ಇತ್ತ ಪಾರಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕರೆದುಕೊಂಡು ಅಜ್ಜೀಗುಡ್ಡೆ ದಾರಿಯಲ್ಲಿ ಲೋಕವಳ್ಳಿ ದಾಟಿ, ಮೇದರ ಮನೆಯ ಏರಿ ಹತ್ತಿ ಮೂಡಿಗೆರೆ ಪ್ಯಾಟೆಗೆ ಹೋದರೆ, ಬಣ್ಣದ ಟೇಪು, ಕಡ್ಲೆಪುರಿ, ಬೂತಾಯಿ ಮೀನು ತಗೊಂಡು ದಾಸಪ್ಪನ ಸೇಂದಿ ಅಂಗಡಿಯಲ್ಲಿ ಒಂದು ಬಾಟಲಿ ಏರಿಸಿಕೊಂಡು, ಬೇಯಿಸಿದ ಮೊಟ್ಟೆಗಳನ್ನು ಮಗಳ್ದಿರಿಗೆ ಕೊಡಿಸಿ ಕೆಂಪೇರಿ ವಾಪಾಸ್ ಬಿದರಹಳ್ಳಿ ಕಡೆ ನಡೆಯುತ್ತಿದ್ದರೆ, ಕೆಳ್ಳಸ್ಟಾಪಿನ ಗ್ಯಾರೇಜಿನ ಮೆಕ್ಯಾನಿಕ್ಗಳು, ಮೀನು ಮಾರುವ ಹುಡುಗರು ಸಹಾ ತಾಯಿ-ಮಕ್ಕಳನ್ನು ನೋಡಿ ಇವರನ್ನು ಅಕ್ಕ ತಂಗಿಯರೆಂದೇ ತಿಳಿದು “ಇವರು ಯಾರೋ ಲೋಕಲ್ ಪ್ಲಾಂರ್ರಿಗೇ ಹುಟ್ಟಿರಬೇಕು ಮಾರಾಯ” ಎಂದು ಏನೇನನ್ನೋ ದ್ವಂದಾರ್ಥದಲ್ಲಿ ಮಾತನಾಡಿ ಕಿಸಕ್ ಎಂದು ಹಲ್ಲುಕಿರಿಯುತ್ತಿದ್ದರು.
ಈಗ ಕಾಫಿ ಕೊಯ್ಲೂ ಮುಗಿದು ಧೂಳಗತೆ ಪ್ರಾರಂಭವಾಗಿತ್ತು. ದಿನಕ್ಕೆ ಇಷ್ಟು ಗಿಡ ಅಗತೆ ಕಡಿಯುವುದೆಂದು ನಿಗದಿಯಾಗಿದ್ದರಿಂದ ಆ ಉರಿಬಿಸಿಲಿನಲ್ಲಿ ಅಗತೆ ಕಡಿಯುವುದು ಕಷ್ಟವೆಂದು, ಬಸ್ರಾಜ ತನ್ನ ಮಗನೊಂದಿಗೆ ಬೆಳಗ್ಗೆ ಏಳರಿಂದ ಹತ್ತು ಗಂಟೆಯವರೆಗೆ ಅಗತೆ ಕಡಿದು ಲೈನಿಗೆ ವಾಪಾಸ್ ಬರತೊಡಗಿದ. ನಂತರ ಸಂಜೆ ನಾಲ್ಕರ ನಂತರ ಆರು ಗಂಟೆಯವರೆಗೆ ಮತ್ತೆ ಅಗತೆ ಕಡಿದು ಆ ದಿನದ ಕೋಟಾ ಮುಗಿಸುತ್ತಿದ್ದ. ಕಾಫಿ ಕುಯ್ಯುವಾಗ ಉದುರಿ ನೆಲಕ್ಕೆ ಬಿದ್ದಿದ್ದ ಕಾಫಿ ಬೀಜಗಳನ್ನು ಹೆರಕಲು ಪಾರಿ ತನ್ನ ಹೆಣ್ಣುಮಕ್ಕಳ ಜೊತೆ ತೋಟದ ಇನ್ನೊಂದೆಡೆಗೆ ಹೋಗುತ್ತಿದ್ದಳು.
ಮಧ್ಯಾಹ್ನ ಎರಡು ಗಂಟೆಗೆ ಊಟ ಮುಗಿಸಿಕೊಂಡ ಬಸ್ರಾಜ ಆ ದಿನ ಜಾರಪ್ಪ ಪೂಜಾರಿಯ ಮನೆಗೆ ಸಾರಾಯಿ ಕುಡಿಯಲು ಹೋಗಿದ್ದ. ಜಾರಪ್ಪನ ಮನೆಯ ಸುತ್ತ ನಿಂತಿದ್ದ ಖಾಕಿ ಬಟ್ಟೆಯವರನ್ನು ನೋಡಿ ಬಸ್ರಾಜ ಅವಾಕ್ಕಾದ. ಮನೆಯೊಳಗಿನಿಂದ ಹೆಂಗಸಿನದೊಂದು ಅಬ್ಬರಿಸಿದ್ದಂತ ‘ಅಯ್ಯೋ ಅಯ್ಯಯ್ಯೋ’ ಎಂಬ ಧ್ವನಿ ಕೇಳಿ ಕಂಗಾಲಾಗಿಹೋದ. ನಿಂತಿದ್ದ ನಾಲ್ಕು ಜೀಪುಗಳಲ್ಲಿ ಮೂರು ಎಕ್ಸೇಜಿನವರದು ಮತ್ತೊಂದು ಪೋಲಿಸ್ರದು.
ಅಬಕಾರಿ ಜೀಪಿನ ಹಿಂದೆ ಕ್ಯಾನುಗಳು, ಪ್ಲಾಸ್ಟಿಕ್ ಕೊಡಗಳು, ತಾಮ್ರದ ಪಾತ್ರೆಗಳು, ಅಲ್ಯೂಮಿನಿಯಂ ಹಂಡೆಗಳು ದುರ್ವಾಸನೆ ಬೀರುತ್ತಾ ಹಗ್ಗದಲ್ಲಿ ಕಟ್ಟಿಸಿಕೊಂಡು ನೇತಾಡುತ್ತಿದ್ದವು. ಆ ಕಾಡಿನ ವಾತಾವರಣ, ಪೋಲೀಸರ ಅಸ್ತಿತ್ವ, ಹೆಂಗಸಿನ ಆರ್ತನಾದ ಬಸ್ರಾಜನಿಗೆ ಭೀಬತ್ಸ ಸನ್ನಿವೇಶವನ್ನೇ ಸೃಷ್ಟಿಸಿ ಓಡುವಂತೆ ಪ್ರೇರಣೆ ನೀಡಿದವು. ಆದರೆ ಕಾಲುಗಳು ನಿಂತಲ್ಲಿಂದ ಮೇಲಕ್ಕೇಳುತ್ತಿಲ್ಲ. ನಾನೆಲ್ಲಾದರೂ ಓಡಿದರೆ ಜಾರಪ್ಪನನ್ನು ನಾನೇ ಕೊಲೆ ಮಾಡಿರುವುದೆಂದು ಖಚಿತವಾಗುತ್ತದೆ. ಅಯ್ಯೋ ದೇವರೇ ನಾನ್ಯಾಕಾದರೂ ಇಲ್ಲಿಗೆ ಬಂದೆನೋ ಎಂದು ತನ್ನನ್ನೇ ತಾನು ಹಳಿದುಕೊಳ್ಳಲಾರಂಭಿಸಿದ.
‘ಯಾವನೋ ನೀನು? ಎಂತಕ್ಕಲ ಬಂದೆ?’ ಎಂದು ಸಿಡಿಲಿನ ಧ್ವನಿಯೊಂದು ಬೆನ್ನ ಹಿಂದಿನಿಂದ ಅಪ್ಪಳಿಸಿತು. ತಿರುಗಿ ನೋಡುತ್ತಾನೆ ಯಮಕಿಂಕರನ ಗೆಟಪ್ಪಿನಲ್ಲಿದ್ದ ಅಜಾನುಬಾಹು ಗಿರಿಜಾಮೀಸೆಧಾರಿ ಪೋಲೀಸ್ ಎಸ್.ಐ. ಬೆಲ್ಲದ್ನಾಯ್ಕ ನಿಂತಲ್ಲಿಂದಲೇ ತಿನ್ನುವಂತೆ ಬಸ್ರಾಜನನ್ನು ನೋಡತೊಡಗಿದರು. ಆಗ ತಾನೇ ರಾಗಿ ಅಂಬಲಿ ಕುಡಿದು ಬಂದಿದ್ದ ಬಸ್ರಾಜನಿಗೆ ಕುಡಿದ ಅಂಬಲಿ ಯಾಕೋ ಹಾಗೇ ದೇಹದಿಂದ ಹೊರಹೋಗುವುದೇನೋ ಎಂದೆನಿಸಿ ಕಾಲುಗಳನ್ನು ಆದಷ್ಟೂ ಹತ್ತಿರಕ್ಕೆ ಸೇರಿಸಿಕೊಂಡು ಮೂಲಬಂಧ ಮಾಡಿಕೊಂಡು ಥರಗುಟ್ಟತೊಡಗಿದ.
‘ಜಾರಪ್ಪನ ಸಾರಾಯಿ ಕುಡಿಯಲಿಕ್ಕೆ ಬಂದಿದ್ದೀಯಾ? ಬೋಳಿಮಗನೇ, ನಡೀ ಕುಡಿಯಂತೆ, ನಡೀ ಒಳಗೆ, ಒಂದೆ ಹೊಡೆತಕ್ಕೆ ಹೇಗೆ ಸತ್ತು ಬಿದ್ದಿದ್ದಾನೆ ನೋಡು ನಡೀ’ ಎನ್ನುತ್ತಾ ಕುತ್ತಿಗೆ ಹಿಡಿದುಕೊಂಡು ದಬ್ಬಿಕೊಂಡೇ ಬೈನೇ ತಟ್ಟಿಯಿಂದ ಗೋಡೆಯಂತೆ ಬೇಲಿ ಕಟ್ಟಿ ಮಾಡಿದ್ದ ಹುಲ್ಲುಹೊದಿಕೆಯ ಮನೆಯೊಳಗೆ ಬಸ್ರಾಜನ ತಲೆತೂರಿಸಿ ಕುಂಡೆಯ ಮೇಲೆ ಬೂಟಿರಿಸಿ ಬಿಸಿನೀರೊಲೆಗೆ ದೊಡ್ಡ ಸೌದೆ ಕೊರಡನ್ನು ತೂರಿಸುವಂತೆ ಮನೆಯೊಳಗೆ ನೂಕಲಾಯಿತು.
ಒಳಗಿನ ದೃಶ್ಯ ಕಂಡು ಬಸ್ರಾಜನ ಎದೆಯೇ ಒಡೆದಂತಾಯಿತು. ಸಂಜೀವ, ಜಬ್ಬ, ಡಿ.ಸಿ. ಸುಬ್ಬ ಮೂವರೂ ಬರೀ ಚಡ್ಡಿಯಲ್ಲಿ ಕುಳಿತಿದ್ದರು. ಈಗಾಗಲೇ ಅವರಿಗೆ ಸಮ್ಮಾ ಹೊಡೆತ ಬಿದ್ದಿದ್ದಕ್ಕೆ ಪುರಾವೆಯಿತ್ತು. ಸಾರಾಯಿ ಕುಡಿಯಲು ಬಂದವರು, ಈಗ ಎಕ್ಸೈಸ್ ಮತ್ತು ಪೋಲೀಸರ ಅತಿಥಿಗಳಾಗಿದ್ದರು. ಜಾರಪ್ಪ ನೆಲದ ಮೇಲೆ ಸತ್ತವನಂತೆ ಅಂಗಾತ ಬಿದ್ದುಕೊಂಡಿದ್ದ. ಒಲೆಯಲ್ಲಿ ಬೆಂಕಿ ಧಗಧಗನೆ ಉರಿಯುತ್ತಿತ್ತು. ಒಲೆಯ ಮೇಲೆ ಕಡುಬು ಬೇಯಿಸುವ ದೊಡ್ಡ ಪಾತ್ರೆಯೊಂದನ್ನು ಇಡಲಾಗಿತ್ತು. ಅದರ ಮುಚ್ಚಳವನ್ನು ಮಾತ್ರ ಉಲ್ಟಾ ಮುಚ್ಚಲಾಗಿತ್ತು. ಆ ಮುಚ್ಚಳದಲ್ಲಿ ನೀರನ್ನು ತುಂಬಿಸಿ, ಮುಚ್ಚಳವು ಪಾತ್ರೆಯನ್ನು ಸೇರುವ ಜಾಗದಲ್ಲಿ ಹಬೆ ಹೊರಹೋಗದಂತೆ ಹುತ್ತದ ಮಣ್ಣನ್ನು ನೀರಿನಲ್ಲಿ ಕಲೆಸಿ, ಅದರಲ್ಲಿ ಬಟ್ಟೆಯನ್ನು ನೆನೆಸಿ ಸುತ್ತಲಾಗಿತ್ತು. ನಾಲ್ಕಾರು ಕೊಡಗಳು ಬಕ್ಕಬಾರಲಾಗಿ ಬಿದ್ದಿದ್ದವು. ಕೊಡಗಳಲ್ಲಿದ್ದ ನೀರೆಲ್ಲ ಸಗಣಿ ಸಾರಿಸಿದ ನೆಲದ ಮೇಲೆ ಚೆಲ್ಲಾಡಿ, ಜಾರಪ್ಪ ನಿಜವಾಗಿಯೂ ಉಚ್ಚೆ ಹೋಯ್ದುಕೊಂಡಿದ್ದಾನೋ, ಅಥವಾ ಅವನು ಬಿದ್ದಲ್ಲೇ ಚೆಲ್ಲಾಡಿದ್ದ ನೀರಿನಲ್ಲಿ ನೆನೆದುಹೋಗಿದ್ದಾನೋ ಎಂಬ ಗೊಂದಲ ಉಂಟಾಗುವಂತಿತ್ತು. ಚೆಲ್ಲಾಡಿದ ನೀರು ಒಲೆಯೊಳಗೆ ಹರಿಯುತ್ತಾ ‘ಚುಸ್… ಚೂಂಯ್… ಬುಸ್…’ ಎಂಬ ಸದ್ದು ಮಾಡುತ್ತಿತ್ತು.
ಇತ್ತ ಜಾರಪ್ಪನ ಹೆಂಗಸು ಮಂಚವೆಂಬ ಮಂಚದ ಮೇಲೆ ಮಲಗಿ ಅಪಾರ ಹೊಟ್ಟೆನೋವಿನಿಂದ ಉರುಳಾಡುತ್ತಿದ್ದಳು. ಅವಳು ಹಾತರಿಸುವ ಅಬ್ಬರಕ್ಕೆ ಸುತ್ತಮುತ್ತಲಿನ ಕಾರ್ಮಿಕರ ಮನೆಯ ಸ್ಕೂಲಿಗೆ ಹೋಗದ ಮಕ್ಕಳು, ಕೆಲಸಕ್ಕೆ ಹೋಗದ ಮುದುಕ-ಮುದುಕಿಯರು ಪೋಲೀಸರಿದ್ದುದರಿಂದ ಹೆದರಿ ಮನೆಯೊಳಗಿನ ತಡಿಕೆ ಹಿಂದಿನಿAದ, ಬೇಲಿಸಂದಿಯಿಂದಲೇ ಇಣುಕಿ ನೋಡಿ, ‘ಅಂಚಿನ ಇಂಚಿನ’ ಎಂದು ತುಳುವಿನಲ್ಲೇ ಪಿಸುಮಾತಿನಲ್ಲಿ ಗುಸುಗುಡತೊಡಗಿದರು. ಸಾರಾಯಿ ಮಾರಿ, ಮಾರಿಯೇ ಒಳ್ಳೆ ದುಡ್ಡು ಮಾಡಿಕೊಂಡಿದ್ದ ಜಾರಪ್ಪನ ಮೇಲೆ ಅಸೂಯೆಪಡುತ್ತಿದ್ದ ನೆರೆಹೊರೆಯವರು ಒಳಗೊಳಗೇ ಈ ನನ್ ಮಗ್ನಿಗೆ ಹಂಗೇ ಆಗಬೇಕು ಎಂದು ಖುಷಿಪಡುತ್ತಿದ್ದರು. ಜಾರಪ್ಪನ ಮನೆಯ ನಾಯಿಗಳು ಸೀಮೇಸೀಗೆ ಲಂಟಾನದೊಳಗೆ ಅಡಗಿ ನಿಂತು ಪುರುಸೊತ್ತಿಲ್ಲದಂತೆ ಬೊಗಳತೊಡಗಿದವು. ಈ ಗಲಾಟೆಯಿಂದ ಸುತ್ತಮುತ್ತಲ ಮನೆಯ ನಾಟಿಕೋಳಿಗಳು ಸ್ಪರ್ಧೆಗೆ ಬಿದ್ದವರಂತೆ ಅಖಂಡವಾಗಿ ಕ್ಯಾಕರಿಸುತ್ತಾ ಅಂತೂ ಒಂದು ದೊಡ್ಡ ಗಲಭೆಯನ್ನೇ ಏಳಿಸಿ ಪೋಲೀಸರಿಗೂ, ಎಕ್ಸೆöÊಸಿನವರಿಗೂ ಯಾಕಪ್ಪಾ ಇಲ್ಲಿಗೆ ಬಂದೆವು ಎನ್ನಿಸುವಂತೆ ಮಾಡಿದ್ದವು. ಜೀವ ಹೋಗುವಂತೆ ಬೊಬ್ಬಿರಿಯುತ್ತಿದ್ದ ಜಾರಪ್ಪನ ಹೆಂಗಸು ಜಪ್ಪಯ್ಯಾ ಎಂದರೂ ಮಂಚ ಬಿಟ್ಟು ಏಳುತ್ತಿರಲಿಲ್ಲ. ಎರಡೂ ಕಾಲುಗಳನ್ನು ಮಂಡಿಯ ಬಳಿ ಮೇಲೆ ಮಾಡಿಕೊಂಡು ಕೈಗಳಿಂದ ಮಂಡಿಯನ್ನು ತಬ್ಬಿ ಹಿಡಿದು ತುಳುವಿನಲ್ಲಿ ಆಲಾಪನೆ ನಡೆಸುತ್ತಿದ್ದಳು. ಮಧ್ಯೆ ಮಧ್ಯೆ ಪೋಲೀಸರಿಗೂ ಅರ್ಥವಾಗಲೆಂದು ಕನ್ನಡದಲ್ಲಿಯೂ ತನ್ನ ಆಲಾಪನೆಗೆ ವಿವರಣೆಯನ್ನು ನೀಡಿ ಅಗತ್ಯವಿದ್ದ ತರ್ಜುಮೆ ಕಾರ್ಯವನ್ನು ತಾನೇ ನಿರ್ವಹಿಸುತ್ತಾ ದ್ವಿಭಾಷಾ ಪ್ರಲಾಪವನ್ನು ಮುಂದುವರೆಸುತ್ತಿದ್ದಳು.
‘ನನ್ನ ಗಂಡನ್ನ ಕೊಂದಾಕಿದ್ರಲ್ಲೋ ರಾಕ್ಷಸ್ರಾ, ನಿಮ್ಮ ಹೆಂಡ್ರು ಮುಂಡೇರಾಗ್ಲಿ, ನಾನು ಹೊಟ್ಟೆ ನೋವಿನಿಂದ ಮಲಗದೇ ಇದ್ದಿದ್ರೆ ನಿಮ್ಮನ್ನೆಲ್ಲ ಇವತ್ತು ಪಂಜುರ್ಲಿ ಭೂತಕ್ಕೆ ಬಲಿ ಕೊಡ್ತಿದ್ದೆ, ನಾಯಿದ ಮಗೆ’ ಎಂದು ಏನೇನೋ ಬಾಯಿಮಾಡುತ್ತ ಇದ್ದಳು. ಇವಳ ಕೂಗಾಟಕ್ಕೆ ರೋಸಿ ಹೋದ ಎಕ್ಸೈಸ್ಸಿನವನೊಬ್ಬ ‘ಎಲ್ಲಿ ನಿನ್ನ ಭೂತ? ತೋರಿಸು ನನಗೂ’ ಎಂದವನೆ ಅವಳನ್ನು ರಟ್ಟೆ ಹಿಡಿದು ಮಂಚದಿಂದ ಕೆಳಗೆಳೆದ. ಆಗ ಮಾರಾಟ ಮಾಡಲು ಅಡಗಿಸಿಟ್ಟುಕೊಂಡಿದ್ದ ಷರಾಬಿನ ಕರೀ ಕ್ಯಾನೊಂದು ಅವಳ ಸೀರೆಯೊಳಗಿಂದ ಬಡಲ್! ಎಂದು ನೆಲಕ್ಕೆ ಬಿದ್ದು, ಅವಳ ಹೊಟ್ಟೆ ನೋವಿನ ಕಾರಣ ತಿಳಿಸಿತು.
ಈ ಗಂಡ-ಹೆಂಡಿರ ನಾಟಕ ಮುಗಿಯುವ ಸೂಚನೆ ಕಾಣದೇ ಕಿರಿಕಿರಿಗೊಳಗಾದ ಎಕ್ಸೈಸ್ ನನೊಬ್ಬ ಅಲ್ಲೇ ಬೇಲಿ ಮೇಲೆ ಕೂತು ತನ್ನ ಕತ್ತನ್ನು ಹಿಂದೆ ಮುಂದೆ ಆಡಿಸುತ್ತಾ ಈ ಕಳ್ಳಭಟ್ಟಿ ಗದ್ದಲವನ್ನು ಅವಲೋಕಿಸುತಿದ್ದ ಮುಳ್ಳು ಮುಳ್ಳು ಕರಿಬೆನ್ನಿನ ಕೇಸರಿ ತಲೆಯ ಓತಿಕ್ಯಾತವನ್ನು ಹಿಡಿದುಕೊಂಡು ಬಂದು ಜಾರಪ್ಪನಿಗೆ ‘ಕಳ್ಳನನ್ಮಗನೇ ಈಗ ಎದ್ದೇಳಲಿಲ್ಲ ಅಂದ್ರೆ ಈ ಓತಿಕ್ಯಾತನ್ನ ಎಲ್ಲಿಗೆ ಬಿಡ್ತೀನಿ ಗೊತ್ತಾ?’ ಎಂದೊಡನೆ ದಡಬಡಿಸಿ ಮೇಲೆದ್ದ ಜಾರಪ್ಪ ಸೀದಾ ಓಡಿ ಹೋಗಿ ಕೊಡ-ಕ್ಯಾನುಗಳನ್ನು ಪಕ್ಕಕ್ಕೆ ಸರಿಸಿ ಎಕ್ಸೈಸ್ ನ ಜೀಪಿನೊಳಗೆ ತೂರಿಕೊಂಡ. ಪೋಲೀಸರಿಗೆ ಇನ್ನು ಈ ಸೀನಿನ ಪರದೆ ಬಿತ್ತು ಎಂದೆನಿಸಿ, ಬಸ್ರಾಜ, ಡಿ.ಸಿ. ಸುಬ್ಬ, ಜಬ್ಬ, ಸಂಜೀವರನ್ನು ನಿಲ್ಲಿಸಿ ತಿಕದ ಮೇಲೆ ಲಾಠಿಯಿಂದ ನಾಲ್ಕು ನಾಲ್ಕು ಬಾರಿಸಿ ‘ಬೋಳಿಮಕ್ಳೇ, ಕೊಡ, ಕ್ಯಾನ್, ಪಾತ್ರೆಯನ್ನೆಲ್ಲಾ ಹೊತ್ಕಳಿ’ ಎಂದವರೇ ಹೊರಡುವುದರಲ್ಲಿದ್ದರು.
