ನಮ್ಮ ದೇಶದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುವ ಮೂಲಕ ಗುರುವಿನ ಸ್ಥಾನದ ಹಿರಿಮೆಯನ್ನು ಹೆಚ್ಚಿಸಿದ ‘ಶಿಕ್ಷಣ ಶಿಲ್ಪಿ’ ಡಾ.ಎಸ್. ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನವನ್ನು ಸಮಸ್ತ ಗುರು ಬಾಂಧವರಿಗೆ ಉಡುಗೊರೆಯ ರೂಪದಲ್ಲಿ ನೀಡಿ ಹೋಗಿದ್ದಾರೆ. ಅದರಂತೆ ದೇಶಾದ್ಯಂತ ಸೆಪ್ಟೆಂಬರ್-5 ರಂದು “ಶಿಕ್ಷಕರ ದಿನ”ವನ್ನು ಆಚರಿಸುವ ಮೂಲಕ ಆ ಮಹಾನುಭಾವರ ಸ್ಮರಣೆಯೊಂದಿಗೆ ಪವಿತ್ರವಾದ ಶಿಕ್ಷಕ ವೃತ್ತಿಯಲ್ಲಿ ಕೈಂಕರ್ಯ ಮಾಡುತ್ತಿರುವ ಶಿಕ್ಷಕ ಬಾಂಧವರನ್ನು ಗೌರವಿಸಲಾಗುತ್ತದೆ.
ಒಂದು ದೇಶದ ಹಣೆ ಬರಹವನ್ನು ಬರೆಯಬಲ್ಲ ಬ್ರಹ್ಮನೇ “ಗುರು” ಅಥವಾ “ಶಿಕ್ಷಕ”ನಾಗಿದ್ದಾನೆ. ಏಕೆಂದರೆ ದೇಶದ ಎಲ್ಲ ವ್ಯವಸ್ಥೆಯೂ “ಶಿಕ್ಷಣ”ದ ಬುನಾದಿಯನ್ನೇ ಆಧರಿಸಿದೆ, ಶಿಕ್ಷಣದ ದಕ್ಷತೆಯಿಂದ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯವಾಗುತ್ತದೆ. ಅಂತಹ ಮಹತ್ವದ ಶಿಕ್ಷಣ ನೀಡುವವರು “ಶಿಕ್ಷಕ”ರೇ ಆಗಿರುವುದರಿಂದ ರಾಷ್ಟ್ರದ ನಿರ್ಮಾಣ ಮಾಡುವ ಅಥವಾ ನಿರ್ನಾಮ ಮಾಡುವ ಸಾಮರ್ಥ್ಯ ಅವರಿಗಿದೆ. ಹಿಂದೆ ಯಾರೋ ಹೇಗೋ ಬರೆದಿರುವ ಕೆಟ್ಟ ಬರಹವನ್ನು ಬದಲಿಸಿ, ಹೊಸದಾಗಿ ಬರೆಯಬಲ್ಲ ಶಕ್ತಿ ಶಿಕ್ಷಕರಲ್ಲಿದೆ, ಇಂತಹ ಅನನ್ಯ ಶಕ್ತಿ ಹೊಂದಿರುವ ಗುರುಗಳನ್ನು ಸಾಮಾನ್ಯರೆಂದು ಭಾವಿಸದೇ, ಅವರಲ್ಲಿ ಭಕ್ತಿ, ಗೌರವ, ಶೃದ್ಧೆ, ಸೇವೆಗಳನ್ನು ಗುರ್ತಿಸಿ, ಪ್ರೋತ್ಸಾಹಿಸಿದರೆ, ಸಮಾಜಕ್ಕೆ ಆ ಮೂಲಕ ದೇಶಕ್ಕೆ ಉಪಯುಕ್ತವಾದ ಪ್ರಜೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ.
ನಮ್ಮ ದೇಶದಲ್ಲಿ ವೇದಗಳ ಕಾಲದಲ್ಲಿದ್ದ ಗುರುವಿನ ಸ್ಥಾನದ ಗೌರವಾದರಗಳು ಇಂದು ಕಡಿಮೆಯಾಗುತ್ತಿರುವ ಬಗ್ಗೆ ಸಂಶಯ ಉಂಟಾಗುತ್ತಿರುವಂತಿದೆ. ಅದಕ್ಕೆ ಕಾರಣಗಳೇನೇ ಇರಲಿ, ಶಿಕ್ಷಕ ಸಮುದಾಯಕ್ಕೆ ದೇಶವನ್ನು ಸಮರ್ಥಗೊಳಿಸುವ ಸಾಮರ್ಥ್ಯವಂತೂ ಇದೆ. ಶಿಕ್ಷಕರಿಗೆ ಸಿಗುತ್ತಿರುವ ಪ್ರಾಮುಖ್ಯತೆಯನ್ನು ಸಮಾಜ, ಸಂಘ-ಸಂಸ್ಥೆಗಳು, ಸರ್ಕಾರಗಳು ಮತ್ತಷ್ಟು ಹೆಚ್ಚಿಸಬೇಕು.

“ಶಿಕ್ಷಕರೇ ನಮ್ಮ ದೇಶದ ಭವಿಷ್ಯದ ಶಿಲ್ಪಿಗಳು” ಎಂದು ಭಾವಿಸಿರುವ ಅಮೇರಿಕಾ ಮತ್ತು ಜಪಾನ್ ರಾಷ್ಟ್ರಗಳಲ್ಲಿ ಬೇರೆ ಎಲ್ಲಾ ವೃತ್ತಿಗಳಿಗಿಂತಲೂ ಶಿಕ್ಷಕ ವೃತ್ತಿಗೆ ಹೆಚ್ಚು ಮನ್ನಣೆ ಇದೆ. ಪ್ರೋತ್ಸಾಹವಿದೆ. ಅಷ್ಟೇ ನಂಬಿಕೆಯಿದೆ. ಹಾಗಾಗಿಯೇ ಇಂದು ಅಮೇರಿಕಾ ಇತರೆಲ್ಲ ದೇಶಗಳಿಗೆ “ದೊಡ್ಡಣ್ಣ”ನ ಸ್ಥಾನ ಪಡೆದು ಆಧುನಿಕತೆಯಲ್ಲಿ, ಮಾನವ ಸಂಪನ್ಮೂಲಗಳ ಸಧ್ಭಳಕೆಯಲ್ಲಿ ಮಂಚೂಣಿಯಲ್ಲಿದೆ. ತಮ್ಮ ದೇಶದ ಈ ಪ್ರಗತಿಗೆ ಯಾರು ಕಾರಣ? ವಿಜ್ಞಾನಿಗಳಾ? ತಂತ್ರಜ್ಞರಾ? ವೈದ್ಯರಾ? ಸಾಹಿತಿಗಳಾ? ಚಿಂತಕರಾ? ಅಥವಾ ರಾಜಕಾರಣಿಗಳಾ? ಎಂದು ಪ್ರಶ್ನಿಸಿದರೆ, ಅಮೇರಿಕಾ ಅಧ್ಯಕ್ಷರು ಹೇಳುವ ಉತ್ತರ – “ಅವರೆಲ್ಲರನ್ನೂ ರೂಪಿಸುವ ಶಿಕ್ಷಕರೇ ನಮ್ಮ ರಾಷ್ಟ್ರದ ರೂವಾರಿ “ಗಳೆಂದು ಮನಃ ಪೂರ್ವಕವಾಗಿ ಹೇಳುತ್ತಾರೆಂದರೆ, ಶಿಕ್ಷಕರ ಸಮರ್ಥತೆ, ಅಗತ್ಯತೆ ಬಗ್ಗೆ ಎರಡು ಅಭಿಪ್ರಾಯಗಳ ಅವಶ್ಯಕತೆಯಿಲ್ಲ.
1945ರಲ್ಲಿ ಪರಮಾಣು ಬಾಂಬ್ ದಾಳಿಗೆ ತುತ್ತಾಗಿದ್ದ ಜಪಾನ್ ದೇಶವು ಲಕ್ಷಾಂತರ ಜನರ ಸಾವಿನಿಂದ ಕಂಗಾಲಾಗಲಿಲ್ಲ. ಹದಗೆಟ್ಟ ಹವಾಮಾನ ಪರಿಸ್ಥಿತಿಯಿಂದ ಬೇರೆ ಕಡೆಗೆ ಪಲಾಯನ ಮಾಡಲಿಲ್ಲ. ಬದಲಿಗೆ ಆತ್ಮ ಬಲವನ್ನೇ ರಾಷ್ಟ್ರ ಪ್ರೇಮವನ್ನೇ ಆಧಾರವಾಗಿಸಿಕೊಂಡು ಒಂದೆರಡು ದಶಕಗಳಲ್ಲೇ ಸುಧಾರಿಸಿ ಏನೂ ಆಗಿಯೇ ಇಲ್ಲವೆನ್ನುವಷ್ಟು ಸಹಜ ಸ್ಥಿತಿಗೆ ಜಪಾನ್ ಮರಳಿದಾಗ ಶತ್ರು ರಾಷ್ಟ್ರಗಳೂ ಚಕಿತಗೊಂಡು ಬೆಕ್ಕಸ ಬೆರಗಾದವು.
ಇತ್ತೀಚಿನ ಕೆಲವು ವರ್ಷಗಳ ಹಿಂದೆ ಉಂಟಾದ “ಸುನಾಮಿ” ಯ ಪರಿಣಾಮದಿಂದಾಗಿ ಅಣು ವಿಕಿರಣಾ ಸೋರಿಕೆಗೆ ಹೆದರಿ, ಅಲ್ಲಿನ ಜನತೆ ಇರಲಿ, ವಿಕಿರಣ ಘಟಕಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಯಾರೂ ಓಡಿ ಹೋಗಲಿಲ್ಲ. ಸುರಕ್ಷತಾ ತಂತ್ರಗಳನ್ನು ಅಳವಡಿಸಿಕೊಂಡೇ ಆತ್ಮ ಬಲದಿಂದ ಅಲ್ಲಿಯೇ ಇದ್ದು ವಿಷಮ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ, ಕೆಲವೇ ತಿಂಗಳಲ್ಲಿ ಜಪಾನ ಯಥಾಸ್ಥಿತಿಗೆ ಬರಲು ಶ್ರಮ ವಹಿಸಿದರು. ಇಂತಹ ಅದಮ್ಯ ಆತ್ಮ ವಿಶ್ವಾಸಕ್ಕೆ, ದೇಶಾಭಿಮಾನಕ್ಕೆ ಅಲ್ಲಿನ ಜನತೆ ಹೇಗೆ ಒಳಗಾದರು ಎಂದರೇ ಮತ್ತದೇ ಉತ್ತರ. ಅಲ್ಲಿನ ಶಿಕ್ಷಣ ವ್ಯವಸ್ಥೆ, ಶಿಕ್ಷಕರಲ್ಲಿನ ಸೇವಾ ದಕ್ಷತೆ, ಶಿಸ್ತು, ಸಮಯ ಪಾಲನೆ, ನಿಸ್ವಾರ್ಥತೆ, ದೇಶದ ಬಗ್ಗೆ ಗೌರವ ಎಲ್ಲರನ್ನೂ ಶಿಕ್ಷಕರು ಪ್ರತಿಯೊಬ್ಬ ಪ್ರಜೆಯಲ್ಲೂ ರಕ್ತಗತಗೊಳಿಸಿರವುದೇ “ಜಪಾನ್” ದೇಶವು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರ ಪ್ರಗತಿ ಸಾಧಿಸಿರುವುದಕ್ಕೆ ಕಾರಣವಾಗಿದೆ.
ಶಿಕ್ಷಕರ ಈ ಶ್ರಮದಾಯಕ, ಸಾರ್ಥಕತೆಯ ಸೇವೆಯನ್ನು ಗುರುತಿಸಿಯೇ ಜಪಾನ್ ಇತರೆಲ್ಲಾ ನೌಕರರಿಗಿಂತಲೂ ಶಿಕ್ಷಕರಿಗೆ ಹೆಚ್ಚು ವೇತನ ನೀಡಿ ಹುರಿದುಂಬಿಸುತ್ತಿದೆ. ಆದರೆ, ನಮ್ಮಲ್ಲಿ ಶಿಕ್ಷಕರನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ದೋಷವಿದೆ. ಸಮರ್ಥ ನಾಗರೀಕರನ್ನು ಸೃಷ್ಠಿ ಮಾಡಬೇಕು ಎಂಬ ಧ್ಯೇಯದಿಂದಲೇ ಅಮೇರಿಕಾ ಮತ್ತು ಜಪಾನ್ ದೇಶಗಳ ಯುವಕ ಯುವತಿಯರು ಶಿಕ್ಷಕರಾಗಲು ಹಪಹಪಿಸುತ್ತಾರೆ. ಆದರೆ ನಮ್ಮ ದೇಶದಲ್ಲಿ ಆ ಮನೋಭಾವನೆ ಇರುವವರ ಸಂಖ್ಯೆ ತೀರಾ ವಿರಳವೆಂದೇ ಹೇಳಬೇಕಾಗಿದೆ.
ನಮ್ಮ ದೇಶದ ತಂದೆ-ತಾಯಿಯರು ಹುಟ್ಟಿದ ಮಗುವಿಗೆ ಕಲಿಸುವ ಮೊದಲ ಪದ “ಅಮ್ಮ” ಆದರೆ ಜಪಾನ್ ದೇಶದಲ್ಲಿ ತಾಯಿಯು ಮಗುವಿಗೆ ಹೇಳಿಕೊಡುವ ಪದ “ನಾನು ಜಪಾನೀಸ್” ಅಷ್ಟೊಂದು ದೇಶಾಭಿಮಾನವನ್ನು ಅಲ್ಲಿನ ಶಿಕ್ಷಕರು ನಾಗರೀಕರಲ್ಲಿ ಬಿತ್ತಿದ್ದಾರೆ. ಯಾವುದೇ ವಿಕೋಪ, ಉದ್ವೇಗ, ಒತ್ತಡಗಳನ್ನು ತಾಳಿಕೊಂಡು, ಕಷ್ಟಗಳನ್ನು ಸವಾಲಾಗಿ ಸ್ವೀಕರಿಸುವ ಸಾಮರ್ಥ್ಯವನ್ನು ಅಲ್ಲಿನ ಶಿಕ್ಷಕರು ಸಮಸ್ತ ಪ್ರಜೆಗಳಿಗೆ ಪ್ರಾಥಮಿಕ ಹಂತದಿಂದಲೇ ತುಂಬಿದ್ದಾರೆ.
ನಮ್ಮ ದೇಶದಲ್ಲಿಯೂ “ಗುರು”ವಿನ ಸ್ಥಾನಕ್ಕೆ ಕುಂದೇನಿಲ್ಲದಿದ್ದರೂ, ನೀಡುತ್ತಿರುವ ಮಾನ್ಯತೆ ಕಡಿಮೆಯಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರು ತಮ್ಮ ಗುರುಗಳನ್ನು ಭಕ್ತಿ ಪೂರ್ವಕವಾಗಿ ಸ್ಮರಿಸುವ ಸಂಸ್ಕಾರ ಈಗಲೂ ನಮ್ಮಲ್ಲಿದೆ. ಸ್ವಾಮಿ ವಿವೇಕಾನಂದರು ತಮ್ಮ ಗುರು ಶ್ರೀ ರಾಮಕೃಷ್ಣ ಪರಮಹಂಸರ ತತ್ವ ಆದರ್ಶಗಳ ಆಧಾರಿತವಾಗಿಯೇ ಉತ್ತಮ ವ್ಯಕ್ತಿತ್ವ ಪಡೆದು ಆಧ್ಯಾತ್ಮಿಕ ಲೋಕದಲ್ಲಿ ಅದ್ವಿತೀಯರಾಗಿ ಬೆಳಗಿ ಅಮರರಾಗಿದ್ದಾರೆ.
ಗುರುವಾದವರು ಮಕ್ಕಳಲ್ಲಿ ನೈತಿಕ ಮೌಲ್ಯಗಳು, ಸಂಸ್ಕೃತಿ, ರಾಷ್ಟ್ರಭಕ್ತಿಯ ಭಾವನಾ ಬೀಜಗಳನ್ನು ಬಿತ್ತುವುದರ ಜೊತೆಗೆ ಅವರಲ್ಲಿ ಕುತೂಹಲಗಳನ್ನು ಸೃಷ್ಠಿಸಬೇಕು. ಪ್ರೋ||ಯು.ಆರ್.ರಾವ್ ರವರು ತಮ್ಮ ಪ್ರೌಢ ಶಾಲಾವಧಿಯಲ್ಲಿಯೇ ತಮ್ಮ ಗುರುವಾಗಿದ್ದ ಶೆಣೈರವರು ತುಂಬಿದ್ದ ಖಗೋಳ ಶಾಸ್ತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಮುಂದೆ ಖಗೋಳ ವಿಜ್ಞಾನಿಯಾಗಿ ಹೆಸರು ಮಾಡಿದರು.
ಮನೆ ಮನೆಗೆ ನ್ಯೂಸ್ ಪೇಪರ್ ಹಾಕುತ್ತಾ ಬಡತನದ ಬೇಗೆ ಅನುಭವಿಸುತ್ತಲೇ ವ್ಯಾಸಂಗ ಮಾಡಿದ ಎ.ಪಿ.ಜೆ.ಅಬ್ದುಲ್ ಕಲಾಂರವರು ತಮ್ಮ ಗುರು ಶಿವಸುಬ್ರಹ್ಮಣ್ಯ ಅಯ್ಯರ್ ರವರ ಮಾರ್ಗದರ್ಶನದಿಂದಲೇ ಸಾಧಿಸಿ ಮುಂದೆ ಅಣು ವಿಜ್ಞಾನಿಯಾಗಿ, ನಮ್ಮ ದೇಶದ ರಾಷ್ಟ್ರಪತಿಗಳಾಗಿ ಆ ಹುದ್ದೆಗೆ ಗೌರವ ತಂದು ಕೊಟ್ಟವರಾಗಿದ್ದಾರೆ. ಸದಾ ತಮ್ಮ ಗುರುಗಳನ್ನು ನೆನೆಯುತ್ತಲೇ ತಮ್ಮ ಶಿಕ್ಷಕ ವೃತ್ತಿಯನ್ನು ಸಾರ್ಥಕ ವೃತ್ತಿ ಎಂದು ಭಾವಿಸಿ ಮಕ್ಕಳಲ್ಲಿ ಚಿಕ್ಕವರಾಗಿದ್ದಾಗಲೇ “ಕನಸುಗಳನ್ನು ಬಿತ್ತಬೇಕು. ಬಿತ್ತಿದ ಆ ಕನಸಿನ ಬೀಜ ಮೊಳೆಯಲು, ಬೆಳೆಯಲು, ನನಸಿನ ಫಲ ದೊರೆಯುವಂತಾಗಲು ಗುರುವಾದವರು ಪ್ರೇರಣೆ ನೀಡಬೇಕು” ಎಂದು ತಮ್ಮ ಅನೇಕ ಸಂವಾದಗಳಲ್ಲಿ ಹೇಳುತ್ತಿರುತ್ತಾರೆ.
ಶಾಲೆ- ಕಾಲೇಜುಗಳಲ್ಲಿ ಗುರುವಾದವನು ಮಕ್ಕಳಿಗೆ ವೈಯಕ್ತಿಕವಾಗಿ ಗಮನ ಕೊಡುತ್ತಾ ಹೋದಂತೆ ಅವರ ಆಸಕ್ತಿದಾಯಕ ಅಂಶಗಳು ಗೋಚರವಾಗುತ್ತವೆ. ಅವನ್ನು ಗುರ್ತಿಸಿ, ಆಸಕ್ತ ಕ್ಷೇತ್ರಗಳಲ್ಲಿಯೇ ಸಾಧಿಸಲು ಪ್ರೇರೇಪಿಸಿದರೆ, ಅವನೊಬ್ಬ ಕವಿ, ವೈದ್ಯ, ಅಭಿಯಂತರ, ವಿಜ್ಞಾನಿ, ವಕೀಲ, ಪತ್ರಕರ್ತ….. ಹೀಗೆ ಹೊರಹೊಮ್ಮುತ್ತಾನೆ. ಆಸಕ್ತ ವಿಷಯದ ಗುರ್ತಿಸುವಿಕೆ ಮಾತ್ರ ಗುರುವಿನಿಂದಲ್ಲದೆ ಬೇರೆಯವರಿಂದ ಸಾಧ್ಯವಿಲ್ಲ.
ಪ್ರತಿಯೊಬ್ಬರು ಗುರುವಿನ ಬಗ್ಗೆ ಹೇಳುವಾಗ ಶಿಕ್ಷಣ ಶಿಲ್ಪಿ ಡಾ.ಎಸ್.ರಾಧಾಕೃಷ್ಣನ್ ಕುರಿತು ಹೇಳದಿದ್ದರೆ ಅಪೂರ್ಣವೆನಿಸುತ್ತದೆ. ಅವರು ಮೈಸೂರು ವಿ.ವಿ.ಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ವರ್ಗಾವಣೆಯಾಗುತ್ತದೆ. ಅವರ ಶಿಷ್ಯರು ಸಾರೋಟಿನಲ್ಲಿ ಅವರನ್ನು ಕೂಡಿಸಿಕೊಂಡು ಮೆರವಣಿಗೆಯೊಂದಿಗೆ ರೈಲ್ವೆ ನಿಲ್ದಾಣಕ್ಕೆ ಗೌರವಾದರಗಳಿಂದ, ಪುಷ್ಪಾರ್ಚನೆಗಳಿಂದ ಕರೆತರುತ್ತಾರೆ. ಅಷ್ಟೊಂದು ಭಕ್ತಿ, ಗೌರವ, ಅಭಿಮಾನದಿಂದ ಬೀಳ್ಕೊಟ್ಟ ಶಿಷ್ಯರ ಸಂಭ್ರಮವನ್ನು ಕಣ್ತುಂಬಿಕೊಂಡ ರಾಧಾಕೃಷ್ಣನ್ ರವರು, “ಎಂಥ ಪವಿತ್ರ ವೃತ್ತಿ” ಎಂದು ಸಂತೃಪ್ತರಾಗುತ್ತಾರೆ. ಮುಂದೆ ರಾಷ್ಟ್ರದ ಅತ್ಯುನ್ನತ ಸ್ಥಾನ ಅಲಂಕರಿಸಿದ್ದರೂ ಅವರು ಸ್ಮರಿಸುವ ಕ್ಷಣ “ಸಾರೋಟಿನ ಮೆರವಣಿಗೆ” ಎಂದು ವಿನಮ್ರರಾಗಿ ಸ್ಮರಿಸುತ್ತಿದ್ದರು ಎಂದರೆ, ಗುರುವಿನ ಹಿರಿಮೆಯ ಅರಿವಾಗುತ್ತದೆ.
ಮುಂದೊಂದು ದಿನ ರಾಧಾಕೃಷ್ಣನ್ ರವರು ಅನಿರೀಕ್ಷಿತವಾಗಿ ತಮ್ಮ ಗುರು ಒಬ್ಬರನ್ನು ಬಡತನದ ಸ್ಥಿತಿಯಲ್ಲಿ ಕಂಡು ತಾನು ನಿಮ್ಮ ಶಿಷ್ಯ ಎಂದು ಪರಿಚಯಿಸಿಕೊಂಡಾಗ ಆ ಬಡ ಮೇಷ್ಟ್ರು “ಇಷ್ಟು ದಿನ ನಾನು ಕಡು ಬಡವ ಎಂದು ಕೊಂಡಿದ್ದೆ. ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿರುವ ನಿನ್ನಂಥ ಶಿಷ್ಯನಿರುವಾಗ ನಾನು ಜಗತ್ತಿನ ಅತಿ ದೊಡ್ಡ ಶ್ರೀಮಂತ” ಎನ್ನುತ್ತಾ ತಮ್ಮ ಶಿಷ್ಯನನ್ನು ಅಪ್ಪಿಕೊಂಡು ಶಿಕ್ಷಕ ವೃತ್ತಿಯ ಸಾರ್ಥಕತೆ ಕಂಡು ಸಂಭ್ರಮ ಪಡುತ್ತಾರೆ. ಈ ರೀತಿಯ ಗುರು – ಶಿಷ್ಯರ ಪರಂಪರೆಯ ಅವಲೋಕನದಿಂದಾಗಿ “ಗುರು”ವಿನ ಮಹಿಮೆ ಮಹತ್ವ ಪಡೆದಿದೆ.
“ಅಸತೋಮಾ ಸದ್ಗಮಯಾ
ತಮಸೋಮಾ ಜ್ಯೋತಿರ್ಗಮಯಾ
ಮೃತ್ಯೋರ್ಮಾ ಅಮೃತಂಗಮಯಾ
ಓಂ ಶಾಂತಿ ಶಾಂತಿ ಶಾಂತಿಃ”
ಸ್ತೋತ್ರವನ್ನು ಗುರುಗಳು ಆದರ್ಶವಾಗಿಟ್ಟುಕೊಂಡು ಸೇವೆಯಲ್ಲಿ ಸಾರ್ಥಕತೆ ಕಂಡುಕೊಂಡು ಸಮಾಜೋಪಯೋಗಿ ನಾಗರೀಕರನ್ನು ಸ್ಪರ್ಧಾ ಜಗತ್ತಿನ ಅಗತ್ಯಕ್ಕೆ ತಕ್ಕಂತೆ ನಿರ್ಮಾಣ ಮಾಡಿದರೆ, ಇಡೀ ರಾಷ್ಟ್ರವೇ ಸದೃಢವಾಗಿ, ಸಂಪದ್ಭರಿತವಾಗುತ್ತದೆ, ಶಿಕ್ಷಕ ವೃತ್ತಿಯ ಘನತೆ ಪಾವಿತ್ರ್ಯತೆ ಉಳಿಯುತ್ತದೆ.
**********
-ಹೊ.ರಾ.ಪರಮೇಶ್ ಹೊಡೇನೂರು, ಶಿಕ್ಷಕರುಅರಕಲಗೂಡು,ತಾ. .ಹಾಸನಜಿಲ್ಲೆ
