ಕೊರಟಗೆರೆ : ಸಮಾಜ ಸೇವಕರು ಹಾಗೂ ಕೋಳಾಲದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅವರು ಶುಕ್ರವಾರ ಕೊರಟಗೆರೆ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಮೊದಲಿಗೆ ಕೋಳಾಲ ಹೋಬಳಿಯ ಲಿಂಗಾಪುರ ಗ್ರಾಮದ ಗ್ರಾಮದೇವತೆ ಶ್ರೀ ಮಾರಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ “ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣನ ಸಂಧಾನ” ಪೌರಾಣಿಕ ನಾಟಕದಲ್ಲಿ ಭಾಗವಹಿಸಿದರು. ಈ ನಾಟಕವನ್ನು ಶ್ರೀ ಮಾರುತಿ ಕೃಪಾಪೋಷಿತ ನಾಟಕ ಮಂಡಳಿ ಲಿಂಗಾಪುರ ಗ್ರಾಮಸ್ಥರ ಸಹಯೋಗದಲ್ಲಿ ಪ್ರದರ್ಶಿಸಿತು.

ನಂತರ ಭೈರಗೊಂಡ್ಲು ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಂದ ಪ್ರದರ್ಶಿಸಲಾದ “ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣನ ಸಂಧಾನ” ಪೌರಾಣಿಕ ನಾಟಕವನ್ನು ವೀಕ್ಷಿಸಿದರು.

ಈ ವೇಳೆ ಮಾತನಾಡಿದ ಪಿ.ಎನ್. ಕೃಷ್ಣಮೂರ್ತಿ ಅವರು, “2005ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದ ಸಂದರ್ಭದಲ್ಲಿ ಜನರು ತೋರಿದ ಅಭಿಮಾನ ಇಂದಿಗೂ ಅದೇ ರೀತಿ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಮಾವತೂರು ಗ್ರಾಮದ ಅಸಮದೇವಿ ದೇವಸ್ಥಾನದ ಬಳಿ ನಿರ್ಮಾಣಗೊಂಡಿರುವ ನೂತನ ಸಮುದಾಯ ಭವನ ಉದ್ಘಾಟನೆ ಸಂದರ್ಭದಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ 25 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಭವ್ಯ ಕಾರ್ಯಕ್ರಮ ಆಯೋಜಿಸಲಾಗುವುದು” ಎಂದು ತಿಳಿಸಿದರು.

ಕ್ಷೇತ್ರದ ಪ್ರತಿಯೊಂದು ಹಳ್ಳಿಯಿಂದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ ಅವರು, ಈಗಾಗಲೇ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸುಮಾರು 35ಕ್ಕೂ ಹೆಚ್ಚು ನಾಟಕಗಳಲ್ಲಿ ಭಾಗವಹಿಸಿದ್ದೇನೆ. ಲಿಂಗಾಪುರ ಹಾಗೂ ಭೈರಗೊಂಡ್ಲು ಗ್ರಾಮಗಳಲ್ಲಿ ಪ್ರದರ್ಶಿಸಲಾದ ಕುರುಕ್ಷೇತ್ರ ನಾಟಕ ಅತ್ಯಂತ ಮನೋಜ್ಞವಾಗಿ ಮೂಡಿ ಬಂದಿದೆ. ನಾಟಕದ ಪ್ರತಿಯೊಂದು ಪಾತ್ರದ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾವತೂರು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಕಂಪಣ್ಣ, ತಾಲೂಕು ಗ್ಯಾರಂಟಿ ಅಧ್ಯಕ್ಷ ವೆಂಕಟೇಶ್ ಮೂರ್ತಿ, ಬಿಎಂಸಿ ಚಂದ್ರು, ಚಂದ್ರಹಳ್ಳಿ ಕುಮಾರ್, ಲಿಂಗಾಪುರ ಸತೀಶ್, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವೀನ್ ಕುಮಾರ್, ಮಹಾಲಿಂಗಯ್ಯ, ನಂದೀಶ್ ಸೇರಿದಂತೆ ಗ್ರಾಮಸ್ಥರು ಹಾಗೂ ಪಿ.ಎನ್.ಕೆ ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ : ನರಸಿಂಹಯ್ಯ ಹೊಸಕೋಟೆ
