ಡಿ.ಎಸ್., ಎನ್. ನಾರಾಯಣಸ್ವಾಮಿ, ಹನುಮಂತರಾಯಪ್ಪ, ಪ್ರೇಮ್ ಕುಮಾರ್, ಗಂಗಾಧರ್ ಎಚ್.ಆರ್., ಸುರೇಶ್, ಲಕ್ಷ್ಮಮ್ಮ, ವಿ.ಎನ್. ಮೂರ್ತಿ, ಸಂಕೇತ್, ಸರಸ್ವತಮ್ಮ, ರಾಮಕೃಷ್ಣ, ಶಂಕರ್, ಅನಂತ್ ಕುಮಾರ್, ಟಿ.ಜೆ. ಪ್ರಸನ್ನ ಕುಮಾರ್, ಸುಬ್ರಮಣಿ, ಮಧು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
– ವರದಿ: ನರಸಿಂಹಯ್ಯ ಹೊಸಕೋಟೆ
