ರಾಮನಾಥಪುರ, ಜೂ. 30: ಕನ್ನಡ ಮಠದ ಆಸ್ತಿಯ ಉಳಿವಿಗಾಗಿ ಬೆಟ್ಟದಪುರದ ಕನ್ನಡ ಮಠದ ಶ್ರೀಗಳು ನಡೆಸಿದ ಅವಿರತ ಕಾನೂನು ಹೋರಾಟ ಸ್ಮರಣೀಯವಾಗಿದ್ದು, ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಮಾದಹಳ್ಳಿಯ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಹೇಳಿದರು.
ಬೆಟ್ಟದಪುರದ ಸ್ವತಂತ್ರ ಸಾಲಿಲಾಖ್ಯ ವಿರಕ್ತ ಮಠ ಹಾಗೂ ಕನ್ನಡ ಮಠದ ಆಶ್ರಯದಲ್ಲಿ ನಡೆದ ಶ್ರೀ ಚಿಕ್ಕವೀರ ದೇಶಿಕೇಂದ್ರ ಸ್ವಾಮೀಜಿಗಳವರ 97ನೇ ಗಣಾರಾಧನೆ, ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿಗಳವರ 45ನೇ ಗಣಾರಾಧನೆ ಹಾಗೂ ಕನ್ನಡ ಮಠದ 217ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಠದ ಆಸ್ತಿಯನ್ನು ಉಳಿಸಲು ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿಗಳು ನಡೆಸಿದ ಕಾನೂನು ಹೋರಾಟವನ್ನು ಯಾರೂ ಸುಲಭವಾಗಿ ನಡೆಸಲು ಸಾಧ್ಯವಿರಲಿಲ್ಲ. ಗುರುಗಳು ಸಂಪಾದಿಸುವ ಆಸ್ತಿ ವೈಯಕ್ತಿಕ ಸ್ವತ್ತಲ್ಲ; ಅದು ಭಕ್ತರು ಮತ್ತು ಸಮಾಜದ ಹಿತಕ್ಕಾಗಿ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಮಠದ ಉಳಿವು ಹಾಗೂ ಅದರ ಸಾಮಾಜಿಕ ಕಾರ್ಯಗಳಿಗೆ ಭಕ್ತರು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಗುಮ್ಮಸಂದ್ರ ರುದ್ರಮುನೀಶ್ವರ ಮಠದ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ಮಾತನಾಡಿ, ಈ ಭಾಗದಲ್ಲಿ ಕನ್ನಡ ಮಠವು ವಿಶಿಷ್ಟ ಸ್ಥಾನಮಾನ ಹೊಂದಿದ್ದು, ಭಕ್ತರಿಗೆ ಸ್ವಾಮೀಜಿಗಳೇ ದೊಡ್ಡ ಆಸ್ತಿಯಾಗಿದ್ದಾರೆ. ಮಠಗಳು ಧಾರ್ಮಿಕ ಕಾರ್ಯಗಳ ಜೊತೆಗೆ ರೈತರು, ಕಾರ್ಮಿಕರು ಹಾಗೂ ಬಡವರ ಸೇವೆಯನ್ನೂ ಮಾಡುತ್ತಿವೆ. ಮಠದಿಂದ ಮಕ್ಕಳಿಗೆ ಸಂಸ್ಕಾರ, ವಚನ ಸಾಹಿತ್ಯ ಹಾಗೂ ಮೌಲ್ಯ ಶಿಕ್ಷಣ ನೀಡುವ ಕಾರ್ಯ ಮತ್ತಷ್ಟು ಬಲವಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಅರಮೇರಿ ಕಳಂಚಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿದರು. ಸಾಲಿಲಾಖ್ಯ ಹಾಗೂ ಕನ್ನಡ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶ್ರೀಮಠವು ಹಲವು ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಗುರುಗಳ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿ ಭಕ್ತರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಪಡುವಲು ವಿರಕ್ತಮಠದ ಶ್ರೀ ಮಹದೇವಸ್ವಾಮಿ, ಗುಮ್ಮಸಂದ್ರ ರುದ್ರಮುನೀಶ್ವರ ಮಠದ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ, ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಎಚ್.ಯು. ಶಿವಪ್ಪ, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಎಚ್.ಜಿ. ಪರಮೇಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹೊಲದಪ್ಪ, ನಿರ್ದೇಶಕ ಲೋಕೇಶ್, ಬೆಟ್ಟದಪುರ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಟಿ.ಸಿ. ಶಿವುದೇವಪ್ಪ, ಚಂದ್ರು ಹೊಸಮಠ, ಹಾಸನ ಜಿಲ್ಲಾ ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಭಕ್ತ ಬಳಗದ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಹಾಸನ ಮಹಾಸಭಾ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಬಸವಪಟ್ಟಣ ಮುತ್ತಣ್ಣ ಸೇರಿದಂತೆ ವಿವಿಧ ಮಠಗಳ ಪೂಜ್ಯರು, ಗಣ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.
– ಕುಮಾರಸ್ವಾಮಿ ಎಂ.ಎನ್.
