ಕೊರಟಗೆರ :- ತಾಲೂಕಿನ ತುಂಬುಗಾನಹಳ್ಳಿ ಸಮೀಪದ ಕೆಎಸ್ಆರ್ಪಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಸಹಾಯಕ ಉಪನಿರೀಕ್ಷಕ (ಎಎಸ್ಐ) ನಾಮದೇವ ಜಿ. ಪವರ್ ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ನಡೆದಿದೆ.
ಮೂಲತಃ ಅರಕೆರೆ ತಾಂಡಾ ನಿವಾಸಿಯಾಗಿದ್ದ ನಾಮದೇವ ಜಿ. ಪವರ್ ಅವರು ಕಳೆದ ಕೆಲವು ವರ್ಷಗಳಿಂದ ಕೊರಟಗೆರೆಯ ಕೆಎಸ್ಆರ್ಪಿ ಘಟಕದಲ್ಲಿ ಎಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದರು.
ಗುರುವಾರ ಮಧ್ಯರಾತ್ರಿ ಶೌಚಾಲಯಕ್ಕೆ ತೆರಳಿದ್ದ ವೇಳೆ ಅವರು ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಸಹೋದ್ಯೋಗಿಗಳು ಅವರನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ನಾಮದೇವ ಜಿ. ಪವರ್ ಅವರ ಅಕಾಲಿಕ ನಿಧನದಿಂದ ಕೆಎಸ್ಆರ್ಪಿ ಸಿಬ್ಬಂದಿ ಹಾಗೂ ಕುಟುಂಬಸ್ಥರಲ್ಲಿ ಶೋಕ ಆವರಿಸಿದ್ದು, ಅವರ ಸೇವಾ ಅವಧಿಯ ಕಾರ್ಯನಿಷ್ಠೆ ಮತ್ತು ಸರಳ ವ್ಯಕ್ತಿತ್ವವನ್ನು ಸಹೋದ್ಯೋಗಿಗಳು ಸ್ಮರಿಸಿದ್ದಾರೆ.
