ಹಾಸನ: ತಾಲೂಕಿನ ಕಟ್ಟಾಯ ಹೋಬಳಿಯ ಕಟ್ಟಾಯ ಬೆಟ್ಟದ ಮೇಲಿರುವ ಶ್ರೀ ಬೇನಪ್ಪ ಗಣಪತಿ ದೇವಸ್ಥಾನದಲ್ಲಿ ಮಳೆಯ ಆಗಮನಕ್ಕಾಗಿ ಸೋಮವಾರ ವಿಶೇಷ ಉಪಹಾರ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆದವು.
ಬೆಳಗ್ಗೆಯಿಂದಲೇ ದೇವರಿಗೆ ಅಭಿಷೇಕ, ವಿಶೇಷ ಪೂಜೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕಟ್ಟಾಯ, ಗಾಣಿಗರ ಕೊಪ್ಪಲು, ಮೂಡಲಕೊಪ್ಪಲು ಹಾಗೂ ಕಲ್ಲಾರೆ ಕೊಪ್ಪಲು ಗ್ರಾಮಗಳ ಮಹಿಳೆಯರು ಮತ್ತು ಪುರುಷರು ಮನೆಗಳಲ್ಲಿ ತಯಾರಿಸಿದ ಮೊಸರನ್ನ, ಚಿತ್ರಾನ್ನ, ಕೇಸರಿಬಾತ್ ಸೇರಿದಂತೆ ವಿವಿಧ ಪ್ರಸಾದಗಳನ್ನು ತಲೆ ಮೇಲೆ ಹೊತ್ತುಕೊಂಡು ಸುಮಾರು ಎರಡರಿಂದ ಮೂರು ಕಿಲೋಮೀಟರ್ ದೂರದ ಬೆಟ್ಟದ ಮೇಲಿರುವ ದೇವಸ್ಥಾನಕ್ಕೆ ಬರಿಗಾಲಿನಲ್ಲಿ ತೆರಳಿದರು.

ದೇವಸ್ಥಾನ ತಲುಪಿದ ಭಕ್ತರು ದೇವಾಲಯದ ಸುತ್ತ ಮೂರು ಪ್ರದಕ್ಷಿಣೆ ಹಾಕಿ, ವಿಶೇಷ ಆಚರಣೆಯ ಭಾಗವಾಗಿ ಕೆಂಡ ಹಾಯುವ ಸಂಪ್ರದಾಯವನ್ನು ನೆರವೇರಿಸಿದರು. ಈ ಆಚರಣೆಯು ಹಲವು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ವಿಶಿಷ್ಟ ಸಂಪ್ರದಾಯವಾಗಿದೆ.
ಬಳಿಕ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ, ತಾವು ತಂದಿದ್ದ ಪ್ರಸಾದವನ್ನು ದೇವಸ್ಥಾನದ ಮುಂಭಾಗದಲ್ಲಿ ಸಮರ್ಪಿಸಿದರು. ಪೂಜಾರಿಗಳು ವಿಶೇಷ ಪೂಜೆ ನೆರವೇರಿಸಿದ ನಂತರ ಗಂಗಾಮತಸ್ಥರು ಹಾಗೂ ವಾದ್ಯಗಾರರಿಗೆ ಮೊದಲು ಪ್ರಸಾದ ವಿತರಣೆ ಮಾಡಲಾಯಿತು. ನಂತರ ಆಗಮಿಸಿದ್ದ ಭಕ್ತರೆಲ್ಲರೂ ಸ್ಥಳದಲ್ಲೇ ಪ್ರಸಾದ ಸ್ವೀಕರಿಸಿದರು.

ಧಾರ್ಮಿಕ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ನಡೆಸಲಾದ ಈ ಕಾರ್ಯಕ್ರಮದಲ್ಲಿ ನಾಲ್ಕು ಗ್ರಾಮಗಳ ಮುಖಂಡರು, ಗ್ರಾಮಸ್ಥರು, ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆಯಾಗಲಿ ಹಾಗೂ ಸಮೃದ್ಧ ಬೆಳೆ ಬರಲಿ ಎಂಬ ಪ್ರಾರ್ಥನೆಯೊಂದಿಗೆ ಪೂಜೆ ನೆರವೇರಿಸಲಾಯಿತು.
– ಶಿವಕುಮಾರ್ ಕಟ್ಟಾಯ.
