ಮನುಷ್ಯ ಸುಖವಾಗಿ ಬಾಳಬೇಕಾದರೆ ಇರುವುದಕ್ಕೆ ಒಂದು ಮನೆ, ಉಡುವುದಕ್ಕೆ ಬಟ್ಟೆ, ಹೊಟ್ಟೆತುಂಬ ಊಟ ಮತ್ತು ಒಳ್ಳೆಯ ಆರೋಗ್ಯ ಅತ್ಯಗತ್ಯ. ಈ ಪಟ್ಟಿಯಲ್ಲಿ ಆರೋಗ್ಯಕ್ಕೆ ಎಲ್ಲಕ್ಕಿಂತ ಹೆಚ್ಚು ಮನ್ನಣೆ ಕೊಡಲಾಗುತ್ತದೆ.. ಇದಕ್ಕೆ ಕಾರಣ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಮನೆ, ಬಟ್ಟೆ, ರುಚಿಕರವಾದ ಆಹಾರ, ಕಾರು ಒಡವೆಗಳಿಂದ ಸಂತೋಷ ಪಡೆಯಲು ಸಾಧ್ಯ. ಉತ್ತಮ ಆರೋಗ್ಯವಿಲ್ಲದಿದ್ದರೆ ಯಾವ ಐಶ್ವರ್ಯದಿಂದಲೂ ಪ್ರಯೋಜನವಿಲ್ಲ. ಅದರಿಂದಲೇ ಆರೋಗ್ಯವೇ ಭಾಗ್ಯ ಎಂಬ ಮಾತು ವಾಡಿಕೆಯಲ್ಲಿದೆ. “It is health that is real wealth and not pieces of gold and silver” ಎಂದು ಗಾಂಧೀಜಿ ಅವರು ಕೂಡ ಹೇಳಿದ್ದಾರೆ.
ಆದ್ದರಿಂದ ಆರೋಗ್ಯ ಭಾಗ್ಯ ಮಿಕ್ಕೆಲ್ಲ ಭಾಗ್ಯಗಳಿಗಿಂತಲೂ ಹೆಚ್ಚು ಮುಖ್ಯ. ಇದು ನಾನು ಕಂಡುಹಿಡಿದ ಹೊಸ ವಿಷಯವೇನಲ್ಲ. ಎಲ್ಲರಿಗೂ ಎಲ್ಲ ಕಾಲದಲ್ಲೂ ತಿಳಿದಿರುವ ವಿಚಾರ. ಹಾಗಿರುವಾಗ ಪ್ರತಿವ್ಯಕ್ತಿಯೂ ತನ್ನ ಆರೋಗ್ಯದ ಬಗ್ಗೆ ಅತ್ಯಂತ ಹೆಚ್ಚು ನಿಗಾ ಇಟ್ಟುಕೊಳ್ಳಬೇಕು ಎಂಬುದು ಸರ್ವವಿದಿತವಾಗಿದೆ ತಾನೇ. ಹಾಗಿದ್ದೂ ವ್ಯಕ್ತಿ ತನ್ನ ಆರೋಗ್ಯದ ವಿಚಾರ ಯೋಚಿಸುವುದು ಅದು ಶರೀರದಲ್ಲಿ ಕಡಿಮೆಯಾಗಿ ತೊಂದರೆ ಶುರುವಾದಾಗ ಮಾತ್ರ. ಉದಾಹರಣೆಗೆ ನಮ್ಮ ಬಾಯಿನಲ್ಲಿ ಇರುವ ಹಲ್ಲನ್ನೇ ನೋಡೋಣ. ನಾವು ನಮ್ಮ ಬಾಯಿನಲ್ಲಿರುವ ಹಲ್ಲನ್ನು ಎಂದೂ ಗಮನಿಸಿದ್ದೇ ಇಲ್ಲ. ಆದರೂ ಅದು ನಾವು ಹುಟ್ಟಿದಾಗಿನಿಂದ ನಮ್ಮ ಬಾಯಲ್ಲಿದ್ದು ನಾವು ಯಾವ ತಿಂಡಿ, ಹಣ್ಣು, ಊಟ, ದೋಸೆ, ಚಪಾತಿ, ವಡೆ ಇಡ್ಲಿ ಸಾಂಬಾರ್ ಮೈಸೂರ್ ಪಾಕ್ ಹೀಗೆ ಏನೇ ಹಾಕಿದರೂ ಅದನ್ನು ಅಗಿದು. ಅದರ ರುಚಿ, ಘಮಗಳನ್ನು ನಮ್ಮ ಬಾಯಿನಲ್ಲಿ ಕುದುರಿಸಿ ನಮ್ಮ ರಸಾನುಭವವನ್ನು ಹೆಚ್ಚಿಸಿದೆ. ಆದರೂ ಹಲ್ಲಿಗೆ ನಾವು ಯಾವ ರೀತಿಯ ಮನ್ನಣೆ ಅಥವಾ ಕೃತಜ್ಞತೆಯನ್ನೂ ತೋರಿಸಿದ್ದಿಲ್ಲ. ಹೀಗಿರುವಾಗ ಇದ್ದಕ್ಕಿದ್ದಂತೆ ಒಂದು ದಿನ ಹಲ್ಲು ನೋವು ಶುರುವಾದಾಗ ನಮಗೆ ಹಲ್ಲಿನ ಅಸ್ತಿತ್ವ ಬರುತ್ತದೆ. ಆಗ ನಾವು ಯಾವ ತಿಂಡಿಯನ್ನೂ ಬಯಸುವುದಿಲ್ಲ. ಅಷ್ಟೇ ಅಲ್ಲ ನಮ್ಮ ಪ್ರೀತಿಯ ತಿಂಡಿ ಎದುರಿಗೇ ಇದ್ದರೂ ಅದನ್ನು ಬಾಯಿಗೆ ಹಾಕಿಕೊಳ್ಳುವ ಇಚ್ಛೆ ಬರುವುದಿಲ್ಲ. ಹಲ್ಲುನೋವಿಗೆ ಏನು ಮಾಡಬೇಕು ಎಂದು ಕಂಡವರನ್ನೆಲ್ಲ ಕೇಳುತ್ತೇವೆ. ಕೆಲವರು ಉಪ್ಪು ನೀರು ಕುಪ್ಪಳಿಸಿ ಎನ್ನುತ್ತಾರೆ. ಇನ್ನೊಬ್ಬರು ಲವಂಗ ಬಾಯಿಗೆ ಹಾಕಿಕೊಳ್ಳಿ ಎನ್ನುತ್ತಾರೆ. ನಾವು ಏನುಮಾಡುವುದಕ್ಕೂ ತಯಾರಾಗುತ್ತೇವೆ. ದಂತವೈದ್ಯರನ್ನು ಹುಡುಕಿಕೊಂಡು ಭರಬಿದ್ದು ಓಡುತ್ತೇವೆ. ಆದ್ದರಿಂದ ನಾವು ನಮ್ಮ ಆರೋಗ್ಯಕ್ಕೆ ಗಮನ ಕೊಟ್ಟು ಅದನ್ನು ಕಾಪಾಡಿಕೊಳ್ಳಬೇಕೆಂದು ಎಲ್ಲರಿಗೂ ಗೊತ್ತಿದೆ. ನಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ನಾವು ಕೆಲವು ಸುಲಭವಾದ ನಿಯಮಗಳನ್ನು ಪಾಲಿಸಬೇಕು. ಹಿತಮಿತವಾದ ಊಟ, ವ್ಯಾಯಾಮ ಇವು ಅತ್ಯಗತ್ಯ.

ನಮ್ಮಲ್ಲಿ ಅನೇಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡವರೇ ಅಲ್ಲ. ಇಷ್ಟ ಬಂದದ್ದನ್ನು ತಿನ್ನುತ್ತಾ, ಕುಡಿಯುತ್ತಾ, ದಿನವೂ ಮದುವೆ, ಮುಂಜಿ, ತಿಥಿ, ಹಬ್ಬ, ಹರಿದಿನ, ಗ್ರಹಪ್ರವೇಶ, ದೇವರ ಸಮಾರಾಧನೆ ಹುಟ್ಟಿದ ಹಬ್ಬಗಳು, ಹೋಟೆಲ್ ಊಟಗಳು ಹೀಗೆ ಯಾವಯಾವ ನೆಪವನ್ನೂ ಹುಡುಕಿ ಮಿತಿಮೀರಿ ಊಟ ಮಾಡುತ್ತಾ, ತಮ್ಮ ಆರೋಗ್ಯವನ್ನು ಅಲಕ್ಷ್ಯಮಾಡುತ್ತಾರೆ. ಸಿಹಿ ತಿಂಡಿಗಳು, ಎಣ್ಣೆಯಲ್ಲಿ ಕರಿದ ಬೋಂಡಾ, ಚೆಕ್ಕುಲಿ, ಮಸಾಲವಡೆ ಇನ್ನೂ ಅನೇಕ ವಿಧವಾದ ಖಾದ್ಯ ಪದಾರ್ಥಗಳನ್ನು ಸದಾ ಮೇಯುತ್ತಾ ಮೈಗಳ್ಳರಾಗಿ ನಾನು ಕಲ್ಲನ್ನೂ ತಿಂದು ಅರಗಿಸಿಕೊಳ್ಳಬಲ್ಲೆ. ಆರೋಗ್ಯದಲ್ಲಿ ನನಗೆ ಸಮಾನವಾದವರು ಯಾರೂ ಇಲ್ಲವೇ ಇಲ್ಲ. ಎಂದು ಜಂಬ ಕೊಚ್ಚಿಕೊಳ್ಳುತ್ತಾರೆ. ಚಿಕ್ಕವಯಸ್ಸಿನ ಯುವಕರಲ್ಲಿ ಈ ತರ್ಕ ನಡೆಯಬಹುದು. ಆದರೆ ಇದು ತಾತ್ಕಾಲಿಕ. ಕೆಲವೇ ವರ್ಷಗಳಲ್ಲಿ ಮೈಯ್ಯಲ್ಲಿ ತೂಕ ಹೆಚ್ಚಾಗುತ್ತದೆ. ಹಿಂದಿನ ಕಾಲದಲ್ಲಿ ಜನರಿಗೆ ಅಷ್ಟು ಆರ್ಥಿಕ ಸೌಕರ್ಯ ಇರುತ್ತಿರಲಿಲ್ಲವಾಗಿ ಅವರು ಊಟ ತಿಂಡಿಗಳ ಬಗ್ಗೆ ಹಿತಮಿತವಾಗಿ ಇರುತ್ತಿದ್ದರು. ಊಟದಲ್ಲಿ ಅಷ್ಟು ತುಪ್ಪ, ಎಣ್ಣೆ, ಬೆಣ್ಣೆ ಸಕ್ಕರೆ, ಮೈದಾ ಇರುತ್ತಿರಲಿಲ್ಲ. ಈಗ ಹೆಚ್ಚು ಜನರ ಜೀವನ ಆರ್ಥಿಕವಾಗಿ ಸುಧಾರಿಸಿದೆ. ಇದು ಸಂತೋಷದ ವಿಚಾರ. ಇದನ್ನು ಜನ ತಮ್ಮ ಒಳಿತಿಗಾಗಿ ಉಪಯೋಗಿಸಿಕೊಳ್ಳಬೇಕು. ಆದೂ ಅಲ್ಲದೆ ಆ ಕಾಲದಲ್ಲಿ ಬಸ್ಸು ಕಾರುಗಳ ಸೌಕರ್ಯ ಅಷ್ಟು ಇರಲಿಲ್ಲವಾಗಿ ಎಲ್ಲರೂ ತಮ್ಮ ತಮ್ಮ ಕೆಲಸಗಳಿಗೆ ನಡೆದುಕೊಂಡೇ ಹೋಗಬೇಕಾಗಿತ್ತು. ಮನೆಕೆಲಸ, ದನಕರುಗಳ ಪಾಲನೆ, ವ್ಯವಸಾಯ ಹೀಗೆ ಎಲ್ಲರಿಗೂ ಯಥೇಚ್ಛವಾಗಿ ವ್ಯಾಯಾಮ ಸಿಗುತ್ತಿತ್ತು. ಈಗ ಸಾರಿಗೆ ವ್ಯವಸ್ಥೆಗಳು ತುಂಬಾ ಸುಧಾರಿಸಿವೆ. ಪ್ರತಿಮನೆಯಲ್ಲೂ ಸ್ಕೂಟರ್, ಕಾರುಗಳಿದ್ದು, ಯಾರೂ ಕಾಲಿಗೆ ವ್ಯಾಯಾಮ ಕೊಡಬೇಕಾದ ಅವಶ್ಯಕತೆಯೇ ಇಲ್ಲವಾಗಿದೆ. ಹಿಂದಿನ ಕಾಲದಲ್ಲಿ ಮನೆಗೆ ಯಾರಾದರೂ ನೆಂಟರು ಬರುತ್ತಾರೆ ಎಂದರೆ ಮನೆಯ ಹೆಂಗಸರಿಗೆ ಕೆಲಸ ಜಾಸ್ತಿ ಯಾಗುತಿತ್ತು. ಆದರೆ ಈ ಆಧುನಿಕ ಯುಗದಲ್ಲಿ ಹೆಂಗಸರು ಹೆಚ್ಚು ಕೆಲಸ ಮಾಡಬೇಕಾಗಿಲ್ಲ. ಇಷ್ಟ ಬಂದರೆ ಮಾಡಬಹುದು. ಇಲ್ಲದಿದ್ದರೆ ಬೇಕಿಲ್ಲ. ಅದರಲ್ಲೂ ಅನೇಕ ಹೆಂಗಸರು ಹೊರಗೆ ಉದ್ಯೋಗ ಮಾಡುತ್ತಾರೆ. ಅವರಿಗೆ ಮನೆ ಕೆಲಸ ಮಾಡುವುದಕ್ಕೆ ಖಂಡಿತ ಸಮಯ ಸಿಕ್ಕುವುದಿಲ್ಲ. ಈಗ ಬೆಂಗಳೂರು ಮತ್ತು ಇತರ ದೊಡ್ಡ ನಗರಗಳಲ್ಲಿ ಬೀದಿ ಬೀದಿಯಲ್ಲೂ ರುಚಿ ರುಚಿಯಾದ ತಿಂಡಿ, ಊಟಗಳನ್ನೂ ತಯಾರಾಗಿ ಮಾರುವ ಅಂಗಡಿಗಳು ಇವೆ. ಅಲ್ಲಿಯೇ ಹೋಗಿ ಕುಳಿತು ತಿನ್ನಬಹುದು ಇಲ್ಲ ಮನೆಗೆ ಕಟ್ಟಿಸಿಕೊಂಡು ಬರಬಹುದು. ಸಿಹಿ ಪದಾರ್ಥಗಳನ್ನು ಮಾಡಿ ರೆಡಿಯಾಗಿ ಇಟ್ಟಿರುವ ಆಶಾ ಸ್ವೀಟ್ಸ್, ಕಾಂತಿಸ್ವೀಟ್ಸ್, ನಂದಿನಿ ಪಾರ್ಲರ್, ಹೋಳಿಗೆಮನೆ ಮುಂತಾದುವು ಬಹಳ ಜನಪ್ರಿಯವಾಗಿವೆ. ಹೀಗೆ ಕಷ್ಟಪಡದೇ ರುಚಿ ರುಚಿಯಾದ ಊಟ ಮಾಡುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಇದು ಬಹಳ ಮಜಾ ಎನ್ನಿಸುತ್ತದೆ. ಆದರೆ ಈ ಖುಷಿಗೆ ಬರುವ ಧಕ್ಕೆ ನಮ್ಮ ಶರೀರ ಸ್ಥೂಲವಾದಾಗ. ಇದ್ದಕ್ಕಿದ್ದಂತೆ ನಾನು ದಪ್ಪನಾಗುತ್ತಿದ್ದೇನೆ ಎನ್ನುವ ಒಳಧ್ವನಿ ಕೇಳಿಸಲು ಶುರುವಾಗುತ್ತದೆ. ಆದರೆ ಅದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸು ತಯಾರಿಲ್ಲ. ಅಂಗಿ, ರವಿಕೆ ಬಿಗಿಯಾದ ಕಾರಣ ಏನು ಎಂದು ಹೊರಗಿನ ಕಾರಣ ಹುಡುಕುತ್ತೇವೆ. “ನೋಡು ಈ ಬ್ಲೌಸ್ ಒಂದು ಸಲ ನೀರಿಗೆ ಹಾಕಿದ ಕೂಡಲೇ ಶೃಂಕ್ ಆಗಿದೆ.” ಎನ್ನುತ್ತೇವೆ. ಆದರೆ ನೀರನ್ನೇ ಕಾಣದ ಪೆಟ್ಟಿಗೆಯಲ್ಲಿ ಮಡಿಸಿ ಇಟ್ಟಿರುವ ಸಿಲ್ಕ್ ರವಿಕೆ ಶೃಂಕ್ ಆಗುವುದಕ್ಕೆ ಏನು ಕಾರಣ? ಅದಕ್ಕೆ ಬಟ್ಟೆ ಹೊಲೆದ ದರ್ಜಿಯೇ ಕಾರಣ ಎಂದು ತೀರ್ಪು ಕೊಡುತ್ತೇವೆ. ಕರೆಕ್ಟ್ ಆಗಿರುವ ಅಳತೆ ಬ್ಲೌಸ್ ಕೊಟ್ಟಿದ್ದೆ. ಆದರೂ ಎಷ್ಟು ಬಿಗಿಯಾಗಿ ಹೊಲೆದಿದ್ದಾನೆ ನೋಡು. ಉಸಿರು ಬಿಡುವುದಕ್ಕೇ ಆಗುವುದಿಲ್ಲ ಎಂದು ನಿರಪರಾಧಿಯಾದ ದರ್ಜಿಯನ್ನೇ ಬೈಯುತ್ತೇವೆ. ಆದರೆ ನಮ್ಮ ಒಳಗುಟ್ಟು ನಮಗೇ ಗೊತ್ತಿದೆ. ನನ್ನ ದೇಹದ ತೂಕ ಜಾಸ್ತಿ ಆಗುತ್ತಿದೆ. ಊಟ ಕಡಿಮೆ ಮಾಡಬೇಕು. ದಿನವೂ ವಾಕಿಂಗ್ ಮಾಡಬೇಕು. ಯೋಗ ಕ್ಲಾಸ್ ಸೇರುವುದು ಒಳ್ಳೆಯದು ಎಂಬ ಯೋಚನೆ ಬರುತ್ತದೆ. ಆದರೆ ಶರೀರ ಸ್ಥೂಲವಾದಷ್ಟೂ ವ್ಯಾಯಾಮ ಮಾಡುವುದು ಹೆಚ್ಚು ಕಷ್ಟವಾಗುತ್ತದೆ. ನಡೆಯುವಾಗ ಏದುಸಿರು ಬರುತ್ತದೆ. ಅನೇಕರಿಗೆ ಡಾಕ್ಟರು ನಿಮಗೆ ಬ್ಲಡ್ ಪ್ರೆಷರ್ ಜಾಸ್ತಿಯಾಗುತ್ತಿದೆ. ನೀವು ವ್ಯಾಯಾಮ ಮಾಡಿ. ತೂಕ ಕಡಿಮೆ ಮಾಡಿಕೊಳ್ಳಿ ಎಂದು ಬಹಳ ಸೂಕ್ಷ್ಮವಾಗಿ ಹೇಳುತ್ತಾರೆ. ಇದನ್ನು ಕೇಳಿದಾಗ ನಮಗೆ ಡಾಕ್ಟರರ ಮೇಲೆಯೇ ಅಸಮಾಧಾನವಾಗುತ್ತದೆ.

ಬ್ಲಡ್ ಪ್ರೆಷರ್ ವಿಚಾರ ಹೇಳುವಾಗ ನನಗೆ ನನ್ನ ಚಿಕ್ಕಪ್ಪ (ನನ್ನ ತಂದೆಯವರ ಸ್ವಂತ ತಮ್ಮ) ಪಂಡಿತ ನರಸಿಂಹಾಚಾರ್ ಅವರ ಜ್ನ್ಯಾಪಕ ಬರುತ್ತದೆ. ಅವರು ಬಹಳ ವೈದೀಕರು. ಶ್ರದ್ಧಾವಂತರು. ಸಂಸೃತ, ಕನ್ನಡ ಹಾಗೂ ಹಿಂದಿ ಪಂಡಿತರು. ಊಟ ತಿಂಡಿಗಳಲ್ಲಿ ಬಹಳ ನಿಯಮವಾಗಿ ಇರುವವರು. ಏಕಾದಶಿಯ ದಿನ ಸಂಪೂರ್ಣ ಉಪವಾಸ ಮಾಡುತ್ತಿದ್ದರು. ಅವರು ಬೆಂಗಳೂರಿನಲ್ಲಿ ಎಲ್ಲಿಂದ ಎಲ್ಲಿಗೂ ನಡೆದುಕೊಂಡೇ ಹೋಗುತ್ತಿದ್ದರು. ಆಟೋರಿಕ್ಷಾ ಹತ್ತಿದವರೇ ಅಲ್ಲ. ಅವರು ಪ್ರತಿವರ್ಷ ಚಾತುರ್ಮಾಸ್ಯ ಎಂಬ ವ್ರತವನ್ನು ಪಾಲಿಸುತ್ತಿದ್ದರು. ಅದು ಬಹಳ ಕಷ್ಟಕರವಾದ ವ್ರತ. ವರ್ಷದಲ್ಲಿ ನಾಲ್ಕು ತಿಂಗಳು, ಪ್ರತಿತಿಂಗಳೂ ನಿರ್ದಿಷ್ಠವಾದ ಪದಾರ್ಥಗಳನ್ನು ವರ್ಜಿಸಿ ಊಟ ಮಾಡಬೇಕು. ಕೊನೆಯ ತಿಂಗಳಿನಲ್ಲಿ ಉಪ್ಪಿಲ್ಲದೆ ಊಟಮಾಡಬೇಕು. ಇಂತಹ ಕಠಿಣ ವ್ರತವನ್ನು ಅನೇಕ ವರ್ಷಗಳ ಕಾಲ ಪಾಲಿಸಿ ಜಯಿಸಿದ ಅವರಿಗೆ ನಾವು ಸದಾಕಾಲವೂ ಮೇಯುತ್ತಿರುವುದನ್ನು ನೋಡಿ ಮನಸ್ಸಿಗೆ ಕಷ್ಟವಾಗಿದ್ದಿರಬೇಕು. ಅವರು ಯಾವುದನ್ನೂ ಖಡಾಖಂಡಿತವಾಗಿ ಹೇಳುವವರು. ಆದರೆ ಅವರ ಮನಸ್ಸು ಒಳ್ಳೆಯದು. ಅವರು ಮೃದುಹೃದಯದವರು. ಅವರ ಮಾತೇ ಗಡಸು. ಈ ಕಾರಣದಿಂದ ನಾವು ಚಿಕ್ಕಂದಿನಿಂದಲೂ ಅವರೊಡನೆ ಎಷ್ಟೋ ಅಷ್ಟೇ ಮಾತನಾಡುತ್ತಿದ್ದೆವು. ಒಮ್ಮೆ ನಾನು ಡಾಕ್ಟರ್ ಬಳಿ ಹೋಗಿ ವಾಪಸ್ಸು ಬಂದಾಗ ಅವರು ಕಾಳಜಿಯಿಂದ ಡಾಕ್ಟರ್ ಏನು ಹೇಳಿದರು ಎಂದು ವಿಚಾರಿಸಿದರು. ಡಾಕ್ಟರ್ ನನಗೆ ಬ್ಲಡ್ ಪ್ರೆಷರ್ ಜಾಸ್ತಿ ಆಗಿದೆ ಎಂದು ಹೇಳಿದರು ಎಂದೆ. ಅವರು ನಿರ್ದಾಕ್ಷಿಣ್ಯವಾಗಿ “ಅದು ಬ್ಲಡ್ ಪ್ರೆಷರ್ ಅಲ್ಲ. ಫುಡ್ ಪ್ರೆಷರ್. ನಿನಗೆ ಬ್ಲಡ್ ಪ್ರೆಷರ್ ಹೆಚ್ಚಾಗಿರುವುದಕ್ಕೆ ಇಷ್ಟೇ ಕಾರಣ. ಆಹಾರ ಜಾಸ್ತಿ ಆಗಿದೆ. ನೀನು ಊಟ ತಿಂಡಿಗಳನ್ನು ತಿನ್ನುವುದು ಕಡಿಮೆ ಮಾಡಿಕೋ. ದಿನಾ ಒಂದುಘಂಟೆ ಕಾಲ ನಡೆಯುವ ಅಭ್ಯಾಸ ಇಟ್ಟುಕೋ. ನಿನ್ನ ಬ್ಲಡ್ ಪ್ರೆಷರ್ ತಾನಾಗಿಯೇ ಹತೋಟಿಗೆ ಬರುತ್ತದೆ.” ಎಂದು ತೀರ್ಮಾನ ಕೊಟ್ಟರು. ನಾನು ಅವರಿಂದ ಸಹಾನುಭೂತಿಯನ್ನು ನಿರೀಕ್ಷಿಸಿದ್ದೆ. ಅದರ ಬದಲು ಅವರ ಈ ನಿರ್ಣಯವನ್ನು ಕೇಳಿ ನನಗೆ ಸ್ವಲ್ಪ ಅಪಮಾನವಾದಂತಾಯಿತು. ಮುಖ ಪೆಚ್ಚಾಯಿತು. ಅಲ್ಲಿಯೇ ನಿಂತಿದ್ದ ಅವರ ಮಗಳು ಹೆಚ್ಚು ಮಾತನಾಡಬೇಡ ಎಂಬಂತೆ ಸನ್ನೆ ಮಾಡಿದಳು. ಆಮೇಲೆ ಅಣ್ಣ ಹತ್ತಿರ ಯಾಕೆ ಹೇಳುವುದಕ್ಕೆ ಹೋದೆ. ಅವರಿಗೆ ಗೊತ್ತಿರುವುದು ತಲೆಗೆಲ್ಲಾ ಒಂದೇ ಮಂತ್ರ. “ಲಂಘನಮ್ ಪರಮೌಷಧಂ” ಎಂದು ನಕ್ಕಳು. ಆದರೆ ನನಗೆ ಮಾತ್ರ ಅವರು ಹೇಳಿದ್ದು ನೂರಕ್ಕೆ ನೂರು ನಿಜ ಎನ್ನಿಸಿತು.
ನಮ್ಮ ತೂಕ ಹೆಚ್ಚಾಗಿರುವುದಕ್ಕೆ ಆಧುನಿಕ ಯುಗದಲ್ಲಿ ಅನೇಕ ಕಾರಣಗಳು ಇವೆ ಎಂದು ಹೇಳಿದೆನಷ್ಟೆ. ಸೃಷ್ಟಿಕರ್ತನ ತಪ್ಪೂ ಇದರಲ್ಲಿ ಇದೆ ಎನ್ನಿಸುತ್ತದೆ. ಅದು ಹೇಗೆ ಎಂದು ನೀವು ಕೇಳಬಹುದು. ದೇವರು ಮನುಷ್ಯನ ಶರೀರವನ್ನು ಸೃಷ್ಟಿಸಿದಾಗ ಪ್ರತಿಯೊಬ್ಬ ಜೀವಿಗೂ ಒಂದು ತಲೆ, ಎರಡು ಕಣ್ಣು, ಎರಡು ಕಿವಿ, ಒಂದು ಮೂಗು, ಎರಡು ಕೈ, ಎರಡು ಕಾಲು ಹೀಗೆ ನಿಗದಿಯಾಗಿ ಕೊಟ್ಟಿದ್ದಾನೆ. ಆದರೆ ನಮ್ಮ ಮೈಯ್ಯನ್ನು ಸುತ್ತಿರುವ ಚರ್ಮಕ್ಕೆ ಇಷ್ಟೇ ಎಂಬ ನಿಗದಿಯೇ ಇಲ್ಲ. ಅದು ನಾವು ದಪ್ಪನಾದಷ್ಟೂ ಹಿಗ್ಗುತ್ತಾ ಹೋಗುತ್ತದೆ. ಒಂದು ಪಕ್ಷ ಹಾಗಿಲ್ಲದೇ ನಾವು ತಿನ್ನುತ್ತಿರುವಾಗಲೇ ಆ ಕ್ಷಣದಲ್ಲೇ ನಮ್ಮ ಹೊಟ್ಟೆ ದಪ್ಪನಾಗಿ ಊದುತ್ತಾ ಚರ್ಮ ಬಿಗಿಯಾಗುತ್ತಾ ಪಟಾರ್ ಎಂದು ಹರಿದುಹೋಗಿ ನಾವು ತಿಂದಿದ್ದೆಲ್ಲ ಹೊರಕ್ಕೆ ಚೆಲ್ಲಿ ನಾವು ಎಷ್ಟು ತಿಂದಿದ್ದೇವೆ ಎಂದು ಎಲ್ಲರಿಗೂ ಕಾಣಿಸುವಂತಾಗಿದ್ದರೆ ನಮಗೆ ಆಗುವ ಅವಮಾನವನ್ನು ಊಹಿಸಿಕೊಳ್ಳಿ. ತಕ್ಷಣವೇ ಹೊಟ್ಟೆಗೆ ತುರುಕುವುದನ್ನು ನಿಲ್ಲಿಸಬೇಕಾಗಿತ್ತಿತ್ತು. ಅದಕ್ಕೇ ದೇವರು ನಮ್ಮ ಮೇಲೆ ಕರುಣೆ ಇಟ್ಟು ಈ ವರವನ್ನು ಕರುಣಿಸಿದ್ದಾನೆ ಎನ್ನಿಸುತ್ತದೆ.
ನಾನು ಮೊದಲೇ ಹೇಳಿದಂತೆ ಆರ್ಥಿಕವಾಗಿ ಸಮಾಜದಲ್ಲಿ ಬಹಳ ಸುಧಾರಣೆ ಉಂಟಾಗಿದೆ. ಅನೇಕರು ಕಾರು, ಸ್ಕೂಟರ್ ಹೀಗೆ ವಾಹನಗಳನ್ನು ಇಟ್ಟುಕೊಂಡಿದ್ದಾರೆ. ಅನೇಕ ಮನೆಗಳಲ್ಲಿ ಜನರಿಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗಿದೆ. ಅದೂ ಅಲ್ಲದೇ ಸಮಾಜದಲ್ಲಿ ಕಾರು ಇಟ್ಟುಕೊಂಡವರ ಘನತೆ ಗೌರವಗಳು ಹೆಚ್ಚು ಎನ್ನಿಸಿಕೊಳ್ಳುತ್ತದೆ. ಇದರಿಂದ ವಾಕಿಂಗ್ ಮುಂತಾದ ಚಟುವಟಿಕೆಗಳಿಗೆ ಧಕ್ಕೆ ಉಂಟಾಗಿದೆ. ಅಷ್ಟೇ ಅಲ್ಲ ದೊಡ್ಡ ನಗರಗಳಲ್ಲಿ ಸ್ವಂತ ವಾಹನವಿಲ್ಲದಿದ್ದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದೇ ಬಹಳ ಕಷ್ಟವಾಗುತ್ತದೆ. ಆಟೋ, ಬಸ್ಸು, ಊಬರ್ ಇವು ಯಾವುದೂ ಸಮರ್ಪಕವಾಗಿ ನಮ್ಮನ್ನು ಸಮಯಕ್ಕೆ ಸರಿಯಾಗಿ ತಲಪಿಸುವುದಿಲ್ಲ. ಈ ಕಾರಣದಿಂದ ಯಾವ ಜಾಗಕ್ಕಾದರೂ ಹೋಗಬೇಕೆಂದರೆ ಹೆಚ್ಚು ಕಡಿಮೆ ಒಂದು ಇಡೀ ದಿನವನ್ನೇ ಮೀಸಲಾಗಿಡಬೇಕಾಗುತ್ತದೆ.

ಇತ್ತೀಚೆಗೆ ನಮ್ಮ ಹಳ್ಳಿಯ ಅನೇಕ ಯುವಕರು ಬೆಂಗಳೂರು, ಮುಂಬೈ, ಡೆಲ್ಲಿ ಮುಂತಾದ ದೊಡ್ಡ ನಗರಗಳಲ್ಲಿ ಒಳ್ಳೆಯ ಹುದ್ದೆಯಲ್ಲಿ ಇದ್ದುಕೊಂಡು ಬಹಳ ಸುಂದರವಾದ ವಿಶಾಲವಾದ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ನಮ್ಮೂರಿನ ಕೃಷ್ಣಸ್ವಾಮಿ ಅವರ ಮಗ ರಮೇಶ್ ಬೆಂಗಳೂರಿನಲ್ಲಿ ಎಲ್ಲರಿಗಿಂತಲೂ ಮೀರಿದಂತೆ ಬಹಳ ಅದ್ದೂರಿಯಾಗಿ ಮನೆ ಕಟ್ಟಿದ್ದಾನೆ ಎಂದು ಬೆಂಗಳೂರಿಗೆ ಹೋಗಿ ಬಂದವರಿಂದ ಸುದ್ದಿ ಬಂದಿದೆ. ಬೆಂಗಳೂರಿನಲ್ಲಿಯೇ ಅವನ ಇಬ್ಬರು ಗಂಡುಮಕ್ಕಳೂ ಇಂಜಿನೀರಿಂಗ್ ಓದುತ್ತಿದ್ದಾರೆ..ಆ ಮನೆಯನ್ನು ನೋಡಿ ಬಂದವರು ಊರಿನವರಿಗೆಲ್ಲ ಅದರ ಸೌಂದರ್ಯವನ್ನು ವರ್ಣಿಸಿದ್ದಾರೆ. ಎಲ್ಲರ ಮನಸ್ಸಿನಲ್ಲಿಯೂ ನಾವೂ ಬೆಂಗಳೂರಿಗೆ ಹೋದಾಗ ಆ ಮನೆಯನ್ನು ಒಮ್ಮೆ ನೋಡಿಯೇ ನೋಡ್ಬೇಕು ಎಂಬ ಆಸೆ ಹುಟ್ಟಿದೆ. ಅವನ ಮನೆಯಲ್ಲಿ ರಮೇಶ್, ಅವನ ಹೆಂಡತಿ ಲತಾ ಮತ್ತು ಮಕ್ಕಳಿಬ್ಬರಿಗೂ ಅವರವರದೇ ವಾಹನಗಳಿವೆ. ಬೆಂಗಳೂರಿನಲ್ಲಿ ವಾಹನಗಳನ್ನಿಟ್ಟುಕೊಂಡವರಿಗೆ ಇನ್ನೊಂದು ತಲೆನೋವಿರುತ್ತದೆ. ಮನೆಯನ್ನು ಎಷ್ಟೇ ವಿಶಾಲವಾಗಿ ಕಟ್ಟಿದ್ದರೂ ವಾಹನಗಳನ್ನು ಕಾಂಪೌಂಡ್ ನಲ್ಲಿಯೇ ನಿಲ್ಲಿಸಬೇಕು. ರಸ್ತೆಯಲ್ಲಿ ನಿಲ್ಲಿಸುವಹಾಗಿಲ್ಲ. ರಸ್ತೆಯಲ್ಲಿ ಅದಕ್ಕೆ ಜಾಗವೂ ಇಲ್ಲ.
ಹೀಗಿರುವಾಗ ಒಮ್ಮೆ ನಮ್ಮ ಊರಿನ ಪುರುಷೋತ್ತಮ್ ಮತ್ತು ಅವರ ಪತ್ನಿ ಲೀಲಾವತಿ ಅವರು ಬೆಂಗಳೂರಿಗೆ ಅವರ ಬಂಧುಗಳೊಬ್ಬರ ಮಗಳ ಮದುವೆಗೆ ಹೋಗಬೇಕಾದ ಪರಿಸ್ಥಿತಿ ಬಂದಿತು. ಅವರು ಮಧ್ಯವಯಸ್ಸಿನ ದಂಪತಿಗಳು. ಅವರ ಒಬ್ಬಳೇ ಮಗಳು ಮದುವೆಯಾಗಿ ದಿಲ್ಲಿಯಲ್ಲಿ ನೆಲೆಸಿದ್ದಾಳೆ. ಅವರು ಮದುವೆ ಕಾರ್ಯಕ್ರಮ ಮುಗಿದಮೇಲೆ ಬೆಂಗಳೂರು ಬಿಡುವಮುನ್ನ ಒಂದುಬಾರಿ ರಮೇಶನ ಮನೆಗೆ ಭೇಟಿ ಕೊಡೋಣ ಎಂಬ ಯೋಚನೆಯೊಡನೆ ಪ್ರಯಾಣ ಮಾಡಿದರು. ಅವರು ರಮೇಶನಿಗೆ ಫೋನ್ ಮಾಡಿದಾಗ ಅವನು ಉತ್ಸಾಹದಿಂದ ನೀವು ಖಂಡಿತ ಬನ್ನಿ ಅಂಕಲ್. ಇಲ್ಲೇ ಊಟಕ್ಕೆ ಬನ್ನಿ. ಭಾನುವಾರವಾದ್ದರಿಂದ ಎಲ್ಲರೂ ಮನೆಯಲ್ಲಿಯೇ ಇರುತ್ತೇವೆ ಎಂದು ಆದರದಿಂದ ಸ್ವಾಗತಿಸಿದನು. ಅವರು ನಿಗದಿ ಮಾಡಿದ ದಿನ ರಮೇಶನ ಮನೆಗೆ ಆಟೋರಿಕ್ಷಾದಲ್ಲಿ ಹಣ್ಣು, ಸಿಹಿತಿಂಡಿಗಳು ಹೊಸಮನೆಗೆ ಉಡುಗೊರೆ ಎಲ್ಲ ತೆಗೆದುಕೊಂಡು ಸಂಭ್ರಮದಿಂದ ಆಗಮಿಸಿದರು.
ಈ ಆಧುನಿಕ ಯುಗದಲ್ಲಿ ಅನೇಕ ಅನುಕೂಲಸ್ಥರಾದವರ ಮನೆಗಳಲ್ಲಿ ಜನರಿಗಿಂತ ವಾಹನಗಳ ಸಂಖ್ಯೆಯೇ ಜಾಸ್ತಿ ಇರುತ್ತದೆ ಎಂದು ಆಗಲೇ ಹೇಳಿದ್ದೇನಷ್ಟೇ? . ಇಂತಹ ಮಹಲುಗಳ ಒಳಗೆ ಹೋಗಬೇಕಾದರೆ ಕಾಂಪೌಂಡ್ನಲ್ಲಿ ನಿಲ್ಲಿಸಿರುವ ಕಾರು, ಸ್ಕೂಟರ್,ಮೋಟರ್ ಸೈಕಲ್ ಇವುಗಳ ಚಕ್ರವ್ಯೂಹವನ್ನು ಬಹಳ ಜಾಗ್ರತೆಯಿಂದ ದಾಟಬೇಕಾಗುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ಅಭಿಮನ್ಯು ಚಕ್ರವ್ಯೂಹವನ್ನು ಪ್ರವೇಶಿಸಿ ಹೊರಕ್ಕೆ ಬರಲಾಗದೇ ಪ್ರಾಣಬಿಟ್ಟ ದ್ರಶ್ಯ ಮನಸ್ಸಿನ ತೆರೆಯಮೇಲೆ ಹಾಯ್ದು ಗೊಂದಲ ಉಂಟುಮಾಡುತ್ತದೆ.
ಇಂತಹ ಕಾಂಪೌಂಡ್ ಮುಂದೆ ಆಟೋರಿಕ್ಷಾ ಬಂದು ನಿಂತಾಗ ಆ ವಾಹನಗಳ ಜಟಿಲ ಜಾಲವನ್ನು ಕಂಡು ಪುರುಷೋತ್ತಮ್ ದಂಪತಿಗಳಿಗೆ ಕೈಕಾಲಿನಲ್ಲಿರುವ ಶಕ್ತಿಯೇ ಉಡುಗಿಹೋದಂತಾಯಿತು. ಅವರಿಬ್ಬರೂ ಸ್ಥೂಲ ಶರೀರಿಗಳ ಗುಂಪಿಗೇ ಸೇರಿದವರು. ಈ ವಾಹನಗಳ ವ್ಯೂಹವನ್ನು ದಾಟ ಬೇಕಾದರೆ ಬಹಳ ಜಾಗ್ರತೆಯಿಂದ ಮುಂದುವರಿಯಬೇಕು. ಉಸಿರನ್ನು ಗಟ್ಟಿಯಾಗಿ ಒಳಕ್ಕೆ ಎಳೆದುಕೊಂಡು ನಮ್ಮ ಶರೀರವನ್ನುಆದಷ್ಟು ಕುಗ್ಗಿಸಿಕೊಂಡು ವಾಹನಗಳ ಮಧ್ಯೆ ಒಂದು ತರಹ ಹುನ್ನಾರದಿಂದ ತೂರಿಕೊಂಡು ಅಡ್ಡಡ್ಡಲಾಗಿ ಸಣ್ಣ ಸಣ್ಣ ಹೆಜ್ಜೆ ಹಾಕುತ್ತಾ ನಡೆಯಬೇಕು. ಕೆಲವೊಮ್ಮೆ ವಾಹನಗಳ ಪ್ರದಕ್ಷಿಣೆಯನ್ನೂ ಮಾಡಿಕೊಂಡು ಹೋಗಬೇಕಾಗುತ್ತದೆ. ಸ್ಥೂಲ ಶರೀರಿಗಳಿಗೆ ಇದೊಂದು ಪರೀಕ್ಷಾಕಾಲ. ಅವರು ಅದುವರೆಗೆ ಎಚ್ಚರಿಕೆಯನ್ನು ಮರೆತು ತಿಂದ ರುಚಿ ಖಾದ್ಯಗಳು ಈ ಒಂದು ಕ್ಷಣದಲ್ಲಿ ಅವರನ್ನು ಹಂಗಿಸುತ್ತಿವೆಯೋ ಎನ್ನಿಸುತ್ತದೆ.
ಪುರುಷೋತ್ತಮ್ ದಂಪತಿಗಳಿಗೆ ತಮ್ಮ ಹೊಟ್ಟೆ ಎರಡು ಕಾರುಗಳ ಮಧ್ಯೆ ಸಿಕ್ಕಿಹಾಕಿಕೊಳ್ಳುವ ಭಯ ಹುಟ್ಟಿ ಅವರ ಮುಖದಲ್ಲಿ ಬೆವರು ಕಾಣಿಸಿಕೊಂಡಿತು. ಯಾರಾದರೂ ಅತಿಥಿಗಳು ಬಂದಾಗ ಇಂತಹ ಅಭಾಸ ಆಗಬಹುದೆಂಬ ಭಯ ಮನೆಯ ಮಾಲೀಕರಿಗೂ ಇರುತ್ತದೆ. ಆದ್ದರಿಂದಲೇ ಅವರು ಮನೆಗೆ ಯಾರಾದರೂ ನೆಂಟರು ಬರುವ ನಿರೀಕ್ಷೆ ಇದ್ದಾಗ ಗೇಟಿನ ಬಳಿಗೆ ಖುದ್ದಾಗಿ ಓಡಿಬರುತ್ತಾರೆ. ಇದೇ ಕಾರಣಕ್ಕಾಗಿಯೇ ರಮೇಶ ಅವನ ಹೆಂಡತಿ ಲತಾ ಮತ್ತು ಮಕ್ಕಳು ಎಲ್ಲರೂ ಕಾಂಪೌಂಡ್ ಬಳಿಯೇ ಬಂದು ಕಾಯುತ್ತಿದ್ದರು. ಆಟೋದಿಂದ ಇಳಿದ ಕೂಡಲೇ ಪುರುಷೋತ್ತಮ ದಂಪತಿಗಳಿಗೆ ತಮ್ಮನ್ನು ಸ್ವಾಗತಿಸಲು ಮನೆಯವರೆಲ್ಲ ನಿಂತಿರುವುದು ನೋಡಿ ಬಹಳ ಸಂತೋಷವಾಯಿತು. ಇನ್ನೂ ಕೆಲವು ಅಕ್ಕ ಪಕ್ಕದ ಪ್ರೇಕ್ಷಕರೂ ನಿಂತಿದ್ದರು. ರಮೇಶನ ಹಿರಿಯ ಮಗ ಬನ್ನಿ ಅಂಕಲ್ ಬನ್ನಿ ಆಂಟಿ ಎಂದು ಆಟೋ ಬಳಿಗೆ ಖುಷಿಯಿಂದ ಹೋಗಿ ಅವರ ಕೈನಲ್ಲಿದ್ದ ಬ್ಯಾಗುಗಳನ್ನು ತೆಗೆದುಕೊಂಡ. ರಮೇಶ ಸ್ವಲ್ಪ ಸಂಕೋಚದಿಂದ ಕಾಂಪೌಂಡ್ ಸ್ವಲ್ಪ ಕಿಷ್ಕಿಂಧವಾಗಿದೆ. ನಿಧಾನವಾಗಿ ಒಳಕ್ಕೆ ಹೋಗೋಣ ನನ್ನ ಜೊತೆ ಬನ್ನಿ ಎಂದು ಪುರುಷೋತ್ತಮ್ ಅವರ ಕೈ ಹಿಡಿದುಕೊಂಡು ನಡೆಯಲು ಶುರುಮಾಡಿದ. ನೀನು ಆಂಟಿ ಅವರ ಕೈ ಹಿಡಿದುಕೊಂಡು ಜೋಪಾನವಾಗಿ ಕರೆದುಕೊಂಡು ಬಾ ಎಂದು ತನ್ನ ಚಿಕ್ಕ ಮಗನಿಗೆ ಆಜ್ಞೆ ಕೊಟ್ಟ.
ಹೀಗೆ ಕಾಂಪೌಂಡ್ ದಾಟಿ ಮನೆಬಾಗಿಲು ತಲಪುವ ಸಾಹಸಕ್ಕೆ ಈ ದಿಬ್ಬಣ ಹೊರಟಿತು. ಈ ಎರಡು ಕಾರುಗಳ ಮಧ್ಯೆ ನಡೆದು ಆಚೆ ಸೇರಿಬಿಟ್ಟರೆ ಅಲ್ಲಿಯೇ ಮನೆಯ ಬಾಗಿಲು. ರಮೇಶ ಪುರುಷೋತ್ತಮ ಅವರಿಗೆ ಪ್ರೋತ್ಸಾಹ ಮಾಡುತ್ತಾ ಇಲ್ಲೇ ಇದೆ ಮನೆ ಬಾಗಿಲು. ಇನ್ನೆರಡು ಹೆಜ್ಜೆ ಅಷ್ಟೇ ಎಂದು ಪ್ರೋತ್ಸಾಹಿಸಿದ. ನಾಲ್ಕು ಹೆಜ್ಜೆ ಹಾಕುವಷ್ಟರಲ್ಲಿ ಪುರುಷೋತ್ತಮ್ ಅವರು ತಮ್ಮ ಹೊಟ್ಟೆಯನ್ನು ಹಿಡಿದುಕೊಂಡು ದಪ್ಪ ದ್ವನಿಯಲ್ಲಿ “ಅಯ್ಯೋ ಅಯ್ಯೋ ಹೋದೆ” ಎಂದು ಕಿರುಚಿದರು. ಎಲ್ಲರೂ ಆತುರ ಗಾಬರಿಗಳಿಂದ ಏನಾಯಿತು ಏನಾಯಿತು ಎಂದು ಅವರಕಡೆ ನೋಡಿದರು. ಪೂರುಷೋತ್ತಮ್ ಅವರು ನೋವನ್ನು ತಡೆಯಲಾರದೇ ಕಣ್ಣು ಮುಚ್ಚಿಕೊಂಡು ಅಯ್ಯೋ ಅಯ್ಯೋ ಎಂದು ಮತ್ತೊಮ್ಮೆ ಜೋರಾಗಿ ಕಿರುಚಿದರು. ನೋವಿನ ಬಾಧೆಯಿಂದ ಕಣ್ಣೀರು ಅವರ ದಪ್ಪ ತುಂಬುಕೆನ್ನೆಯಮೇಲೆ ಧಾರಾಳವಾಗಿ ಹರಿಯಿತು. ಹಿಂದೆ ನಿಧಾನವಾಗಿ ನಡೆದು ಬರುತ್ತಿದ್ದ ಲೀಲಾವತಿ ಅವರು ಅಯ್ಯೋ ಅವರಿಗೆ ಏನಾಯಿತು ಸ್ವಲ್ಪ ನೋಡೀಪ್ಪಾ ಎಂದು ಅತ್ತರು. ಅವರ ದುಂಡು ಕೆನ್ನೆಯಮೇಲೆಯೂ ಕಣ್ಣೀರು ಧಾರಾಕಾರವಾಗಿ ಸುರಿಯಿತು. ಪುರುಷೋತ್ತಮ್ ಅವರ ಕೈ ಹಿಡಿದಿದ್ದ ರಮೇಶ ಅವರು ಏಕೆ ಕಿರುಚುತ್ತಿದ್ದಾರೆ ಎಂದು ಬಗ್ಗಿ ಅವರ ಹೊಟ್ಟೆಯ ಕಡೆ ನೋಡಿದ. ಅವರ ಜುಬ್ಬ ಕಾರಿನ ಬಾಗಿಲಿನ ಹ್ಯಾಂಡಲಿಗೆ ಸಿಕ್ಕಿಹಾಕಿಕೊಂಡಿದ್ದು ಕಾಣಿಸಿತು. ಅದು ಅವರನ್ನು ಎಳೆದಂತಾಗಿ, ಮೊದಲೇ ಭಯದಿಂದ ನಡುಗುತ್ತಿದ್ದವರ ಮೇಲೆ ಕಪ್ಪೆ ಎಸೆದಂತಾಗಿ, ಅವರು ಪ್ರಾಣಭಯದಿಂದ ಕಿರುಚುತ್ತಿದ್ದರು. ರಮೇಶ ಅವರ ಜುಬ್ಬವನ್ನು ಕಾರಿನ ಹ್ಯಾಂಡಲ್ ನಿಂದ ಮೆತ್ತಗೆ ಬಿಡಿಸಿದ. ಏನಾದರೂ ಪೆಟ್ಟಾಗಿ ರಕ್ತ ಗಿಕ್ತ ಸುರಿದಿದೆಯೇ ಎಂದು ಸೂಕ್ಷ್ಮವಾಗಿ ಪರೀಕ್ಷಿಸಿದ. ಅವನಿಗೆ ಏನೂ ಕಾಣಿಸಲಿಲ್ಲ. ಅವನು ಅಂಕಲ್, ನಿಮಗೆ ಏಟುಬಿದ್ದು ನೋವಾಗುತ್ತಿದೆಯೇ ಎಂದು ಮೃದುವಾಗಿ ವಿಚಾರಿಸಿದ. ಅವರು “ಇಲ್ಲ, ಇಲ್ಲ, ಏನೂ ನೋವಿಲ್ಲ. ನಾನು ಸುಮ್ಮನೆ ಹೆದರಿಬಿಟ್ಟೆ ಅಷ್ಟೇ.” ಎಂದರು. ಅವರಿಗೆ ನಿಜವಾಗಿಯೂ ಏನೂ ಪೆಟ್ಟಾಗಿರಲಿಲ್ಲ. ದಪ್ಪ ಹೊಟ್ಟೆಯ ಮಧ್ಯದಲ್ಲಿದ್ದ ಜುಬ್ಬದ ಒಂದು ಬಟನ್ ಕಿತ್ತು ಹಾರಿಹೋಗಿತ್ತು ಅಷ್ಟೇ. ಇದಾದಮೇಲೆ ಎಲ್ಲರೂ ನಿರಾಳವಾಗಿ ಉಸಿರಾಡಿದರು. ರಮೇಶ ಅವರಿಗೆ ಸಮಾಧಾನ ಹೇಳಿ ಅವರ ಜುಬ್ಬವನ್ನು ಬಿಡಿಸಿ ಒಳಕ್ಕೆ ಕರೆದುಕೊಂಡು ಹೋದ. ಒಂದು ಪಕ್ಷ ಅವರ ಹೊಟ್ಟೆ ಎರಡು ವಾಹನಗಳ ಮಧ್ಯೆ ಬಿಗಿಯಾಗಿ ಸಿಕ್ಕಿಹಾಕಿಕೊಂಡು ನಾಲ್ಕು ಜನ ಅವರನ್ನು ಹಿಗ್ಗ ಮುಗ್ಗ ಎಳೆದು ಬಿಡಿಸಿಕೊಳ್ಳುವಂತಾಗಿದ್ದರೆ, ಅಥವಾ ಅವರಿಗೆ ಉಸಿರುಕಟ್ಟಿ ಮೈ ಕೈಗೆ ಘಾಯವಾಗಿ ಅಭಾಸವಾಗಿದ್ದರೆ ಎಷ್ಟು ಕಷ್ಟವಾಗುತ್ತಿತ್ತು? ಅದನ್ನು ಯೋಚಿಸಿ ಎಲ್ಲರೂ ಒಂದು ಕ್ಷಣ ಮೌನವಾದರು. ಮರುಕ್ಷಣವೇ ಪುರುಷೋತ್ತಮ್ ಅವರು ಏನೂ ಆಗದಿದ್ದರೂ ಅಷ್ಟು ಜೋರಾಗಿ ಕಿರುಚಿ ಬೊಬ್ಬೆ ಹೊಡೆದಿದ್ದನ್ನು ನೋಡಿ ಎಲ್ಲರ ಮುಖದಲ್ಲಿಯೂ ಹಾಸ್ಯದ ನಗೆ ಮೂಡಿತು.. ಆದರೆ ಯಾರೂ ಜೋರಾಗಿ ನಗಲಿಲ್ಲ ಇಂತಹ ಸಂದರ್ಭದಲ್ಲಿ ನಗುವುದು ಸೂಕ್ತವಲ್ಲ. ಬದಲು ಸಹಾನುಭೂತಿಯನ್ನು ತೋರಿಸಬೇಕು. ಅಂತೂ ಇಂತೂ ಅವರು ರಮೇಶನ ಕಾರು ಮೋಟಾರ್ ಸೈಕಲ್ ಗಳನ್ನು ದಾಟಿ ಮನೆಯಬಾಗಿಲಿಗೆ ಸೇರಿದರು
ಅನೇಕ ಆಧುನಿಕ ಮನೆಗಳಲ್ಲಿ ಗ್ರೌಂಡ್ ಲೆವೆಲ್ ನಲ್ಲಿ ಕಾರು ಮತ್ತು ಇತರ ವಾಹನಗಳಿಗೆ ಜಾಗ ಮಾಡಿ, ಮನೆಯೊಳಕ್ಕೆ ಪ್ರವೇಶಿಸುವುದಕ್ಕೆ ಒಂದು ಮಹಡಿ ಹತ್ತಬೇಕಾಗುತ್ತದೆ. ಅದೊಂದು 10 ಅಥವಾ 15 ಮೆಟ್ಟಲಿರಬಹುದು ಅಷ್ಟೇ, ಆರೋಗ್ಯವಾದ ಮನುಷ್ಯರಿಗೆ ಅದನ್ನು ನಿಭಾಯಿಸುವುದು ಕಷ್ಟವಲ್ಲ. ಆದರೆ ವಯಸ್ಸಾದವರಿಗೆ ನಿಶ್ಶಕ್ತರಾದವರಿಗೆ ಮಹಡಿ ಹತ್ತುವುದು ಸುಲಭವಲ್ಲ. ಆದ್ದರಿಂದ ಎಷ್ಟೋ ಮನೆಗಳಿಗೆ ಲಿಫ್ಟ್ ಹಾಕಿಸಿದ್ದಾರೆ. ಇದು ಅನಾರೋಗ್ಯದಿಂದ ನರಳುತ್ತಿರುವವರಿಗೆ ಹಾಗೂ ವಯಸ್ಸಾದವರಿಗೆ ತುಂಬಾ ಅನುಕೂಲವಾಗಿದೆ. ಮನೆಯ ಯಜಮಾನರುಗಳು, “ನಮ್ಮ ತಂದೆ ತಾಯಿ ಊರಿನಿಂದ ಬರುತ್ತಿದ್ದಾರೆ. ಅವರಿಗೆ ಮೆಟ್ಟಲು ಹತ್ತುವುದಕ್ಕೆ ಆಗುವುದಿಲ್ಲ. ಅದಕ್ಕೇ ಲಿಫ್ಟ್ ಹಾಕಿಸಿದ್ದೇನೆ” ಎಂದು ಹೆಮ್ಮೆಯಿಂದ ಮತ್ತು ಖುಷಿಯಿಂದ ಎಲ್ಲರೊಡನೆಯೂ ಹೇಳಿಕೊಳ್ಳುತ್ತಾರೆ. ಆದರೆ ಆ ಲಿಫ್ಟ್ ಹಾಕಿದಕೂಡಲೇ ಪಕ್ಕದಲ್ಲಿಯೇ ಇರುವ ಮೆಟ್ಟಲು ನಿರುದ್ಯೋಗಿ ಆಗಿಬಿಡುತ್ತದೆ. ಮನೆಯಲ್ಲಿ ಎಲ್ಲರಿಗೂ ಹತ್ತು ಹದಿನೈದು ಇಪ್ಪತ್ತು ಪೌಂಡ್ ತೂಕ ಇಳಿಸುವ ಅವಶ್ಯಕತೆ ಇದ್ದರೂ ಎಲ್ಲರೂ ಲಿಫ್ಟ್ನಲ್ಲಿಯೇ ಮೇಲೆ ಕೆಳಗೆ ಓಡಾಡುತ್ತಾರೆ. ದೊಡ್ಡ ದೊಡ್ಡ ಕಟ್ಟಡಗಳ ವಿಚಾರವಲ್ಲ ಇದು. ಸ್ವಂತ ಮನೆಯನ್ನು ಕಟ್ಟಿಸಿಕೊಂಡವರ ಕಥೆಯೂ ಇದೇ ಆಗಿದೆ. ಹೀಗೆ ಪುರುಷೋತ್ತಮ್ ದಂಪತಿಗಳು ಲಿಫ್ಟ್ ಏರಿ ರಮೇಶ ಮತ್ತು ಲತಾ ಅವರ ಅರಮನೆಯೊಳಗೆ ಕಾಲಿಟ್ಟರು. ಅವನ ಮನೆಯ ಸೌಂದರ್ಯವನ್ನು ನೋಡಿ ಅವರಿಗೆ ದಂಗಾಯಿತು. ಅವರಿಗೆ ಈ ಕಾಂಪೌಂಡ್ ವಾಕಿಂಗ್ ಬಹಳ ಆಯಾಸವನ್ನುಂಟು ಮಾಡಿತ್ತು. ಈಗ ಲಿಫ್ಟ್ ಏರಿ ಮನೆಯೊಳಕ್ಕೆ ಬಂದಕೂಡಲೇ ಎಲ್ಲರೂ ಮೃದುವಾದ ಮೆತ್ತನೆಯ ಸೋಫಾಗಳಲ್ಲಿ ಧೊಪ್ಪನೆ ಕುಸಿದು,”ಅಬ್ಬಾ ಸಾಕಾಯಿತಪ್ಪ” ಎಂದು ಏದುಸಿರು ಬಿಟ್ಟರು. ರಮೇಶನೂ ಸಧ್ಯ ಇನ್ನೇನೂ ಅನಾಹುತವಾಗದೇ ಮನೆಯೊಳಕ್ಕೆ ಬಂದೆವಲ್ಲ ಎಂದು ಸಮಾಧಾನಪಟ್ಟುಕೊಂಡು ಅರ್ಥಪೂರ್ಣವಾಗಿ ಹೆಂಡತಿಯ ಮುಖ ನೋಡಿ ಮುಗುಳುನಗೆ ತೋರಿಸಿದ. ಮನೆಯೊಳಗೆ ಬಂದ ತಕ್ಷಣವೇ ರಮೇಶ ಮತ್ತು ಲತಾ ತಂಪಾದ ಗಾಳಿ ಬರುವಂತೆ ಫ್ಯಾನ್ ಹಾಕಿ, ಆರಾಮವಾಗಿ ಕುಳಿತುಕೊಳ್ಳಿ ಎಂದು ಉಪಚಾರ ಮಾಡಿದರು ಒಳಗಿನಿಂದ ಕರಿದ ತಿಂಡಿಗಳು, ಸಿಹಿಖಾದ್ಯಗಳು ಕಾಫಿ, ಟೀ, ಪಾನಕ ಏನೆಲ್ಲ ಬಂದಿತು. ದೊಡ್ಡ ತೆರೆಯ ಟಿವಿ ಹಾಕಿ ಎಲ್ಲರೂ ಸುಖವಾಗಿ ಕುಳಿತು ಸುಧಾರಿಸಿಕೊಂಡರು. ಅದಾದ ಸ್ವಲ್ಪ ಹೊತ್ತಿನೊಳಗೇ ಒಳ್ಳೆಯ ಊಟವೂ ಮತ್ತೊಮ್ಮೆ ಸಿಹಿ, ಕಾಫೀ ಟೀ ಎಲ್ಲದರೊಡನೆ ಊಟದ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ಈಗ ತಾನೇ ಕಾಂಪೌಂಡಿನಲ್ಲಿ ಕಾರುಗಳ ಮಧ್ಯೆ ಸಿಕ್ಕಿಹಾಕಿಕೊಂಡು ಜುಬ್ಬದ ಗುಂಡಿ ಕಿತ್ತುಹೋಗಿ ತೊಂದರೆಪಟ್ಟ ವಿಷಯವನ್ನು ಮರೆತು ಎಲ್ಲರೂ ತಮ್ಮ ತಮ್ಮ ಮಿತಿಗೆ ಮೀರಿ ಯಥೇಚ್ಛವಾಗಿ ತಿಂದು ಕುಡಿದು ಸಂತೋಷಿಸಿದರು. ಹೀಗಿರುವಾಗ ವ್ಯಾಯಾಮದ ವಿಚಾರ ಯಾರು ಯೋಚಿಸುತ್ತಾರೆ?
ಆಧುನಿಕ ನಂಬಿಕೆಯ ಪ್ರಕಾರ ತೆಳ್ಳಗಿರುವವರು ಸುಂದರರು ಎನ್ನಿಸಿಕೊಳ್ಳುತ್ತಾರೆ. ಆದ್ದರಿಂದ ಹೆಚ್ಚು ಕಡಿಮೆ ಪ್ರತಿಯೊಬ್ಬರೂ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಒಂದಲ್ಲ ಒಂದು ತರಹ ಪ್ರಯತ್ನದಲ್ಲಿ ತೊಡಗಿರುತ್ತಾರೆ. ನನಗೆ ಡಾಕ್ಟರ್ ಬ್ಲಡ್ ಪ್ರೆಷರ್ ಬಗ್ಗೆ ಎಚ್ಚರಿಕೆ ಕೊಟ್ಟಿದ್ದನ್ನು ಮುಂಚೆಯೇ ಹೇಳಿದ್ದೇನೆ, ನನ್ನ ಅನೇಕ ಸ್ನೇಹಿತರು ಯೋಗ ಕ್ಲಾಸಿಗೆ ಸೇರಿದ್ದಾರೆ. ಇನ್ನು ಕೆಲವರು ದಿನವೂ ವಾಕಿಂಗ್ ಮಾಡುವ ಪ್ರಯತ್ನ ಮಾಡುತ್ತಾರೆ. ಇದೇ ಕಾರಣಕ್ಕಾಗಿಯೇ ನಾನೂ ವ್ಯಾಯಾಮ ಮಾಡಬೇಕೆಂದು ತೀರ್ಮಾನಿಸಿದೆ. ಕೆಲವರು ಯುಟ್ಯೂಬ್ ನಲ್ಲಿ ನೋಡಿಕೊಂಡು ಯೋಗ ಮಾಡುತ್ತಾರೆ. ನಾನೂ ಅದನ್ನೇ ಮಾಡುವುದೆಂದು ತೀರ್ಮಾನಿಸಿದೆ.
ಹಾಗೆಂದು ಯೋಗ್ಯಾಭ್ಯಾಸ ಮಾಡುವುದು ನನಗೆ ಇಷ್ಟ ಎಂದು ನೀವು ತಿಳಿಯಬಾರದು. ನನಗೆ ಯಾವ ತರಹ ವ್ಯಾಯಾಮದಲ್ಲಿಯೂ ಖುಷಿ ಇಲ್ಲ. ನಿಜವಾಗಿ ಹೇಳಬೇಕೆಂದರೆ ನನಗೆ ಚಿಕ್ಕ ವಯಸ್ಸಿನವರ ತರಹ ಸದಾ ಮೊಬೈಲ್ ನೋಡುವುದು, ಸ್ನೇಹಿತರೊಡನೆ ಘಂಟೆಗಟ್ಟಲೆ ಹರಟೆ ಹೊಡೆಯುತ್ತ ಹೋಟೆಲ್ಗೆ ಹೋಗಿ ದೋಸೆ ವಡೆ ಇಡ್ಲಿ ಇತ್ಯಾದಿ ತಿಂಡಿ ತಿನ್ನುವುದು, ಸಿನಿಮಾಗಳನ್ನೂ ನೋಡುವುದು ಇದೆಲ್ಲ ಬಹಳ ಆಕರ್ಷಕವಾಗಿ ತೋರುತ್ತದೆ. ಇದಕ್ಕೆ ಕಾರಣ ಸಣ್ಣ ಹಳ್ಳಿಯಲ್ಲಿ ಬೆಳೆದ ನನಗೆ ನನ್ನ ಬಾಲ್ಯದಲ್ಲಿ ಇದನ್ನೆಲ್ಲಾ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಅದೂ ಅಲ್ಲದೇ ನನ್ನ ತಂದೆ ತಾಯಿಗಳು ಬಹಳ ನಿಯಮದಿಂದ ಸಂಯಮದಿಂದ ಬಾಳು ನಡೆಸಿದವರು. ಆಗಿನ ಕಾಲದಲ್ಲಿ ಹಳ್ಳಿಯಲ್ಲಿ ಬೆಳೆದ ಹೆಣ್ಣುಮಕ್ಕಳಿಗೆ ಯಾವ ತರಹ ಕ್ರೀಡೆ (sports) ಯಲ್ಲಿಯೂ ಭಾಗವಹಿಸುವ ಅವಕಾಶ ಅಥವಾ ಶಿಕ್ಷಣ ಸಿಕ್ಕುತ್ತಿರಲಿಲ್ಲ. ಹೀಗಾಗಿ ನಾನು ವಂಚಿತಳಾಗಿದ್ದೇನೆ ಎಂಬ ಭಾವನೆ ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಹಾಗಾಗಿ ನನಗೆ ಯೋಗ, ವ್ಯಾಯಾಮ ಇವುಗಳಲ್ಲಿ ಸ್ವಲ್ಪವೂ ಅಭಿರುಚಿ ಬೆಳೆಯಲಿಲ್ಲ. ಆದರೆ ಸ್ನೇಹಿತರೊಡನೆ ಹೋಟೆಲ್ಗೆ ಹೋಗುವುದು, ತಿಂಡಿ ತಿನ್ನುವುದು, ಸಿನಿಮಾ ನೋಡುವುದು ಮಾತ್ರ ಈಗಲೂ ಮನಸ್ಸಿಗೆ ಖುಷಿ ತರುತ್ತದೆ. ಈಗ ಡಾಕ್ಟರ ಎಚ್ಚರಿಕೆ ನನ್ನಲ್ಲಿ ಸ್ವಲ್ಪ ಭಯ ಹುಟ್ಟಿಸಿದೆ. ಹೋಟೆಲ್, ಹರಟೆ ಕಾರ್ಯಕ್ರಮದಲ್ಲಿ ನನಗೆ ಕಂಪೆನಿ ಕೊಡುತ್ತಿದ್ದ ನನ್ನ ಇಬ್ಬರು ಗೆಲೆತಿಯರು ಲೀಲಾ ಮತ್ತು ಶಾಂತಿಗೂ ಇದೇ ರೀತಿ ಡಾಕ್ಟರ ಆದೇಶ ದೊರೆತಿದೆ. ಶಾಂತಿಗೆ ಅವಳ ವೈದ್ಯರು ಬಾರ್ಡರ್ ಲೈನ್ ಡಯಾಬಿಟಿಸ್ ಎಂದು ಬೇರೆ ಎಚ್ಚರಿಕೆ ಕೊಟ್ಟಿದ್ದಾರೆ. ಎರಡು ವಾರಕ್ಕೆ ಒಂದುಸಲ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೆಲ್ಲಾ ಕೇಳಿ ನನಗೂ ಗಾಬರಿಯಾಯಿತು ಅದೇ ದಿನ ನಾವು ಮೂವರೂ ಯೋಗ ಕ್ಲಾಸ್ ಸೇರಬೇಕೆಂದು ನಿಶ್ಚಯ ತೆಗೆದುಕೊಂಡೆವು.
ಮಾರನೆಯ ದಿನವೇ ನಾವು ಹೊಟೇಲ್ ನಲ್ಲಿ ದೋಸೆ ತಿನ್ನುತ್ತಿದ್ದಾಗ ಲೀಲ ಮತ್ತು ಶಾಂತಿ ಇಬ್ಬರೂ ನಾವು ಯೂಟ್ಯೂಬ್ ಯೋಗ ಕ್ಲಾಸ್ ಸೇರಿದ್ದೇವೆ ಎಂದು ಘೋಷಿಸಿದರು. ನನಗೆ ಹೇಳದೆಯೇ ಅವರಿಬ್ಬರೂ ಯೋಗ ಕ್ಲಾಸ್ಗೆ ಸೇರಿದ್ದು ಕೇಳಿ ನನಗೆ ಸ್ವಲ್ಪ ಅಸಮಾಧಾನವಾಯಿತು. ಇವರಿಬ್ಬರೂ ಸೇರಿಕೊಂಡು ಏನೋ ಪಿತೂರಿ ಮಾಡಿ ನನ್ನನ್ನು ಕಡೆಗಣಿಸಿದ್ದಾರೆ ಎನ್ನಿಸಿತು. ನಾನು ಯಾವ ಯೋಗ ಕ್ಲಾಸ್ ಸೇರಿದಿರಿ? ನನಗೆ ಹೇಳದೆಯೇ ನೀವು ಹೀಗೆ ಮಾಡಿದ್ದು ತಪ್ಪು. ನಾನೂ ನಿಮ್ಮ ಜೊತೆ ಸೇರಬೇಕೆಂದಿದ್ದೆ. ನೀವು ಬೇಕೆಂದೇ ನನಗೆ ಹೇಳದೇ ಕ್ಲಾಸ್ ಸೇರಿದ್ದೀರ. ಎಂದೆಲ್ಲ ಆಕ್ಷೇಪಿಸಿದೆ. ಲೀಲಾ ನಗುತ್ತಾ “ಏನೂ ಮೀರಿಹೋಗಿಲ್ಲ ನೀನೂ ಆನ್ ಲೈನ್ನಲ್ಲಿ ರಿಜಿಸ್ಟರ್ ಮಾಡಿಕೊ. ನಿನ್ನ ಮೊಬಯಿಲಿಗೆ ಲಿಂಕ್ ಕಳುಹಿಸಿದ್ದೇನೆ. ಯಾರು ಬೇಕಾದರೂ ಸೇರಬಹುದು. ದಿನ ಹೊಸ ಲೆಸೆನ್(lesson) ಬರುತ್ತದೆ. ಟಿವಿ ನೋಡಿಕೊಂಡು ಮಾಡಬಹುದು.” ಎಂದಳು. ಇದಕ್ಕೆ ಎಷ್ಟು ಹಣ ಕಟ್ಟಬೇಕು, ಹೇಗೆ ಸೇರುವುದು ಎಂದು ಅನೇಕ ಪ್ರಶ್ನೆಗಳನ್ನು ಒಂದೇ ಸಲಕ್ಕೆ ಕೇಳಿದೆ. “ಅದೆಲ್ಲ ಆ ಲಿಂಕನಲ್ಲೇ ಇದೆ. ಓದಿಕೋ” ಎಂದುಬಿಟ್ಟಳು. ಈ ಹೊಸ ಹವ್ಯಾಸ ಸಿಕ್ಕಿ ಅವಳಿಗೆ ಕಾಡುಹರಟೆಯಲ್ಲಿ ಉತ್ಸಾಹವೇ ಇಲ್ಲವಾದಂತೆ ನನಗೆ ತೋರಿತು. ಅಂತೂ ಕಾಫಿ ತಿಂಡಿ ಮುಗಿಸಿ ಅವರಿಬ್ಬರೂ ನನಗೆ ಬಿದಾಯ ಹೇಳಿ ಹೊರಟುಹೋದರು.
ಈಗ ನನಗೆ ಶುರುವಾಯಿತು ಪೀಕಲಾಟ. ನನಗೆ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಏನು ಮಾಡಬೇಕೆಂದರೂ ತಲೆನೋವು. ಮಿಕ್ಕವರು ಐದು ನಿಮಿಷದಲ್ಲಿ ಮಾಡುವ ಕೆಲಸ ನನಗೆ ಕೊನೆಯ ಪಕ್ಷ ಎರಡು ಘಂಟೆಕಾಲ ತೆಗೆದುಕೊಳ್ಳುತ್ತದೆ. ಅದರಲ್ಲಿಯೂ ಯಾವುದಾದರೂ ಅಪ್ಲಿಕೇಷನ್ ಭರ್ತಿಮಾಡುವುದು, online ಹಣ ಕಟ್ಟುವುದು ಇದೆಲ್ಲ ಕಗ್ಗಂಟಾಗಿ ಕುಳಿತು ಹೇಗೆ ಮುಂದುವರಿಯಬೇಕು ಎಂದು ತಿಳಿಯದೇ ಒದ್ದಾಡುತ್ತೇನೆ. ಅವಳು ಕಳುಹಿಸಿದ ಕೊಂಡಿ (link) ತೆರೆದು ನೋಡಿದೆ. ಮತ್ತೆ ಮತ್ತೆ ಸ್ಕ್ರೀನ್ನಲ್ಲಿ(screen) ಮೇಲೆ ಕೆಳಗೆ ನೋಡುತ್ತಾ ಎಲ್ಲ ಪ್ರಶ್ನೆಗಳಿಗೂ ಉತ್ತರ ಟೈಪ್ ಮಾಡಿದೆ. ಅಂತೂ ಇಂತೂ ಹಣಕಟ್ಟುವ ಜಾಗ ತಲುಪಿದೆ. ಇಷ್ಟು ಮಾಡುವುದಕ್ಕೆ ನನಗೆ ಸುಮಾರು ಒಂದು ಘಂಟೆ ಕಾಲ ಹಿಡಿಯಿತು. ನನಗೆ ಸ್ಕ್ರೀನ್ ನೋಡಿ ನೋಡಿ ಕಣ್ಣೆಲ್ಲಾ ಉರಿಯುತ್ತಿತ್ತು. ನನ್ನ ಬ್ಯಾಂಕ್ ಕಾರ್ಡ್ ನಂಬರ್ ಹಾಕಿಬಿಟ್ಟರೆ ನನ್ನ ಕೆಲಸ ಮುಗಿಯಿತು ಎಂದು ನನ್ನ ಬ್ಯಾಂಕ್ ಕಾರ್ಡ್ ನ್ನು ಪರ್ಸ್ನಿಂದ ಹುಡುಕಿ ಬ್ಯಾಂಕ್ ಕಾರ್ಡ್ ಹೊರಕ್ಕೆ ತೆಗೆದು ಅದರ ನಂಬರ್ ಟೈಪ್ ಮಾಡಲು ಮೊಬೈಲ್ ಸ್ಕ್ರೀನ್ ಕಡೆ ನೋಡಿದೆ. ಅಲ್ಲಿ “Your session has timed out.” ಎಂದು ಬರೆದಿತ್ತು. ಇದರ ಅರ್ಥ “ನೀನು ಬಹಳ ನಿಧಾನವಾಗಿ ಕೆಲಸ ಮಾಡುತ್ತೀಯ ಅದರಿಂದ ನಾವು ಸ್ಕ್ರೀನ್ ಮುಚ್ಚಿದ್ದೇವೆ. ನೀನು ಮುಂದುವರಿಯಲು ಇಷ್ಟಪಟ್ಟರೆ ಮತ್ತೆ ಮೊದಲಿನಿಂದ ಶುರು ಮಾಡಬಹುದು” ಎಂದು. ನನಗೆ ನನ್ನ ಕಣ್ಣನ್ನೇ ನಂಬುವುದಕ್ಕೆ ಆಗಲಿಲ್ಲ. ಮತ್ತೆ ಮೊದಲಿನಿಂದ ಶುರು ಮಾಡುವುದೇ? ಈಗಲೇ ನನಗೆ ಕಣ್ಣೆಲ್ಲ ಉರಿಯುತ್ತಿದೆ. ಖಂಡಿತ ಸಾಧ್ಯವಿಲ್ಲ ಎಂದು ಜೋರಾಗಿ ಕಿರುಚಿದೆ. ಕೈನಲ್ಲಿದ್ದ ಮೊಬೈಲ್ ಫೊನನ್ನು ಎತ್ತಿ ಒಗೆಯಬೇಕೆನ್ನಿಸಿತು. ಆದರೆ ಅದು ಒಡೆದಾಗ ಆಗುವ ನಷ್ಟ ನನಗೇ ಎಂಬ ಸತ್ಯ ಮನಸ್ಸಿಗೆ ಹೊಳೆಯಿತು. ಸುಮ್ಮನಾದೆ. ಕಂಪ್ಯೂಟರ್ ಮಾತ್ರ ಸ್ಥಿತಪ್ರಜ್ಞನ ತರಹ ಅಲ್ಲಾಡದೇ ಕುಳಿತು ಬಿಟ್ಟಿತು. ಕಂಪ್ಯೂಟರ್ ನನಗೆ ಯಾವ ರಿಯಾಯಿತಿಯನ್ನೂ ತೋರಿಸಲಿಲ್ಲ. ನಾನು ಮೊದಲಿನಿಂದ ಮತ್ತೇ ಶುರು ಮಾಡಲೇ ಬೇಕು ಎಂದು ನನಗೆ ಅರ್ಥವಾಯಿತು. ನನ್ನ ಮನಸ್ಸನ್ನು ಶಾಂತಗೊಳಿಸಲು ಒಂದು ಕಪ್ಪು ಕಾಫೀ ಎರಡು ಚಕ್ಕುಲಿಯನ್ನು ತಿನ್ನಬೇಕಾಯಿತು. ಸ್ವಲ್ಪ ಸಮಾಧಾನವಾಯಿತು. ಮತ್ತೆ ಶುರುಮಾಡುವುದೆಂದು ತೀರ್ಮಾನಿಸಿದೆ. ಅಷ್ಟರಲ್ಲಿಯೇ ನನ್ನ ಮೊಬೈಲ್ ಗಂಟೆ ಬಾರಿಸಲು ಶುರು ಮಾಡಿತು. ಯಾರಿರಬಹುದೆಂದು ನೋಡಿದರೆ ಇನ್ನಾರೂ ಅಲ್ಲ. ಶಾಂತಿ. ಮೊಬೈಲ್ನಲ್ಲಿ ಅವಳ ಹೆಸರನ್ನು ನೋಡಿ ನನಗೆ ಸ್ವಲ್ಪವೂ ಖುಷಿ ಆಗಲಿಲ್ಲ. ಆದರೂ ಧ್ವನಿಯಲ್ಲಿ ಕೃತಕ ಉತ್ಸಾಹವನ್ನು ತೋರುತ್ತಾ ಹಲೋ ಎಂದೆ. ಅವಳು ಉತ್ಸಾಹದಿಂದ ಯೋಗ ಕ್ಲಾಸಿಗೆ ರಿಜಿಸ್ಟರ್ ಮಾಡಿದೆಯ? ಎಂದಳು. ಅವಳಿಗೆ ಕಂಪ್ಯೂಟರ್ ಟ್ರಿಕ್ ಗಳೆಲ್ಲ ಚೆನ್ನಾಗಿ ಗೊತ್ತು. ನನಗೆ ಎಷ್ಟೋ ಸಲ ಸಹಾಯ ಮಾಡಿದ್ದಾಳೆ. ಅದಾದಮೇಲೆ ತಾನೇ ಬಲು ಬುದ್ಧಿವಂತೆ ಎಂಬ ಜಂಬವನ್ನೂ ತೋರಿಸುತ್ತಾಳೆ. ಅದರಿಂದ ನನ್ನ ಅಹಂಕಾರಕ್ಕೆ ಸ್ವಲ್ಪ ಧಕ್ಕೆ ಎನ್ನಿಸುತ್ತದೆ. ಹೀಗಾಗಿ ನಾನು ಅವಳ ಸಹಾಯ ಕೇಳಲು ಇಷ್ಟ ಪಡುವುದಿಲ್ಲ. ಮಿಕ್ಕೆಲ್ಲ ಪ್ರಯತ್ನಗಳೂ ನಿಷ್ಫಲವಾದಾಗ ಮಾತ್ರ ಅವಳ ಸಹಾಯವನ್ನು ಕೇಳುತ್ತೇನೆ. ಇದೊಂದು ತರಹ ನಾಟಕ ನಮ್ಮಿಬ್ಬರ ಮಧ್ಯೆ. ಅನೇಕ ವರ್ಷಗಳಿಂದ ನಡೆದು ಬಂದಿದೆ. ಅವಳು ಈಗ ಫೋನ್ ಮಾಡುತ್ತಿರುವುದೂ ಈ ಕಾರಣಕ್ಕಾಗಿಯೇ ಎಂದು ನನಗೆ ಗೊತ್ತು. ನಾನು ಅದು ಅರ್ಥವಾಗದವಳಂತೆ ನಟಿಸುತ್ತ, “ಓ ಯೋಗಾನ? ನಾನಿನ್ನೂ ಅದರಕಡೆ ಗಮನವೇ ಕೊಟ್ಟಿಲ್ಲ. ಬಹಳ ಬಿಸಿಯಾಗಿದ್ದೇನೆ” ಎಂದೆ. ಅದಕ್ಕೆ ಅವಳು ಹೌದಾ? ಏನು ಅಷ್ಟು ಬಿಸಿ? ಏನು ಮಾಡುತ್ತಿದ್ದೇ ಎಂದೆಲ್ಲಾ ತನಿಖೆ ಮಾಡಿದಳು. ನಾನು ಸ್ವಲ್ಪ ಅಸಹನೆಯಿಂದ ಏನೋ ಮನೆಕೆಲಸಗಳು ಇತ್ತು. ಮಾಡಿಕೊಂಡೆ ಎಂದು ಮಾತು ತೇಲಿಸಿದೆ . ಅವಳು ಒಂದುತರಹ ಅಧಿಕಾರವಾಣಿಯಲ್ಲಿ ”ಸರಿ ಇನ್ನು ಮುಂದೆ ಹಾಕಬೇಡ. ಬೇಗ ಮಾಡಿಕೊ. ಆಮೇಲೆ ನಾವೆಲ್ಲ ಒಟ್ಟಿಗೆ ಯೋಗ ಮಾಡೋಣ” ಎಂದು ಮಾತು ಮುಗಿಸಿದಳು. ನಾನು ಮನಸ್ಸಿನಲ್ಲಿಯೇ ”ಅಯ್ಯಪ್ಪ ಇದೇನು ಬಂತು ಗ್ರಹಚಾರ, ಇವಳೊಂದಿಗೆ ಯೋಗ ಮಾಡಿದರೆ ನನಗೆ ಇರುವ ಅಲ್ಪ ಸ್ವಲ್ಪ ಆತ್ಮ ವಿಶ್ವಾಸವೂ ಸೊನ್ನೆಯಾಗುತ್ತದೆ. ಖಂಡಿತ ಬೇಡ” ಎಂದು ಅಲ್ಲಿಯೇ ತೀರ್ಮಾನಿಸಿ “ಆಗಲಿ ಮಾಡುತ್ತೇನೆ ಏನೂ ಆತುರವಿಲ್ಲ” ಎಂದು ನುಳುಚಿಕೊಂಡೆ.
ಮರುದಿನ ಮತ್ತೆ ಅದೇ ಯೋಗ ಅಪ್ಲಿಕೇಷನ್ ಭರ್ತಿ ಮಾಡಲು ಕುಳಿತೆ. ನನಗೆ ಹಿಂದಿನ ದಿನದ ಕಹಿ ಅನುಭವದ ದೆಸೆಯಿಂದ ಮನಸ್ಸಿನಲ್ಲಿ ಅದೇ ಪುನರಾವರ್ತನೆ ಆಗುವುದರಲ್ಲಿ ಸಂದೇಹವಿಲ್ಲ ಎಂದು ಖಾತ್ರಿ ಆಗಿತ್ತು. ಅದನ್ನು ಶುರುಮಾಡುವುದಕ್ಕೇ ಮನಸ್ಸಿನಲ್ಲಿ ಉತ್ಸಾಹ ಬರಲಿಲ್ಲ. ಹಾಗೂ ಹೀಗೂ ಅರ್ಧ ಮುಕ್ಕಾಲು ಘಂಟೆ ವ್ಯರ್ಥಮಾಡಿ ಕೊನೆಗೆ ಮೊಬೈಲ್ ತೆರೆದೆ. ಅಲ್ಲಿ ಸ್ನೇಹಿತೆ ಕೊಟ್ಟಿದ್ದ ಲಿಂಕ್ ಕಾಣಿಸಿತು. ಅದು ನನ್ನನ್ನು ನೋಡಿ ಗೇಲಿ ಮಾಡುತ್ತಿರುವಂತೆ ತೋರಿತು. ಬಾ ನೋಡೋಣ ಧೈರ್ಯವಿದ್ದರೆ ಲಿಂಕ್ ಒತ್ತು ಎಂದು ಕೇಣಕುತ್ತಿದೆ ಎನ್ನಿಸಿತು. ಕಂಪ್ಯೂಟರ್ ಎಂದರೇ ಹೆದರುವ ನನಗೆ ಆ ಲಿಂಕೇ ಒಬ್ಬ ಕುಸ್ತಿಗಾರನಂತೆ ಬೃಹದಾಕಾರದಲ್ಲಿ ನನ್ನ ಮುಂದೆ ಕುಣಿಯುತ್ತಾ ತಮಾಷೆ ಮಾಡುತ್ತಾ ಧೈರ್ಯವಿದ್ದರೆ ಬಟನ್ ಒತ್ತು ನೋಡೋಣ ಎಂದು ಪಟ್ಟು ಹಾಕುತ್ತಿರುವಂತೆ ತೋರಿತು. ನನಗೆ ಒಂದೆ ಸಲಕ್ಕೆ ಇದ್ದ ಆತ್ಮ ವಿಶ್ವಾಸ ಕುಸಿಯಿತು. ಆದರೂ ಮನಸ್ಸು ಘಟ್ಟಿ ಮಾಡಿಕೊಂಡು ಈದಿನ ಈ ಕೆಲಸ ಮಾಡಿಯೇಬಿಡಬೇಕು ಎಂದು ತೀರ್ಮಾನಿಸಿ ಕೊಂಡಿಯನ್ನು ಒತ್ತಿದೆ. ಅಪ್ಲಿಕೇಷನ್ ತೆರೆಯಿತು. ನೆನ್ನೆಯ ಅನುಭವವೇ ಅದು. ನಾನು ನನ್ನ ಹೆಸರನ್ನು ಟೈಪ್ ಮಾಡಿದೆ. ನಾನು ಅದನ್ನು ಮಾಡಿದ ಕೂಡಲೇ ಮೊಬೈಲ್ ಸ್ಕ್ರೀನ್ ನಲ್ಲಿ ಒಂದು ಅಧ್ಬುತ ಪರಿವರ್ತನೆಯಾಯಿತು. ನನ್ನ ಕಣ್ಣೆದುರಿಗೇ ಹಿಂದಿನ ದಿನ ನಾನು ಟೈಪ್ ಮಾಡಿದ್ದ ಮಾಹಿತಿಗಳೆಲ್ಲ ಆಯಾ ಜಾಗಗಳಲ್ಲಿ ಕಾಣಿಸಿಕೊಂಡವು. ನನ್ನ ಜನ್ಮ ದಿನಾಂಕ, ಅಡ್ರೆಸ್, ಇಮೇಲ್, ಫೋನ್ ನಂಬರ್ ಯಾವುದನ್ನೂ ಮತ್ತೆ ಟೈಪ್ ಮಾಡ ಬೇಕಾಗಲಿಲ್ಲ. ನನಗೆ ಇದರಿಂದ ಆದ ಸಂತೋಷ ಅಷ್ಟಿಷ್ಟಲ್ಲ. ಕುರ್ಚಿಯಿಂದ ಎದ್ದು ನಿಂತು, ಚಪ್ಪಾಳೆ ಹೊಡೆದು ಕುಣಿದೆ. ಈಗ time out (ನಿನ್ನ ಸಮಯ ಮೀರಿತು) ಎಂಬ ಮೆಸೇಜ್ ಬರಲಿಲ್ಲ. ನಾನು ಆತುರದಿಂದ ಪೇಮೆಂಟ್ ಮಾಡಿದೆ. ಕಂಪ್ಯೂಟರ್ ಸಂತೋಷ ತೋರಿಸಿ “ಧನ್ಯವಾದಗಳು. ನೀನು ಯೋಗ ಕ್ಲಾಸ್ ತಕ್ಷಣವೇ ಶುರು ಮಾಡಬಹುದು” ಎಂದಿತು. ಹಣ ಕಂಡರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ? ಅದಕ್ಕೇ ಹಣ ಎಂದರೆ ಹೆಣವೂ ಬಾಯಿಬಿಡುತ್ತದೆ ಎಂಬ ಹೇಳಿಕೆ ಇದೆ. ಈ ಕಂಪ್ಯೂಟರ್ ಪೆಟ್ಟಿಗೆಯೂ ಅದಕ್ಕೆ ವಿರೋಧಿಯಲ್ಲ. ನನಗೂ ತುಂಬಾ ಖುಷಿಯಾಯಿತು ನಾನು ಸ್ನೇಹಿತೆಯ ಸಹಾಯ ಕೇಳಬೇಕಾಗಿಲ್ಲ ಎಂದು.
ಕಂಪ್ಯೂಟರ್ ನಿಂದ ಸಮಯ ಉಳಿಯುತ್ತದೆಯೋ ಇಲ್ಲವೋ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ಅದು ಮನುಷ್ಯನಿಂದ ಸಂಪೂರ್ಣ ವಿಧೇಯತೆಯನ್ನು ನಿರೀಕ್ಷಿಸುತ್ತದೆ ಮತ್ತು ವಸೂಲಿ ಮಾಡುತ್ತದೆ. ಈ ಯಂತ್ರ ನಮ್ಮನ್ನೇ ಆಳುವ ಯಜಮಾನನಂತೆ ವರ್ತಿಸುತ್ತಿದೆ ಎನ್ನಿಸುತ್ತದೆ. ಮನುಷ್ಯನಿಗೆ ದಾಸನಾಗಿ ಇರಬೇಕೆಂಬ ಉದ್ದೇಶದಿಂದ ಕಂಡುಹಿಡಿದ ಯಂತ್ರ ಇದು. ಅದು ಮನುಷ್ಯ ಕೊಡುವ ಆಜ್ಞೆ (ಕಮಾಂಡ್)ನ್ನು ಪಾಲಿಸಬೇಕು. ಅದು ನಮಗೆ ವಿಧೇಯನಾಗಿ ಇರಬೇಕು ಎಂದು ತಯಾರಿಸಿದ ಯಂತ್ರ ಇದು. ಆದರೆ ಈ ಉದ್ದೇಶ ಎಷ್ಟರ ಮಟ್ಟಿಗೆ ಸಫಲವಾಗಿದೆ ಎಂಬ ಪ್ರಶ್ನೆಗೆ ನಿಖರವಾದ ಉತ್ತರ ದೊರಕಿಲ್ಲ.
ಲೇಖಕಿ: ಗೊರೂರು ವಸಂತಿ ಮೂರ್ತಿ (ಕೆನಡ)
