ಕೊರಟಗೆರೆ :– ಹಾಲುಮತ ಸಮುದಾಯವು ಶಿಕ್ಷಣ, ಧಾರ್ಮಿಕತೆ ಹಾಗೂ ಸಂಘಟನೆಯ ಮೂಲಕವೇ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ರೇವಣ್ಣಸಿದ್ದೇಶ್ವರ ಕಾಗಿನೆಲೆ ಮಹಾಸಂಸ್ಥಾನ ಮಠದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿಗಳು ಹೇಳಿದರು.
ಕೊರಟಗೆರೆ ತಾಲೂಕಿನ ತೋವಿನಕೆರೆ ಹೋಬಳಿಯ ಚಿಕ್ಕವೆಂಕಟದಾಸೇಗೌಡನಪಾಳ್ಯದಲ್ಲಿ ಭಾನುವಾರ ನಡೆದ ಶ್ರೀ ರೇವಣ್ಣಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಾಲಯದ ಕಳಸ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮಕ್ಕಳು ದೂರದರ್ಶನ ಧಾರಾವಾಹಿಗಳ ವ್ಯಾಮೋಹದಿಂದ ದೂರವಿದ್ದು ವಿದ್ಯಾಭ್ಯಾಸದತ್ತ ಗಮನ ಹರಿಸುವಂತೆ ಪೋಷಕರು ಪ್ರೋತ್ಸಾಹಿಸಬೇಕು ಎಂದರು.
ಸಮುದಾಯ ರಾಜಕೀಯವಾಗಿ ಸದೃಢವಾಗಬೇಕಾದರೆ ಸಂಘಟನೆ ಅತ್ಯಗತ್ಯ. ಮೂಢನಂಬಿಕೆ, ಕಂದಾಚಾರ ಹಾಗೂ ಮಾಟ-ಮಂತ್ರಗಳಂತಹ ಅನಿಷ್ಠ ಪದ್ಧತಿಗಳಿಂದ ದೂರವಿದ್ದು ಧಾರ್ಮಿಕ ಶ್ರದ್ಧೆ ಮತ್ತು ಸತ್ಪ್ರವೃತ್ತಿಯೊಂದಿಗೆ ಬದುಕಬೇಕು ಎಂದು ಸಲಹೆ ನೀಡಿದರು.
ದೇವಾಲಯ ನಿರ್ಮಾಣಕ್ಕಾಗಿ ಜಾಗ ದಾನ ಮಾಡಿರುವ ಸ್ಥಳೀಯರಾದ ಸಿ.ಆರ್. ಭೀಮಣ್ಣ ಅವರ ಸೇವೆಯನ್ನು ಶ್ರೀಗಳು ಶ್ಲಾಘಿಸಿದರು.

ತುಮಕೂರಿನ ರೇವಣ್ಣಸಿದ್ದೇಶ್ವರ ಮಠದ ಶ್ರೀ ಬಿಂದುಶೇಖರ್ ಒಡೆಯರ್ ಮಾತನಾಡಿ, ರೇವಣ್ಣಸಿದ್ದೇಶ್ವರ ದೇವಾಲಯದ ಪ್ರತಿಷ್ಠಾಪನೆ ಸಮುದಾಯದ ಐಕ್ಯತೆಗೆ ಉತ್ತಮ ನಿದರ್ಶನವಾಗಿದೆ. ಸಾವಂತಿಕೆ ಕುಲದ ನೂರಾರು ಕುಟುಂಬಗಳು ಒಗ್ಗೂಡಿ ದೇವಾಲಯ ನಿರ್ಮಾಣಕ್ಕೆ ಕೈಜೋಡಿಸಿರುವುದು ಸಂತಸದ ಸಂಗತಿ ಎಂದರು. ದೇವಾಲಯ ನಿರ್ಮಿಸಿದಷ್ಟೇ ಅಲ್ಲ, ಪ್ರತಿನಿತ್ಯ ಪೂಜೆ-ಪುನಸ್ಕಾರಗಳು ನಿರಂತರವಾಗಿ ನಡೆಯಬೇಕು ಎಂದು ಭಕ್ತರಿಗೆ ಮನವಿ ಮಾಡಿದರು.
ಕಾಳಿದಾಸ ವಿದ್ಯಾವರ್ಧಕ ಸಂಘದ ನಿರ್ದೇಶಕ ಜಿ.ಟಿ. ನಾಗಭೂಷಣ್ ಮಾತನಾಡಿ, ಗ್ರಾಮಸ್ಥರ ಬಹುದಿನಗಳ ಕನಸು ಇಂದು ನನಸಾಗಿದೆ. ಹಲವು ವರ್ಷಗಳಿಂದ ನಿರೀಕ್ಷೆಯಲ್ಲಿದ್ದ ದೇವಾಲಯದ ಪ್ರತಿಷ್ಠಾಪನೆ ಕಾಗಿನೆಲೆ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಿರುವುದು ಸಂತಸದ ವಿಚಾರ ಎಂದರು.
ಸ್ಥಳೀಯ ಮುಖಂಡ ನಟರಾಜು ಮಾತನಾಡಿ, ಗ್ರಾಮಸ್ಥರ ಒಗ್ಗಟ್ಟು ಹಾಗೂ ಧಾರ್ಮಿಕ ಭಾವನೆಯ ಫಲವಾಗಿ ದೇವಾಲಯ ನಿರ್ಮಾಣ ಸಾಧ್ಯವಾಗಿದೆ ಎಂದು ಹೇಳಿದರು.
ನಿವೃತ್ತ ಸಬ್-ರಿಜಿಸ್ಟ್ರಾರ್ ಸಿ.ಆರ್. ಭೀಮಣ್ಣ ದೇವಾಲಯದ ಸಮೀಪ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹಲಸೂರು ರಘು, ರಂಗಧಾಮಯ್ಯ, ಕುಮಾರಸ್ವಾಮಿ, ರಾಜು, ಚಿಕ್ಕಹನುಮಯ್ಯ, ಗುರುಸಿದ್ದಪ್ಪ, ಕಾಳಿದಾಸ ವಿದ್ಯಾರ್ಥಿ ನಿಲಯದ ವ್ಯವಸ್ಥಾಪಕ ಬಸವರಾಜು, ಮಂಜುನಾಥ್, ಭೀಮ್ರಾಜ್, ಪಂಚಾಕ್ಷರಯ್ಯ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಶ್ರೀಗಳಿಗೆ ಭವ್ಯ ಸ್ವಾಗತ
ಕಾಗಿನೆಲೆ ಮಹಾಸಂಸ್ಥಾನ ಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿಗಳಿಗೆ ಗ್ರಾಮಸ್ಥರು ಭವ್ಯ ಮೆರವಣಿಗೆಯ ಮೂಲಕ ಸ್ವಾಗತ ಕೋರಿದರು. ಬಳಿಕ ಗ್ರಾಮದ ಹಲವು ಮನೆಗಳಲ್ಲಿ ಪಾದಪೂಜೆ ಕಾರ್ಯಕ್ರಮಗಳನ್ನು ಆಯೋಜಿಸಿ ಭಕ್ತಿಭಾವದಿಂದ ಗೌರವ ಸಲ್ಲಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಕಾಗಿನೆಲೆ ಮಹಾಸಂಸ್ಥಾನ ಮಠ, ಬೆಂಗಳೂರು ವತಿಯಿಂದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ 90 ಶೇಕಡಾ ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿರುವ ಕುರುಬ (ಹಾಲುಮತ) ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ.
ಅರ್ಹ ವಿದ್ಯಾರ್ಥಿಗಳು ಜುಲೈ 12ರೊಳಗೆ ಅರ್ಜಿ ಸಲ್ಲಿಸುವಂತೆ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿಗಳು ತಿಳಿಸಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ
