ನವದೆಹಲಿ, ಏ.15: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ಗಳ ಅಕ್ರಮ ದಾಸ್ತಾನು ಹಾಗೂ ಕಾಳಸಂತೆ ಮಾರಾಟವನ್ನು ತಡೆಯಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದು, ರಾಷ್ಟ್ರಾದ್ಯಂತ ವಿಶೇಷ ಅಭಿಯಾನ ಆರಂಭಿಸಿದೆ.
ಗ್ರಾಹಕರಿಗೆ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಕೈಗೊಳ್ಳಲಾದ ಈ ಅಭಿಯಾನದ ಭಾಗವಾಗಿ ಏಪ್ರಿಲ್ 11, 2026ರಂದು ದೇಶದಾದ್ಯಂತ 2700 ತಪಾಸಣೆ ಮತ್ತು ದಾಳಿಗಳನ್ನು ನಡೆಸಲಾಗಿದೆ. ಈ ವೇಳೆ ತೈಲ ಮಾರಾಟ ಸಂಸ್ಥೆಗಳು (ಒಎಮ್ಸಿ) ಎಲ್ಪಿಜಿ ವಿತರಣೆ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿವೆ.
ಈ ಕಾರ್ಯಾಚರಣೆಯಲ್ಲಿ ನಿಯಮ ಉಲ್ಲಂಘನೆ ಮಾಡಿದ 219 ವಿತರಕರಿಗೆ ದಂಡ ವಿಧಿಸಲಾಗಿದ್ದು, 56 ವಿತರಕರನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ ಎಲ್ಪಿಜಿ ಬಳಕೆಯಲ್ಲಿ ಜವಾಬ್ದಾರಿತನ ಹೆಚ್ಚಿಸಲು ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.
ಕಳೆದ 8 ದಿನಗಳಲ್ಲಿ 5 ಕೆಜಿ ಫ್ರೀ ಟ್ರೇಡ್ ಎಲ್ಪಿಜಿ (ಎಫ್ಟಿಎಲ್) ಸಿಲಿಂಡರ್ಗಳ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಸುಮಾರು 3,300 ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈಗಾಗಲೇ 35,800 ಸಿಲಿಂಡರ್ಗಳನ್ನು ಮಾರಾಟ ಮಾಡಲಾಗಿದೆ. ಈ ಕ್ರಮಗಳಿಂದ ಮನೆ ಬಳಕೆ ಎಲ್ಪಿಜಿ ಪೂರೈಕೆಯ ಮೇಲಿನ ಒತ್ತಡ ಕಡಿಮೆಯಾಗಿದ್ದು, ವಲಸೆ ಕಾರ್ಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಅನುಕೂಲವಾಗಿದೆ.
ಮನೆ ಬಳಕೆ ಎಲ್ಪಿಜಿ ಪೂರೈಕೆ ಸುಗಮವಾಗಿದ್ದು, ಯಾವುದೇ ವಿತರಕ ಕೇಂದ್ರಗಳಲ್ಲಿ ಕೊರತೆ ವರದಿಯಾಗಿಲ್ಲ. ಏಪ್ರಿಲ್ 11ರಂದು ಮಾತ್ರ ದೇಶದಾದ್ಯಂತ 52.3 ಲಕ್ಷ ಎಲ್ಪಿಜಿ ಸಿಲಿಂಡರ್ಗಳನ್ನು ಪೂರೈಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
