ಬೆಂಗಳೂರು : ಬಂಡೆಪಾಳ್ಯ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಮತ್ತು ಅವರ ತಂಡದ ವಿರುದ್ಧ 25 ಲಕ್ಷ ರೂಪಾಯಿ ವಸೂಲಿಗಾಗಿ ನೇಪಾಳದ ಯುವಕ ಮನೋಜ್ ತಾಪನನ್ನು ಕಿಡ್ನಾಪ್ ಮಾಡಿದರೆಂಬ ಗಂಭೀರ ಆರೋಪ ಹೊರಬಿದ್ದಿದೆ. ಡಿಸೆಂಬರ್ 5ರಂದು ರಾತ್ರಿ ಯಲಹಂಕದ ಮನೆಯಿಂದ ನಾಲ್ವರು ಮಂದಿ ಮನೆಗೆ ನುಗ್ಗಿ ಮನೋಜ್ ಅವರನ್ನು ರೆಡ್ ಸ್ಯಾಂಟ್ರೋ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದರು ಎಂದು ಪತ್ನಿ ಲಕ್ಷ್ಮಿ ದೂರು ನೀಡಿದ್ದಾರೆ. ಯಲಹಂಕ ಪೊಲೀಸರು ಸಿಸಿಟಿವಿ ಪುಟೇಜ್ ಪಡೆದು ಅಪಹರಣದ ಸಾಕ್ಷಿಯನ್ನು ದೃಢಪಡಿಸಿದ್ದಾರೆ.
ಅಪಹರಣದ ಪ್ರಕರಣ ದಾಖಲಾಗುತ್ತಿದ್ದಂತೆ, ಮರುದಿನ ಬಂಡೆಪಾಳ್ಯ ಪೊಲೀಸರು ಮನೋಜ್ ತಾಪನ ಮೇಲೆ ಗಾಂಜಾ ಮಾರಾಟದ ಸುಳ್ಳು FIR ದಾಖಲಿಸಿ ಅರೆಸ್ಟ್ ಮಾಡಿದ್ದಾರೆ ಎಂಬ ಆರೋಪ ಕೂಡ ಇದೆ. ಈ ಪ್ರಕರಣದ ಬಗ್ಗೆ ಮನೋಜ್ ಅವರ ಪತ್ನಿ ಮಾನವ ಹಕ್ಕು ಆಯೋಗ ಮತ್ತು ಡಿಜಿಪಿಗೆ ದೂರು ಸಲ್ಲಿಸಿದ್ದು, ಖಾಸಗಿ ರೌಡಿ ಮತ್ತು ಮೂವರು ಪೊಲೀಸ್ ಸಿಬ್ಬಂದಿ ಸೇರಿಕೊಂಡು ಅಪಹರಣ ನಡೆಸಿದ ಪ್ರಕರಣ ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
