ಕೆ.ಆರ್.ಪೇಟೆ, ಮೇ 25: ಪಟ್ಟಣ ವ್ಯಾಪ್ತಿಯ ಹೊಸಹೊಳಲಿನ ಸಮಾಜ ಸೇವಕಿ ಹಾಗೂ ಸಂಘಟಕಿ ಮಂಜುಳಾ ಅವರಿಗೆ “ಶೀ ಪವರ್ ಅವಾರ್ಡ್ಸ್ ಹಾಗೂ ಕಾನ್ ಕ್ಲೇವ್ 2026” ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ “ಶೀ ಪವರ್ ಅವಾರ್ಡ್” ನೀಡಿ ಗೌರವಿಸಲಾಗಿದೆ.
ಬೆಂಗಳೂರುದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವೆ, ಸಂಘಟನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಮಂಜುಳಾ ಅವರು ಇಂಟೀರಿಯಮ್ ಮಂಡಳಿಯ ಸದಸ್ಯೆಯಾಗಿ, ಪುರಸಭಾ ಸದಸ್ಯೆಯಾಗಿ, ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಜಿಲ್ಲಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳಲ್ಲಿ ನಿರ್ದೇಶಕಿಯಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಅಲ್ಲದೆ ಹೊಸಹೊಳಲಿನ ಪ್ರತಿಭಾ ಮಹಿಳಾ ಮಂಡಳಿ, ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ, ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ, ಶ್ರೀ ಕೋಟೆ ಬೈರವೇಶ್ವರ ವ್ಯಾಪಾರಸ್ಥರ ಪತ್ತಿನ ಸಹಕಾರ ಸಂಘ, ತಾಲೂಕು ಮಹಿಳಾ ಒಕ್ಕೂಟ ಹಾಗೂ ಕೋಟೆ ಬೈರವೇಶ್ವರ ದೇವಾಲಯ ಟ್ರಸ್ಟ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಹಲವು ಯುವ ಪ್ರಶಸ್ತಿ ಹಾಗೂ ಸಾಧನಾ ಪ್ರಶಸ್ತಿಗಳನ್ನು ಪಡೆದಿರುವ ಮಂಜುಳಾ ಅವರು ವಿವಿಧ ಸಂಘ-ಸಂಸ್ಥೆಗಳ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಂಜುಳಾ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಶಾಸಕ ಹೆಚ್.ಟಿ. ಮಂಜು, ಸಮಾಜಸೇವಕ ಆರ್.ಟಿ.ಓ. ಮಲ್ಲಿಕಾರ್ಜುನ್, ಮಿತ್ರ ಫೌಂಡೇಶನ್ನ ವಿಜಯ ರಾಮೇಗೌಡ, ಮನ್ಮುಲ್ ನಿರ್ದೇಶಕ ಡಾಲು ರವಿ, ಎಂ.ಬಿ. ಹರೀಶ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಹೆಚ್.ಕೆ. ಅಶೋಕ್ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.
– ಶ್ರೀನಿವಾಸ್ ಆರ್.
