ಹಾಸನ: ‘ಮನಸ್ಸು’ ಪುಸ್ತಕ ಲೋಕಾರ್ಪಣೆ- ದಿವಂಗತ ರಂಗ ನಿರ್ದೇಶಕಿ ಮಂಗಳ ವೆಂಕಟೇಶ್ ಕಲಾಸೇವೆ ಸ್ಮರಣೆ
ಹಾಸನ: ಹಾಸನದ ಖ್ಯಾತ ರಂಗಭೂಮಿ ನಿರ್ದೇಶಕಿ ದಿವಂಗತ ಮಂಗಳ ವೆಂಕಟೇಶ್ ಅವರ ಕಲಾಸೇವೆಯನ್ನು ಸ್ಮರಿಸುವ ಕಾರ್ಯಕ್ರಮವನ್ನು ಹಾಸನ ಜಿಲ್ಲಾ ಕದಂಬ ಸೈನ್ಯ, ಶ್ರೀ ಬೆನಕ ಕಲಾ ಸೌರಭ ಹಾಗೂ ಶ್ರೀ ಶಾರದಾ ಕಲಾಸಂಘದ ವತಿಯಿಂದ ಅವರ ಸ್ವಗೃಹದಲ್ಲಿ ಆಯೋಜಿಸಲಾಯಿತು.
ಸೃಜನ ಸಿರಿ ಮಹಿಳಾ ಸಂಘದ ಮೂಲಕ ಅನೇಕ ಮಹಿಳಾ ಕಲಾವಿದರನ್ನು ರಂಗಮಂಚಕ್ಕೆ ಪರಿಚಯಿಸಿದ್ದ ಮಂಗಳ ವೆಂಕಟೇಶ್, ಹಲವಾರು ಲೇಖಕರ ಮತ್ತು ನಾಟಕಕಾರರ ಕೃತಿಗಳನ್ನು ರಂಗದ ಮೇಲೆ ತಂದಿದ್ದರು. ಕೊರೊನಾ ಸಂದರ್ಭದಲ್ಲಿ ಅವರು ನಿಧನರಾಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಗೊರೂರು ಅನಂತರಾಜು, “ಮಂಗಳ ವೆಂಕಟೇಶ್ ಅವರು ಹಾಸನದ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಮಹಿಳಾ ತಂಡವನ್ನು ಕಟ್ಟಿಕೊಂಡು ಹಲವಾರು ಹೊಸ ನಾಟಕಗಳನ್ನು ಪ್ರಯೋಗಿಸಿದ್ದರು. ಅವರು ಕನ್ನಡ ಸಾಹಿತ್ಯ ಪರಿಷತ್ ಹಾಸನ ಜಿಲ್ಲಾ ಗೌರವ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು” ಎಂದು ಸ್ಮರಿಸಿದರು.
“ತಾವೇ ನಾಟಕ ಬರೆದು ರಂಗಮಂಚಕ್ಕೆ ತಂದಿದ್ದ ಅವರ ಕಲಾಸೇವೆ ಸ್ಮರಿಸುವ ಕಾರ್ಯ ಶ್ಲಾಘನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಲಾವಿದೆ ಶ್ವೇತಾ ಮೋಹನ್ ಮಾತನಾಡಿ, ಮಂಗಳ ಅವರೊಂದಿಗಿನ ತಮ್ಮ ಒಡನಾಟ, ನಟನೆಗೆ ನೀಡಿದ ಪ್ರೋತ್ಸಾಹ ಹಾಗೂ ಮನೆಯಲ್ಲೇ ನಾಟಕ ಅಭ್ಯಾಸ ಮಾಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು.
ಶಿಕ್ಷಕಿ ರಾಣಿ ಚರಾಶ್ರೀ, ಮಂಗಳ ಅವರ ನಿರ್ದೇಶನದಲ್ಲಿ ನಟಿಸಿದ ನಾಟಕಗಳು ತಮ್ಮ ಬದುಕಿಗೆ ಹೆಸರು ಹಾಗೂ ಪ್ರೇರಣೆ ತಂದಿವೆ ಎಂದು ಹೇಳಿದರು.
ಪತ್ರಕರ್ತೆ ಲೀಲಾವತಿ ತಮ್ಮ ಬಾಲ್ಯದ ಗೆಳತಿ ಮಂಗಳ ಅವರೊಂದಿಗೆ ಕಳೆದ ನೆನಪುಗಳನ್ನು ಹಂಚಿಕೊಂಡು, ಮಹಿಳಾ ಕಲಾವಿದರಿಗೆ ನೀಡುತ್ತಿದ್ದ ಸಹಾಯವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಮಾಳೇಟಿರ ಸೀತಮ್ಮ ವಿವೇಕ್ ಅವರ ‘ಮನಸ್ಸು’ ಪುಸ್ತಕವನ್ನು ಗೊರೂರು ಅನಂತರಾಜು ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಮಾಳೇಟಿರ ಸೀತಮ್ಮ ವಿವೇಕ್, “ಸಾಹಿತ್ಯದ ತವರೂರು ಎನ್ನಿಸಿಕೊಂಡ ಹಾಸನವೇ ನನ್ನ ಸಾಹಿತ್ಯ ಕೃಷಿಗೆ ಪ್ರೇರಣೆ. ಕೊಡಗಿನ ಆದಿಕವಿ ಅಪ್ಪಚ್ಚಕವಿ ಅವರ ಸಂಗೀತ, ಸಾಹಿತ್ಯ ಹಾಗೂ ನಾಟಕ ಸೇವೆಗಳು ಪ್ರಭಾವ ಬೀರಿವೆ” ಎಂದು ಹೇಳಿದರು.
“ನಾನು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನಗಾರ್ತಿಯಾಗಿದ್ದು, ಇತಿಹಾಸ, ನಿಘಂಟು, ಕವನ ಸಂಕಲನಗಳ ಜೊತೆಗೆ ಮನಸ್ಸಿನ ಆಳವಾದ ವಿಚಾರಗಳನ್ನು ಒಳಗೊಂಡಿರುವ ಈ ಕೃತಿಯನ್ನು ರಚಿಸಿದ್ದೇನೆ” ಎಂದು ತಿಳಿಸಿದರು.

ಕದಂಬ ಸೇನೆ ಜಿಲ್ಲಾ ಅಧ್ಯಕ್ಷ ಹಾಗೂ ನಿವೃತ್ತ ಪ್ರಾಂಶುಪಾಲ ಎ.ಎಚ್. ಗಣೇಶ್ ಅಂಕಪುರ ಮಾತನಾಡಿ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವ ನಿಟ್ಟಿನಲ್ಲಿ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್, ಗಾಯಕಿ ಕಲಾವತಿ ಮಧುಸೂಧನ್, ಶ್ರೀ ಶಾರದ ಕಲಾಸಂಘದ ಅಧ್ಯಕ್ಷ ಹೆಚ್.ಜಿ. ಗಂಗಾಧರ್, ಹಾಸನ ಎಂಸಿಇ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸಿ.ವಿ. ವೆಂಕಟೇಶ್, ಕದಂಬ ಸೈನ್ಯ ಹಾಸನ ತಾಲೂಕು ಅಧ್ಯಕ್ಷ ಕುಮಾರ್ ಹಾಗೂ ಆಲೂರು ತಾಲೂಕು ಅಧ್ಯಕ್ಷ ಪಟ್ನ ವೆಂಕಟೇಗೌಡ ಉಪಸ್ಥಿತರಿದ್ದರು.

ಜೆ.ಆರ್. ಶ್ರೀಕಾಂತ್ ಪ್ರಾರ್ಥನೆ ಸಲ್ಲಿಸಿದರು. ಧನಲಕ್ಷ್ಮಿ ಹಾಗೂ ಶ್ರೀ ಶಾರದ ಕಲಾಸಂಘ ಮತ್ತು ಶ್ರೀ ಬೆನಕ ಕಲಾಸಂಘದ ಮಹಿಳೆಯರು ಭಕ್ತಿಗೀತೆ ಹಾಗೂ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು.
