ಕೆ.ಆರ್.ಪೇಟೆ,ಏ.15: ನಾಟಕಗಳಲ್ಲಿ ಬರುವ ಪ್ರತಿಯೊಂದು ಸನ್ನಿವೇಶವೂ ನಮ್ಮ ಜೀವನಕ್ಕೆ ಹತ್ತಿರವಾಗಿದೆ. ರಂಗಕಲೆಯನ್ನು ಇನ್ನು ಜೀವಂತವಾಗಿಟ್ಟುಕೊಂಡು ಮುಂದಿನ ಪೀಳಿಗೆಗೆ ಕೊಡುಗೆ ನೀಡಲು ತಾಲ್ಲೂಕಿನ ರಂಗ ಕಲಾವಿದರು ಶ್ರಮಿಸುತ್ತಿರುವುದು ಉತ್ತಮ ಬೆಳೆವಣಿಗೆಯಾಗಿದೆ ಹಾಗಾಗಿ ಸಾರ್ವಜನಿಕರು ನಾಟಕಗಳನ್ನು ನೋಡಿ ಪ್ರೋತ್ಸಾಹಿಸುವಂತಹ ಕೆಲಸವಾಗಬೇಕು ಎಂದು ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಹೊಸಹೊಳಲು ನಂಜುಂಡಸ್ವಾಮಿ ಹೇಳಿದರು.
ಅವರು ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ ತಾಲ್ಲೂಕು ಡಾ.ರಾಜ್ಕುಮಾರ್ ರಂಗ ಕಲಾ ವೇದಿಕೆಯ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ರಂಗಭೂಮಿ ಕಲಾವಿದ ಹೊಸಹೊಳಲು ರಘು ನೇತೃತ್ವದಲ್ಲಿ ಆಯೋಜಿಸಿದ್ದ “ಕುರುಕ್ಷೇತ್ರ ಅಥವಾ ಛಲದೋಳ್ ದುರ್ಯೋಧನ” ಎಂಬ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಅಂಬೇಡ್ಕರ್ ಮತ್ತು ಬಾಬೂಜಿ ಅವರ ಭಾವಚಿತ್ರ ಅನಾವರಣ ಮಾಡಿ ಮಾತನಾಡಿದರು.
ನಾಟಕಗಳು ಸಮಾಜದ ಕನ್ನಡಿ ಇದ್ದಂತೆ. ವೇದಿಕೆಯ ಮೇಲೆ ತೋರಿಸುವ ಕಥೆಗಳು ಮತ್ತು ಪಾತ್ರಗಳು ಜನರ ಮನಸ್ಸಿಗೆ ನೇರವಾಗಿ ತಲುಪಿ ಬದಲಾವಣೆ ತರುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ನಾಟಕಗಳು ಪ್ರದರ್ಶನಗೊಳ್ಳುತ್ತಿರುವುದು ಸಂತೋಷದ ವಿಚಾರ. ನಶಿಸಿ ಹೋಗುತ್ತಿರುವ ರಂಗ ಕಲೆಯನ್ನು ಉಳಿಸಿ ಬೆಳೆಸಬೇಕಿದೆ. ಇಂತಹ ಕಾರ್ಯಗಳಿಗೆ ಸಾರ್ವಜನಿಕರು ಸಹಾಯಹಸ್ತ ನೀಡಬೇಕು ಎಂದು ನಂಜುಂಡಸ್ವಾಮಿ ಹೇಳಿದರು.
ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೌರಾಣಿಕ ನಾಟಕಗಳು ಕೇವಲ ದೇವರ ಕಥೆಯಲ್ಲ. ಇಂದಿನ ಬದುಕಿಗೆ ಬೇಕಾದ ನೈತಿಕ ದಿಕ್ಸೂಚಿ.

ಯಕ್ಷಗಾನ, ಬಯಲಾಟಗಳಲ್ಲಿ ಇವೇ ಕಥೆಗಳು ಇಂದಿಗೂ ಜನರಿಗೆ ನೀತಿ ಹೇಳುತ್ತಿವೆ. ಧರ್ಮರಾಯನ ಧರ್ಮನಿಷ್ಠೆ, ಶ್ರೀರಾಮನ ಪಿತೃವಾಕ್ಯ ಪರಿಪಾಲನೆ, ಕರ್ಣನ ದಾನಶೂರತೆ, ಹರಿಶ್ಚಂದ್ರನ ಸತ್ಯನಿಷ್ಠೆ ಹೀಗೆ ಮಹಾಭಾರತ-ರಾಮಾಯಣ ನಾಟಕಗಳು ಮನುಷ್ಯನಿಗೆ ಧರ್ಮಕ್ಕಾಗಿ ನಿಲ್ಲೋದನ್ನು ಕಲಿಸುತ್ತವೆ. ಕೌರವ-ಪಾಂಡವರ ಯುದ್ಧ, ರಾಮ-ರಾವಣರ ಸಂಘರ್ಷದ ಮೂಲಕ ಅಧರ್ಮದ ಸೋಲು, ಧರ್ಮಕ್ಕೆ ಎಂದಿಗೂ ಇದ್ದೇ ಇದೆ ಎಂಬುದನ್ನು ತೋರಿಸುತ್ತದೆ.
ಭಕ್ತ ಪ್ರಹ್ಲಾದದಿಂದ ಭಕ್ತಿ, ಶ್ರವಣಕುಮಾರನಿಂದ ಮಾತೃ-ಪಿತೃ ಭಕ್ತಿ, ಸೀತೆಯಿಂದ ಸಹನೆ ಮತ್ತು ತ್ಯಾಗ, ಮಾಡಿದ ಕರ್ಮಕ್ಕೆ ಫಲ ಇದ್ದೇ ಇದೆ ಎಂಬುದನ್ನು ದಶರಥ, ಪಾಂಡು, ಗಾಂಧಾರಿಯ ಕಥೆಗಳು ಹೇಳುತ್ತವೆ. ದ್ರೌಪದಿ, ಸೀತೆ, ಸಾವಿತ್ರಿಯರ ಪಾತ್ರಗಳು ಧೈರ್ಯ, ಪಾತಿವ್ರತ್ಯ, ಬುದ್ಧಿವಂತಿಕೆಯನ್ನು ಎತ್ತಿ ತೋರಿಸುತ್ತವೆ. ಏಕಲವ್ಯ, ಅರ್ಜುನ-ದ್ರೋಣರ ಕಥೆಗಳು ಶ್ರದ್ಧೆ ಮತ್ತು ವಿದ್ಯೆಯ ಮಹತ್ವ ಸಾರುತ್ತವೆ. ಹೀಗೆ ರಾಮಾಯಣ, ಮಹಾಭಾರತ ನಾಟಕಗಳು ಉತ್ತಮ ಗುಣಗಳನ್ನು ಬೆಳೆಸುವ ಮೂಲಕ ಸನ್ಮಾರ್ಗಕ್ಕೆ ದಾರಿ ತೋರಿಸುತ್ತವೆ ಹಾಗಾಗಿ ಸಿನಿಮಾ, ಧಾರಾವಾಹಿಗಳಿಗಿಂತ ಪೌರಾಣಿಕ ನಾಟಕಗಳು ಪ್ರಸ್ತುತ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗುತ್ತದೆ. ಸಮಾಜವು ಉತ್ತಮ ದಿಕ್ಕಿನಲ್ಲಿ ಸಾಗಲು ಸಾಧ್ಯವಾಗುತ್ತದೆ ಹಾಗಾಗಿ ಪೌರಾಣಿಕ ನಾಟಕ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಕಲಾವಿದರಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಆರ್.ಟಿ.ಓ. ಮಲ್ಲಿಕಾರ್ಜುನ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಟಿ.ಮಂಜು, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಹೆಚ್.ಎಸ್.ರಾಜು, ತಾಲ್ಲೂಕು ಡಾ.ರಾಜ್ಕುಮಾರ್ ರಂಗ ಕಲಾ ವೇದಿಕೆಯ ಅಧ್ಯಕ್ಷ ದೇವರಾಜು, ಸಂಘಟನಾ ಕಾರ್ಯದರ್ಶಿ ಹೆಚ್.ಎಸ್.ರಘು, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ಕುಮಾರ್, ರಂಗಭೂಮಿ ಕಲಾವಿದರಾದ ಹರಿಹರಪುರ ಮಹಾದೇವೇಗೌಡ, ಚಟ್ಟೇನಹಳ್ಳಿ ನಾಗರಾಜು, ಅಗ್ರಹಾರಬಾಚಹಳ್ಳಿ ಎ.ಎಂ.ಮಂಜೇಗೌಡ, ಕೆ.ಬಿ.ಕಾಳಯ್ಯ ಹಾಗೂ ಹೊಸಹೊಳಲು ಗ್ರಾಮದ ಯಜಮಾನರುಗಳು ಹಾಗೂ ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
