ಕೊರಟಗೆರೆ :– ಪಟ್ಟಣದ ರವೀಂದ್ರ ಭಾರತಿ ಪ್ರೌಢಶಾಲೆ ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಮ್ಮೆ ತನ್ನ ಮೇಲುಗೈ ಸಾಧಿಸಿದೆ. ಶಾಲೆಯ ಒಟ್ಟು 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕ ವೃಂದ, ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ. ಫಲಿತಾಂಶದಲ್ಲಿ 29 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, 39 ವಿದ್ಯಾರ್ಥಿಗಳು ಪ್ರಥಮ ದರ್ಜೆ, 9 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ 10 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಶಾಲೆಯ ವಿದ್ಯಾರ್ಥಿ ಹೇಮಂತ್ ಕೆ ಎಂ 609 ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಇತರ ವಿದ್ಯಾರ್ಥಿಗಳಾದ ನಿಧಿ.ಎನ್ (605 ಅಂಕ), ಅನುಷಾ. ಎಂ ಜಿ (598 ಅಂಕ), ವಿವೇಕ್.ಸಿ (595 ಅಂಕ), ಚೇತನ್. ಪಿ (584 ಅಂಕ), ಪ್ರಿಯಾ. ಬಿ ಆರ್ (583 ಅಂಕ) ಶ್ರೀನಿಧಿ (581 ಅಂಕ) ಪಡೆದು ಉತ್ತಮ ಸಾಧನೆ ತೋರಿದ್ದಾರೆ.
ಈ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಪೋಷಕರ ಸಹಕಾರವೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿದ್ಯಾರ್ಥಿಗಳ ಶ್ರಮ, ಶಿಸ್ತುಬದ್ಧ ಅಭ್ಯಾಸ ಮತ್ತು ಶಿಕ್ಷಕರ ಮಾರ್ಗದರ್ಶನದಿಂದ ಈ ಯಶಸ್ಸು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಶಾಲೆಯ ನಿರಂತರ ಉತ್ತಮ ಫಲಿತಾಂಶದಿಂದ ಕೊರಟಗೆರೆ ಪಟ್ಟಣದ ಶಿಕ್ಷಣ ಕ್ಷೇತ್ರದಲ್ಲಿ ರವೀಂದ್ರ ಭಾರತಿ ಪ್ರೌಢಶಾಲೆ ವಿಶೇಷ ಸ್ಥಾನ ಪಡೆದಿದ್ದು, ಮುಂದಿನ ವರ್ಷಗಳಲ್ಲಿಯೂ ಇನ್ನಷ್ಟು ಸಾಧನೆ ಮಾಡುವ ವಿಶ್ವಾಸ ವ್ಯಕ್ತವಾಗಿದೆ.
– ಶ್ರೀನಿವಾಸ್ ಕೊರಟಗೆರೆ
