ಕೊರಟಗೆರೆ: ವಿದ್ಯಾರ್ಥಿಗಳಲ್ಲಿ ಪ್ರತಿಭೆಗೆ ಯಾವುದೇ ಕೊರತೆಯಿಲ್ಲ. ಆದರೆ ಪ್ರಾಮಾಣಿಕತೆ, ಸಂಸ್ಕಾರ, ಮಾನವೀಯತೆ ಹಾಗೂ ಸಾಮಾಜಿಕ ಕಾಳಜಿಯ ಕೊರತೆ ಕಾಣುತ್ತಿದೆ. ಶಿಕ್ಷಣದ ಜತೆಗೆ ಈ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಕೊಡುಗೆ ನೀಡಬೇಕು ಎಂದು ಸಾಹಿತಿ ಹಾಗೂ ದೊಗ್ಗನಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ರಿಜ್ವಾನ್ ಪಾಷಾ ಹೇಳಿದರು.
ತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯದ ಕಲ್ಯಾಣ ಮಂಟಪದಲ್ಲಿ ಶ್ರೀ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 26ನೇ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಾಧನೆಯ ಹಿಂದೆ ತಂದೆ-ತಾಯಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಸಮಾಜದ ಪ್ರೋತ್ಸಾಹ ಅಡಗಿದೆ ಎಂದರು.

ಮಕ್ಕಳನ್ನು ಮತ್ತೊಬ್ಬರೊಂದಿಗೆ ಹೋಲಿಕೆ ಮಾಡದೆ, ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಮುಂದಾಗಬೇಕು. ಇಂದು ದೊರೆತಿರುವ ಪ್ರತಿಭಾ ಪುರಸ್ಕಾರ ಸಾಧನೆಯ ಅಂತ್ಯವಲ್ಲ; ಮುಂದಿನ ದೊಡ್ಡ ಸಾಧನೆಗೆ ಇದು ಮೊದಲ ಹೆಜ್ಜೆಯಾಗಬೇಕು ಎಂದು ಸಲಹೆ ನೀಡಿದರು.
ಸಮಾಜಕ್ಕೆ ಅವಿದ್ಯಾವಂತರಿಗಿಂತ ವಿದ್ಯಾವಂತರಿಂದಲೇ ಹೆಚ್ಚು ಅಪಾಯ ಉಂಟಾಗುವ ಸಂದರ್ಭಗಳಿವೆ. ಆದ್ದರಿಂದ ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಮತ್ತು ನಿರಂತರ ಅಧ್ಯಯನವನ್ನು ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದರು.
ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಕಳೆದ 26 ವರ್ಷಗಳಿಂದ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ. ಪ್ರತಿಭೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೂ ಸೂಕ್ತ ಮಾರ್ಗದರ್ಶನ ನೀಡಿ, ಅವರು ಉನ್ನತ ಶಿಕ್ಷಣ ಪಡೆಯುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ನಡೆಯಬೇಕು ಎಂದು ಹೇಳಿದರು.
*ಪರಿಶ್ರಮವೇ ಯಶಸ್ಸಿನ ಮೆಟ್ಟಿಲು*
ಪ್ರಾಚಾರ್ಯ ರವಿಕುಮಾರ್ ಮಾತನಾಡಿ, ಪರಿಶ್ರಮ ಮತ್ತು ನಿರಂತರ ಅಭ್ಯಾಸದಿಂದ ಏನನ್ನಾದರೂ ಸಾಧಿಸಬಹುದು. ಯಶಸ್ಸು ಯಾರಿಗೂ ಸುಮ್ಮನೆ ದೊರೆಯುವುದಿಲ್ಲ. ನಿರಂತರ ಪರಿಶ್ರಮ, ಆತ್ಮವಿಶ್ವಾಸ ಹಾಗೂ ಸಮಯದ ಸದುಪಯೋಗವೇ ಯಶಸ್ಸಿನ ಮೆಟ್ಟಿಲುಗಳು. ಇಂದು ಪಡೆದಿರುವ ಪ್ರತಿಭಾ ಪುರಸ್ಕಾರವು ವಿದ್ಯಾರ್ಥಿಗಳ ಮುಂದಿನ ಸಾಧನೆಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಾಸುದೇವರಾವ್ ಅವರು, ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳು ಮತ್ತು ಪಿಯು ಕಾಲೇಜುಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಿದರು.
ಶ್ರೀ ಮಹಾಲಕ್ಷ್ಮೀ ಶಿಕ್ಷಣ ಸಂಸ್ಥೆಯ ಮುಖ್ಯಶಿಕ್ಷಕ ಸೋಮಶೇಖರ್ ಮಾತನಾಡಿ, ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಿಗೆ ವೇತನ, ವಿದ್ಯಾರ್ಥಿಗಳಿಗೆ ಉಚಿತ ದಾಖಲಾತಿ, ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಲ್ಲದೆ, ಕಳೆದ 26 ವರ್ಷಗಳಿಂದ ತಾಲೂಕಿನ ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುತ್ತಿರುವ ಟ್ರಸ್ಟ್ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಮಹಾಲಕ್ಷ್ಮೀ ದೇವಾಲಯ ಟ್ರಸ್ಟ್ ಕಾರ್ಯದರ್ಶಿ ಮುರಳಿಕೃಷ್ಣ, ಖಜಾಂಚಿ ಜಗದೀಶ್, ಧರ್ಮದರ್ಶಿಗಳಾದ ಶ್ರೀಪ್ರಸಾದ್, ನಟರಾಜು, ಮಂಜುನಾಥ್, ರವಿರಾಜ ಅರಸ್, ಲಕ್ಷ್ಮೀನರಸಯ್ಯ, ರಾಜಣ್ಣ, ಶ್ರೀಲಕ್ಷ್ಮೀಪ್ರಸಾದ್, ನರಸಿಂಹರಾಜು, ನರಸಿಂಹಮೂರ್ತಿ, ಶಿಕ್ಷಣ ಇಲಾಖೆಯ ಅನುಸೂಯಮ್ಮ, ಗಂಗಮ್ಮ, ಟ್ರಸ್ಟ್ನ ಕೇಶವಮೂರ್ತಿ, ಕಾರ್ಯನಿರ್ವಹಣಾಧಿಕಾರಿ ರಂಗಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
*ಸಾರ್ವಜನಿಕರ ಗಮನ ಸೆಳೆದ ಬಾಲ ಪ್ರತಿಭೆ ವೈನವಿ*
ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ 11 ವರ್ಷದ ಬಾಲಕಿ ಬಿ.ಸಿ.ವೈನವಿ ತನ್ನ ಅಪೂರ್ವ ಪ್ರತಿಭೆಯಿಂದ ಸಾರ್ವಜನಿಕರ ಗಮನ ಸೆಳೆದಳು. ವೇದಿಕೆಯಲ್ಲಿ ಶ್ರೀಮದ್ಭಗವದ್ಗೀತೆಯ ಶ್ಲೋಕಗಳು, ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ, ಶ್ರೀ ವೆಂಕಟೇಶ್ವರ ಸುಪ್ರಭಾತ ಹಾಗೂ ಶ್ರೀ ಲಕ್ಷ್ಮೀ ಶ್ಲೋಕಗಳನ್ನು ಸುಶ್ರಾವ್ಯವಾಗಿ ಪಠಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರಳಾದಳು.
*5ನೇ ವಯಸ್ಸಿನಲ್ಲೇ 700 ಶ್ಲೋಕ ಕಂಠಪಾಠ..*
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತಡಸೀಘಟ್ಟ ಗ್ರಾಮದ ಮೇಘನಾ ಮತ್ತು ಚಿನ್ನಮೂರ್ತಿ ದಂಪತಿಯ ಪುತ್ರಿ ಬಿ.ಸಿ.ವೈನವಿ ತನ್ನ ಐದನೇ ವಯಸ್ಸಿನಲ್ಲೇ ಶ್ರೀಮದ್ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳನ್ನು ಕಂಠಪಾಠ ಮಾಡಿಕೊಂಡಿದ್ದಾಳೆ.
ಇದರ ಜತೆಗೆ ದೇವರನಾಮ, ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ, ಕೆಂಪೇಗೌಡ ರಾಜವಂಶದ ಶತನಾಮಾವಳಿ ಹಾಗೂ ಶ್ರೀ ವೆಂಕಟೇಶ್ವರ ಸುಪ್ರಭಾತವನ್ನು ಕಲಿತು ಸುಲಲಿತವಾಗಿ ಪಠಿಸುತ್ತಾಳೆ.
2022ರಲ್ಲಿ ಐದು ನಿಮಿಷಗಳಲ್ಲಿ 60 ಶ್ಲೋಕಗಳನ್ನು ಪಠಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರಳಾಗಿದ್ದಾಳೆ. ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಳದಿ ಚೆನ್ನಮ್ಮ ಪ್ರಶಸ್ತಿ, ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ನ ಗ್ರ್ಯಾಂಡ್ ಮಾಸ್ಟರ್ ಗೌರವ, ಒಂದು ನಿಮಿಷದಲ್ಲಿ 20 ಶ್ಲೋಕಗಳ ಪಠಣಕ್ಕಾಗಿ ನಾಲ್ಕು ಬಾರಿ ವರ್ಲ್ಡ್ವೈಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳನ್ನು ಪಡೆದಿದ್ದಾಳೆ.
ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದಿಂದ ಪ್ರಮಾಣಪತ್ರದೊಂದಿಗೆ ಚಿನ್ನದ ಪದಕ, ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಪ್ರಶಸ್ತಿ, ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಗೌರವ ಹಾಗೂ ಕರ್ನಾಟಕ ಸರ್ಕಾರ–ಬಿಬಿಎಂಪಿ ವತಿಯಿಂದ ನೀಡಲಾದ ನಾಡಪ್ರಭು ಕೆಂಪೇಗೌಡ 2025 ಪ್ರಶಸ್ತಿ ಸೇರಿದಂತೆ ವಿವಿಧ ಮಠಗಳು, ಸಂಘ-ಸಂಸ್ಥೆಗಳಿಂದ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ವೈನವಿ, ಬಾಲ ಪ್ರತಿಭೆಯಾಗಿ ಗಮನ ಸೆಳೆದಿದ್ದಾಳೆ.
ಇಂತಹ ಪ್ರತಿಭಾವಂತ ಬಾಲಕಿಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಹೆಚ್ಚಿನ ಪ್ರೋತ್ಸಾಹ ಮತ್ತು ಸೂಕ್ತ ವೇದಿಕೆ ಕಲ್ಪಿಸಿ, ಆಕೆಯ ಪ್ರತಿಭೆ ಮತ್ತಷ್ಟು ಬೆಳೆಯಲು ನೆರವಾಗಬೇಕು ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
-ಶ್ರೀನಿವಾಸ್ ಕೊರಟಗೆರೆ.
