ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಸೋಪ್ಪನಹಳ್ಳಿ ಗ್ರಾಮವು ಹೆಸರಿಗಷ್ಟೇ ಗ್ರಾಮವಾಗಿದ್ದು, ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಮುಖ್ಯವಾಗಿ ರಸ್ತೆ ಸಂಪರ್ಕದ ಕೊರತೆಯಿಂದ ಗ್ರಾಮಸ್ಥರು ಪ್ರತಿನಿತ್ಯ ಪರದಾಡುವಂತಾಗಿದೆ.
ತಾಲ್ಲೂಕಿನ ಗ್ರಾಮೀಣ ರಸ್ತೆಗಳ ಸಮಸ್ಯೆ ಇಂದಿಗೂ ಬಗೆಹರಿಯದೆ ಉಳಿದಿದೆ. ಸರ್ಕಾರದಿಂದ ಪ್ರತಿ ವರ್ಷ ರಸ್ತೆ ಅಭಿವೃದ್ಧಿಗೆ ಹಣ ಮಂಜೂರಾಗುತ್ತಿದ್ದರೂ, ಹಲವು ಗ್ರಾಮಗಳ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಇದೀಗ ಮಳೆಗಾಲ ಆರಂಭವಾಗಿರುವುದರಿಂದ ಹುಳಸೋಪ್ಪನಹಳ್ಳಿ ಗ್ರಾಮದ ರಸ್ತೆಗಳು ಹೊಂಡ-ಗುಂಡಿಗಳಿಂದ ತುಂಬಿ, ಸಂಚಾರಕ್ಕೆ ಮತ್ತಷ್ಟು ತೊಂದರೆಯಾಗಿದೆ.
ಗ್ರಾಮದ ರಸ್ತೆಗೆ ಮಣ್ಣು ಹಾಕಿರುವುದನ್ನು ಹೊರತುಪಡಿಸಿ ಯಾವುದೇ ಸಮರ್ಪಕ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಗ್ರಾಮದಲ್ಲಿ ಮನೆಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಅದಕ್ಕೆ ಅನುಗುಣವಾಗಿ ರಸ್ತೆ ನಿರ್ಮಾಣವಾಗಿಲ್ಲ. ಈ ಭಾಗದಿಂದ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ನಡೆದುಕೊಂಡೇ ತೆರಳಬೇಕಾದ ಪರಿಸ್ಥಿತಿ ಇದೆ.

ವಯೋವೃದ್ಧರು ಹಾಗೂ ಅನಾರೋಗ್ಯಕ್ಕೊಳಗಾದವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾದ ಸಂದರ್ಭದಲ್ಲಿ ಗ್ರಾಮಕ್ಕೆ ಸಮರ್ಪಕ ರಸ್ತೆ ಸಂಪರ್ಕವಿಲ್ಲದ ಕಾರಣ ಸುತ್ತು ಬಳಸಿ ನಗರಕ್ಕೆ ತೆರಳಬೇಕಾಗಿದೆ. ಆಟೋ ಅಥವಾ ಕಾರುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸಂಪರ್ಕಿಸಿದರೆ, “ನಿಮ್ಮ ಊರಿಗೆ ಸರಿಯಾದ ರಸ್ತೆ ಮಾರ್ಗವಿಲ್ಲ, ನಾವು ಬರುವುದಿಲ್ಲ” ಎಂಬ ಉತ್ತರ ಕೇಳಬೇಕಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕೃಷಿಯೇ ಪ್ರಮುಖ ಜೀವನಾಧಾರವಾಗಿದ್ದರೂ, ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ರಸ್ತೆ ಸಂಪರ್ಕವೂ ಸಮರ್ಪಕವಾಗಿಲ್ಲ. ರಾಜಕೀಯ ಮುಖಂಡರ ಒತ್ತಾಯದ ಮೇರೆಗೆ ಕೆಲವು ಕಡೆ ರಸ್ತೆ ನಿರ್ಮಾಣ ಮಾಡಲಾಗಿದ್ದರೂ, ಕಾಮಗಾರಿಯ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಗಮನಹರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಮಳೆಯಾದ ಬಳಿಕ ಕೆಲವು ರಸ್ತೆಗಳು ಮತ್ತಷ್ಟು ಹದಗೆಟ್ಟಿದ್ದು, ಜಲ್ಲಿಕಲ್ಲುಗಳು ಮೇಲಕ್ಕೆದ್ದು ಕಾಣಿಸುತ್ತಿವೆ. ಪರಿಣಾಮವಾಗಿ ವಾಹನ ಸಂಚಾರ ಮಾತ್ರವಲ್ಲದೆ, ಪಾದಚಾರಿಗಳು ನಡೆದಾಡುವುದಕ್ಕೂ ತೊಂದರೆಯಾಗುತ್ತಿದೆ.
ಗ್ರಾಮಸ್ಥರ ಅಸಮಾಧಾನ
ಹುಳಸೋಪ್ಪನಹಳ್ಳಿಯಲ್ಲಿ ಸುಮಾರು 60 ಮನೆಗಳಿದ್ದು, 500ಕ್ಕೂ ಹೆಚ್ಚು ಮತದಾರರಿದ್ದಾರೆ. ಆದರೆ, ಮುಖ್ಯ ರಸ್ತೆಯಿಂದ ಕೇವಲ 500 ಮೀಟರ್ಗಳಷ್ಟು ರಸ್ತೆ ನಿರ್ಮಿಸಲು 20 ವರ್ಷಗಳಿಂದ ಸಾಧ್ಯವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮದ ರಸ್ತೆಯ ಪಕ್ಕದಲ್ಲಿರುವ ಶಾಲೆಯ ವಿದ್ಯಾರ್ಥಿಗಳು ಮಳೆ ಬಂದಾಗ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬಟ್ಟೆ ಕೊಳಕಾಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಮಳೆಯ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಚರಂಡಿ ವ್ಯವಸ್ಥೆಯೂ ಇಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
“ನಮ್ಮ ಗ್ರಾಮಕ್ಕೆ ಸುಮಾರು 200 ವರ್ಷಗಳ ಇತಿಹಾಸವಿದೆ. ಆದರೆ, ಚುನಾವಣೆ ಮತ್ತು ಮತಗಳ ಲೆಕ್ಕಾಚಾರಕ್ಕೆ ಮಾತ್ರ ನಮ್ಮ ಗ್ರಾಮ ನೆನಪಾಗುತ್ತದೆ. ಕೊರಟಗೆರೆಗೆ ಸಂಪರ್ಕ ಕಲ್ಪಿಸುವ ಹುಳಸೋಪ್ಪನಹಳ್ಳಿಯಿಂದ ಗೊರವನಹಳ್ಳಿ ಮುಖ್ಯ ರಸ್ತೆಯವರೆಗಿನ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು. ನಮ್ಮ ಶಾಸಕರು ಅಭಿವೃದ್ಧಿ ಕಾರ್ಯಗಳಲ್ಲಿ ಮುಂದಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ಗ್ರಾಮ ಬಲಿಯಾಗುತ್ತಿದೆ” ಎಂದು ಗ್ರಾಮಸ್ಥ ಪಾಂಡುರಂಗ (ಪಾಂಡು) ಅಸಮಾಧಾನ ವ್ಯಕ್ತಪಡಿಸಿದರು.
ವರದಿ: ನರಸಿಂಹಯ್ಯ ಹೊಸಕೋಟೆ
