ಮಧುಗಿರಿ:- ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ವೀರಾಪುರ ಗ್ರಾಮದ ದಲಿತ ಛಲವಾದಿ ಸಮುದಾಯದವರು ತಮ್ಮ ಪೂರ್ವಿಕರ ಸಮಾಧಿಗಳ ಬಳಿ ಪೂಜಾ ಕಾರ್ಯಗಳನ್ನು ನಿರ್ವಹಿಸಲು ಅನುಕೂಲ ಮಾಡಿಕೊಡಬೇಕೆಂದು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಗ್ರಾಮದ ಕೆರೆಯ ದಂಡೆಯ ಬಳಿ ತಲತಲಾಂತರಗಳಿಂದ ತಮ್ಮ ಸಮುದಾಯದ ಹಿರಿಯರ ಅಂತ್ಯಸಂಸ್ಕಾರಗಳನ್ನು ನಡೆಸಿಕೊಂಡು ಬರುತ್ತಿರುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಕೆರೆ ಹೂಳೆತ್ತುವ ಕಾಮಗಾರಿಯ ವೇಳೆ ಸಮಾಧಿಗಳು ಸುತ್ತಮುತ್ತ ಮಣ್ಣನ್ನು ಆಳವಾಗಿ ತೆಗೆದ ಪರಿಣಾಮ, ಸಮಾಧಿಗಳ ಬಳಿ ತೆರಳಿ ಪೂಜಾ ವಿಧಿವಿಧಾನಗಳನ್ನು ನಡೆಸಲು ತೊಂದರೆ ಉಂಟಾಗಿದೆ ಎಂದು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ಸಮಾಧಿಗಳಿರುವ ಸ್ಥಳದ ಪಕ್ಕ ಮಣ್ಣು ತುಂಬಿಸಿ ಮೆಟ್ಟಿಲುಗಳನ್ನು ನಿರ್ಮಿಸಿ, ಯಥಾಸ್ಥಿತಿಯಲ್ಲಿ ಪೂಜಾ ಕಾರ್ಯಗಳನ್ನು ಸುಗಮವಾಗಿ ನಡೆಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.
ಜೊತೆಗೆ ವೀರಾಪುರ ಗ್ರಾಮದ ದಲಿತ ಛಲವಾದಿ ಜನಾಂಗದವರಿಗೆ ಪ್ರತ್ಯೇಕ ರುದ್ರಭೂಮಿಯನ್ನು ಮಂಜೂರು ಮಾಡಿಕೊಡಬೇಕೆಂದು ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಗ್ರಾಮ ಪಂಚಾಯಿತಿ ನೇರಳೇಕೆರೆ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಿರುವ ಮನವಿಯ ಪ್ರತಿಗಳನ್ನು ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿಗಳು, ಕೂಡ ಕಳುಹಿಸಲಾಗಿದೆ.
ಸಮುದಾಯದ ಪರವಾಗಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ ಸಿ ಎಸ್ ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷರು ಕೊರಟಗೆರೆ ಶಾಖೆ ಲಕ್ಷ್ಮಿಪುತ್ರ ಅವರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು ಜೊತೆಗೆ ಹಲವರು ಸಮಾಜದ ಮುಖಂಡರು ದುರಸ್ತಿಗಾಗಿ ಮನವಿ ಮಾಡಿಕೊಂಡಿದ್ದಾರೆ .
– ಶ್ರೀನಿವಾಸ್ ಕೊರಟಗೆರೆ.
