ನವದೆಹಲಿ: ದೇಶದಲ್ಲಿ ಸತ್ಯವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿದ್ದು, ಅಂತಹ ಬೆಳವಣಿಗೆಗಳಿಗೆ ಅವಕಾಶ ನೀಡದಂತೆ ನೋಡಿಕೊಳ್ಳುವುದು ತಮ್ಮ ಜವಾಬ್ದಾರಿ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ದೇಶದಾದ್ಯಂತ ನಡೆಯುತ್ತಿರುವ ವಿಷಯಾಧಾರಿತ ಹೋರಾಟಗಳನ್ನು ಒಂದೇ ವೇದಿಕೆಯಡಿ ಸಂಘಟಿಸುವ ಉದ್ದೇಶದಿಂದ ಅವರು ‘ಸತ್ಯಾಗ್ರಹ’ ಡಿಜಿಟಲ್ ವೇದಿಕೆಗೆ ಚಾಲನೆ ನೀಡಿದ್ದಾರೆ. ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆ ಹಾಗೂ ಹೋರಾಟಗಳನ್ನು ದಾಖಲಿಸುವಂತೆ ಅವರು ಜನರಿಗೆ ಕರೆ ನೀಡಿದ್ದಾರೆ.
ಮಹಾತ್ಮ ಗಾಂಧಿ ಅವರ 157ನೇಜನ್ಮದಿನದ ಮರುದಿನವೇ ‘ಸತ್ಯಾಗ್ರಹ’ ವೇದಿಕೆಗೆ ಚಾಲನೆ ನೀಡಲಾಗಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ದೇಶದಾದ್ಯಂತ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಹಲವು ಸಂದರ್ಭಗಳಲ್ಲಿ ಅವರು ಏಕಾಂಗಿಯಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ.
ಜೆನ್-ಝಿ, ವಿದ್ಯಾರ್ಥಿಗಳು, ರೈತರು, ಬುಡಕಟ್ಟು ಸಮುದಾಯದವರು, ದಲಿತರು ಮತ್ತು ಮಹಿಳೆಯರು ಸೇರಿದಂತೆ ವಿವಿಧ ವರ್ಗಗಳ ಹೋರಾಟಗಳ ಹಿಂದೆ ಪ್ರತ್ಯೇಕ ಕಥೆಗಳಿವೆ. ಏಕಾಂಗಿಯಾಗಿರುವ ಧ್ವನಿಗಳನ್ನು ಸುಲಭವಾಗಿ ಹತ್ತಿಕ್ಕಬಹುದು. ಹೀಗಾಗಿ ಎಲ್ಲರ ಧ್ವನಿಯನ್ನು ಒಂದೆಡೆ ಸೇರಿಸುವ ಪ್ರಯತ್ನವೇ ‘ಸತ್ಯಾಗ್ರಹ’ ಎಂದು ಅವರು ಹೇಳಿದ್ದಾರೆ.
‘ಬಾಪು (ಮಹಾತ್ಮ ಗಾಂಧಿ) ಸತ್ಯವೇ ದೊಡ್ಡ ಅಸ್ತ್ರ ಎಂಬುದನ್ನು ಕಲಿಸಿದ್ದಾರೆ. ಆದರೆ, ಸತ್ಯದ ಜೊತೆ ನಿಲ್ಲುವುದು ಅದಕ್ಕಿಂತಲೂ ದೊಡ್ಡದು. ಯಾವುದಾದರೂ ಅನ್ಯಾಯದ ವಿರುದ್ಧ ನೀವೂ ಹೋರಾಡುತ್ತಿದ್ದರೆ, ನಿಮ್ಮ ಕಥೆಯನ್ನೂ ಹಂಚಿಕೊಳ್ಳಿ. ಅದಕ್ಕೆ ಎರಡೇ ನಿಮಿಷ ಸಾಕು’ ಎಂದು ಹೇಳಿದ್ದಾರೆ.
‘ನಿಮ್ಮ ಹೋರಾಟಕ್ಕೆ ಸತ್ಯಾಗ್ರಹದಲ್ಲಿ ಸ್ಥಾನವಿದೆ. ನಿಮ್ಮಂತೆ ಇನ್ನೂ ಯಾರೆಲ್ಲ ಹೋರಾಡುತ್ತಿದ್ದಾರೆ ಎಂಬುದು ಅಲ್ಲಿ ಕಾಣುತ್ತದೆ’ ಎಂದು ತಿಳಿಸಿದ್ದಾರೆ.
‘ಸಂಸತ್ತಿನಲ್ಲಿ, ಬೀದಿಗಳಲ್ಲಿ, ಪತ್ರಗಳ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ಎಲ್ಲೆಲ್ಲ ಸಾಧ್ಯವಿದೆಯೋ ಅಲ್ಲೆಲ್ಲಾ ನಿಮ್ಮೊಂದಿಗೆ ನಿಲ್ಲಲು ಪ್ರಯತ್ನಿಸುತ್ತೇನೆ. ವಿರೋಧ ಪಕ್ಷದ ನಾಯಕನಾಗಿ ಅದು ನನ್ನ ಜವಾಬ್ದಾರಿ. ನಿಮ್ಮ ಸತ್ಯಾಗ್ರಹದ ಕಥೆಯನ್ನು ನನ್ನೊಂದಿಗೆ ಹಂಚಿಕೊಳ್ಳಿ’ ಎಂದು ಭರವಸೆ ನೀಡಿದ್ದಾರೆ.
ವಿಡಿಯೊ ಸಂದೇಶವನ್ನೂ ಹಂಚಿಕೊಂಡಿರುವ ರಾಹುಲ್, ‘ನಿಮಗೆಲ್ಲ ತಿಳಿದಿರುವಂತೆ ದೇಶದಾದ್ಯಂತ ಸತ್ಯವನ್ನು ಹತ್ತಿಕ್ಕಲಾಗುತ್ತಿದೆ. ದೇಶದ ಮೂಲೆ ಮೂಲೆಯಲ್ಲಿ ಅನೇಕ ಪ್ರತಿಭಟನೆಗಳು ನಡೆಯುತ್ತಿವೆ. ಭೂಮಿಗಾಗಿ, ಮಹಿಳೆಯರ ಹಕ್ಕಿಗಾಗಿ, ಶಿಕ್ಷಣಕ್ಕಾಗಿ, ಪರೀಕ್ಷಾ ಅಕ್ರಮಗಳ ವಿರುದ್ಧ ಹೋರಾಟಗಳು ನಡೆಯುತ್ತಿವೆ. ಅವೆಲ್ಲವನ್ನೂ ಸಂಘಟಿಸಿ, ಒಂದೇ ವೇದಿಕೆಗೆ ತಂದು, ಹೋರಾಟಕ್ಕೆ ನೆರವಾಗುವುದು ನಮ್ಮ ಉದ್ದೇಶ. ಸತ್ಯಾಗ್ರಹ ವೆಬ್ಸೈಟ್ ನೋಡಿ. ಅಲ್ಲಿರುವ ನಮೂನೆಯನ್ನು ಭರ್ತಿ ಮಾಡಿ. ನಿಮ್ಮ ಚಳವಳಿ ಏನೆಂಬುದನ್ನು ನೋಂದಾಯಿಸಿ. ನಿಮಗೆ ನೆರವಾಗುವ ಪ್ರಯತ್ನ ಮಾಡುತ್ತೇವೆ’ ಎಂದು ಹೇಳಿದ್ದಾರೆ.
‘ಎಲ್ಲಿ ಸತ್ಯವನ್ನು ಹತ್ತಿಕ್ಕುತ್ತಿದೆಯೋ ಅಲ್ಲಿ ಜನರ ಹೋರಾಟಕ್ಕೆ ನೆರವಾಗುವುದು ವಿರೋಧ ಪಕ್ಷದ ನಾಯಕನಾಗಿ ನನ್ನ ಕರ್ತವ್ಯ. ಸತ್ಯ ಬಹಳ ಮುಖ್ಯ. ಅದಕ್ಕಾಗಿ ದೇಶದ ಮೂಲೆ ಮೂಲೆಯಲ್ಲೂ ಹೋರಾಡುವುದು ಅತ್ಯಗತ್ಯ’ ಎಂದು ಪ್ರತಿಪಾದಿಸಿದ್ದಾರೆ.
