ಕೆ.ಆರ್.ಪೇಟೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವತಿ ಹಾಗೂ ಮಹಿಳೆಯರಿಗೆ ಕೌಶಲ್ಯಾಧಾರಿತ ತರಬೇತಿಗಳು ಬಹಳ ಮುಖ್ಯ ಎಂದು ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.
ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ನೃತ್ಯಾಲಯ ಅಕಾಡೆಮಿ ಹಾಗೂ ಜ್ಞಾನ ಜ್ಯೋತಿ ಚಾರಿಟಬಲ್ ಟ್ರಸ್ಟ್ (ರಿ) ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕೇವಲ ಪದವಿ ಇದ್ದರೆ ಸಾಲದು, ಜೊತೆಗೆ ಒಂದು ಕಲೆ, ಒಂದು ಕೌಶಲ್ಯ ಇರಬೇಕು. ಆ ನಿಟ್ಟಿನಲ್ಲಿ ನೃತ್ಯಾಲಯ ಅಕಾಡೆಮಿ ಹಾಗೂ ಜ್ಞಾನ ಜ್ಯೋತಿ ಚಾರಿಟಬಲ್ ಟ್ರಸ್ಟ್ ಅವರು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿರುವುದು ನಿಜಕ್ಕೂ ಮಾದರಿ ಕಾರ್ಯ. ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಕ್ಕರೆ ಅವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಾರೆ. ನಮ್ಮ ಶ್ರೀ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಇಂತಹ ಯುವ ಪ್ರತಿಭೆಗಳಿಗೆ, ಸಮಾಜಮುಖಿ ಕಾರ್ಯಗಳಿಗೆ ನಮ್ಮ ಸಂಪೂರ್ಣ ಬೆಂಬಲ ಸದಾ ಇರುತ್ತದೆ. ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳು ಈ ಪ್ರಮಾಣ ಪತ್ರವನ್ನು ಕೇವಲ ಕಾಗದ ಎಂದು ಭಾವಿಸದೆ, ನಿಮ್ಮ ಭವಿಷ್ಯದ ಮೊದಲ ಮೆಟ್ಟಿಲು ಎಂದು ತಿಳಿದು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜ್ಞಾನ ಜ್ಯೋತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜು ನಿರುದ್ಯೋಗ ಸಮಸ್ಯೆ ನಿವಾರಣೆ ಮತ್ತು ಮಹಿಳಾ ಸಬಲೀಕರಣದ ಉದ್ದೇಶದಿಂದ ನೃತ್ಯಾಲಯ ಅಕಾಡೆಮಿ ವತಿಯಿಂದ ಇಂತಹ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ. ಮಹಿಳೆಯರು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅನುಕೂಲವಾಗುವಂತೆ ಈ ಉಪಯುಕ್ತ ವೇದಿಕೆಯನ್ನು ಸೃಷ್ಟಿಸಲಾಗಿದೆ. ಎಲ್ಲಾ ವಿದ್ಯಾರ್ಥಿನಿಯರು ಕಲಿತ ವಿದ್ಯೆಯನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಬೇಕು ಎಂದು ತಿಳಿಸಿ ಜ್ಞಾನ ಜ್ಯೋತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಆರ್ ಟಿ ಓ ಮಲ್ಲಿಕಾರ್ಜುನ್ ಅವರ ನಿಸ್ವಾರ್ಥ ಸಮಾಜ ಸೇವೆ ಗುರುತಿಸಿ ಅಭಿನಂದಿಸಿದರು.

ನಂತರ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಎಲ್ಲಾ ವಿದ್ಯಾರ್ಥಿನಿಯರಿಗೆ ಆರ್.ಟಿ.ಓ ಮಲ್ಲಿಕಾರ್ಜುನ್ ಅವರು ಪ್ರಮಾಣ ಪತ್ರಗಳನ್ನು ವಿತರಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಸುಜೇಂದ್ರ ಕುಮಾರ್, ಜ್ಞಾನ ಜ್ಯೋತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜು,ನೃತ್ಯ ಶಿಕ್ಷಕಿ ಕಾವ್ಯ, ಲಕ್ಷ್ಮಿ ವೆಂಕಟೇಶ್ವರ ಕ್ಲಿನಿಕ್ ಡಾ.ಬಂದ್ರೀನಾಥ್,ರಂಗಭೂಮಿ ಕಲಾವಿದ ಬಾಲಾಜಿ,ಕಸಾಪ ಮಾಜಿ ಅಧ್ಯಕ್ಷ ಹರಿಚರಣ ತಿಲಕ್, ಪುರಸಭಾ ಮಾಜಿ ಸದಸ್ಯ ಕೆ ಆರ್ ನೀಲಕಂಠ,ಗ್ರಾ.ಪಂ ಮಾಜಿ ಸದಸ್ಯ ಅಗ್ರಹಾರ ಬಾಚಹಳ್ಳಿ ಶ್ರೀನಿವಾಸ್, ಆರ್.ಟಿ.ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜೀಗೆರೆ ಮಹೇಶ್,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
