ಕೊರಟಗೆರೆ:– ಶಿಕ್ಷಣ ಕ್ಷೇತ್ರದಲ್ಲಿ 37 ವರ್ಷಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿ ನಿವೃತ್ತರಾದ ಬುಕ್ಕಪಟ್ಟಣ ಸರ್ಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ಲಕ್ಷ್ಮಿ ಪುತ್ರ ದಂಪತಿಗಳಿಗೆ ಕೊರಟಗೆರೆ ತಾಲ್ಲೂಕು ಎಲ್ಪಿ ಶಿಕ್ಷಕರ ಗೆಳೆಯರ ಬಳಗದ ವತಿಯಿಂದ ಹೃದಯಸ್ಪರ್ಶಿ ಹಾಗೂ ಅದ್ದೂರಿ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.
ಬುಕ್ಕಪಟ್ಟಣ ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಲಕ್ಷ್ಮಿ ಪುತ್ರ ದಂಪತಿಗಳ ಸೇವಾ ಪಯಣವನ್ನು ಸ್ಮರಿಸಿ, ಶಿಕ್ಷಣ ಇಲಾಖೆಯ ವಿವಿಧ ಹಂತಗಳಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಗಣ್ಯರು ಕೊಂಡಾಡಿದರು. ಶಿಕ್ಷಣ ಕ್ಷೇತ್ರದ ಜೊತೆಗೆ ವಿವಿಧ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ, ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿ, ಹಲವು ಹುದ್ದೆಗಳಲ್ಲಿ ಪದಾಧಿಕಾರಿಯಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ಕಾರ್ಯದರ್ಶಿ ಚಿಕ್ಕಪಯ್ಯ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೋಟೆಕಲಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ. ಹನುಮಂತರಾಯಪ್ಪ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಬಿಆರ್ಸಿ ರುದ್ರೇಶ್, ಪದಾಧಿಕಾರಿಗಳಾದ ಹನುಮಂತರಾಯಪ್ಪ, ನರಸಿಂಹರಾಜು ಜೆಎನ್, ಮುಖ್ಯ ಶಿಕ್ಷಕರಾದ ಲಾಲಾನಾಯಕ್, ಗಿರಿರಾಜು, ಜೈಲಕ್ಷ್ಮಮ್ಮ, ಅನುದಾನಿತ ಶಾಲಾ ಜಿಲ್ಲಾ ಅಧ್ಯಕ್ಷ ಧರ್ಮೇಂದ್ರ ಪ್ರಸಾದ್, ಶಿಕ್ಷಣ ಸಂಯೋಜಕ ರಾಜಶೇಖರ್, ಸಿಆರ್ಪಿಗಳಾದ ರಮಾನಂದ್, ಶಿಕ್ಷಕರಾದ ಚಿಕ್ಕಣ್ಣ, ಮೈಲಾರಪ್ಪ, ಗೋವಿಂದಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಲಕ್ಷ್ಮಿ ಪುತ್ರ ರವರಿಗೆ “ಸಮಾಜಮುಖಿ ಶಿಕ್ಷಕ” ಎಂಬ ಗೌರವ ಬಿರುದು ಪ್ರದಾನ ಮಾಡಲಾಯಿತು. ಶಾಲು ಹೊದಿಸಿ, ಫಲಕ ನೀಡಿ, ಹೂಮಾಲೆ ಹಾಕಿ ಸನ್ಮಾನಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಲಕ್ಷ್ಮಿ ಪುತ್ರ, ಶಿಕ್ಷಕ ವೃತ್ತಿ ದೇವರ ಸೇವೆಯಷ್ಟೇ ಪವಿತ್ರವಾದುದು. ವಿದ್ಯಾರ್ಥಿಗಳ ಬದುಕು ರೂಪಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ನನ್ನ ಸೇವೆಯನ್ನು ಸ್ಮರಿಸಿ ಸನ್ಮಾನಿಸಿದ ಶಿಕ್ಷಕರ ಬಳಗಕ್ಕೆ ಸದಾ ಋಣಿ ಎಂದು ಭಾವುಕರಾಗಿ ನುಡಿದರು.
ಕಾರ್ಯಕ್ರಮವು ಶಿಕ್ಷಕರಲ್ಲಿ ಒಗ್ಗಟ್ಟು, ಸೇವಾ ಮನೋಭಾವ ಹಾಗೂ ಹಿರಿಯರನ್ನು ಗೌರವಿಸುವ ಸಂಸ್ಕೃತಿಗೆ ಸಾಕ್ಷಿಯಾದ ವಿಶೇಷ ಕ್ಷಣವಾಗಿ ಮೂಡಿಬಂತು.
– ಶ್ರೀನಿವಾಸ್ ಕೊರಟಗೆರೆ
