ಕೆ.ಆರ್.ಪೇಟೆ: ಕೇಂದ್ರ ಸಾಹಿತ್ಯ ಅಕಾಡೆಮೆ ಪ್ರಶಸ್ತಿ ಪುರಸ್ಕೃತ, ಯುಗಸಂಧ್ಯಾ ಮಹಾಕಾವ್ಯದ ಕತೃ ಪ್ರೊ. ಸುಜನಾ ಅವರ ಹುಟ್ಟುಹಬ್ಬದ ಅಂಗವಾಗಿ ನೂತನವಾಗಿ ಸ್ಥಾಪಿತಗೊಂಡಿರುವ “ಪ್ರೊ. ಸುಜನಾ ಸಾಹಿತ್ಯ ಪ್ರತಿಷ್ಠಾನ ಟ್ರಸ್ಟ್” ವತಿಯಿಂದ ಏಪ್ರಿಲ್ 28ರಂದು ಬೆಳಿಗ್ಗೆ 11 ಗಂಟೆಗೆ ಸುಜನಾ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹೊಸಹೊಳಲು ಗ್ರಾಮದ ಎಸ್.ಎಲ್.ಎನ್. ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೆ.ಎಸ್. ಸೋಮಶೇಖರ್ ತಿಳಿಸಿದ್ದಾರೆ.
ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಪ್ರೊ. ಸುಜನಾ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತಿ ರಾ.ಗೌ (ಪ್ರೊ. ರಾಮೇಗೌಡ) ಅವರಿಗೆ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯೊಂದಿಗೆ ರೂ.25 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಫಲತಾಂಬೂಲ ನೀಡಿ ಗೌರವಿಸಲಾಗುವುದು ಎಂದರು.
ಪ್ರತಿಷ್ಠಾನವು ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಅವರ ವಿಶೇಷ ಆಸಕ್ತಿ ಹಾಗೂ ಸುಜನಾ ಅವರ ಶಿಷ್ಯವೃಂದದ ಸಹಕಾರದಿಂದ, ತಾಲ್ಲೂಕಿನ ಸಾಹಿತ್ಯಾಸಕ್ತರ ಬೆಂಬಲದೊಂದಿಗೆ ಸ್ಥಾಪನೆಯಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮವನ್ನು ಪ್ರೊ. ಜಯಪ್ರಕಾಶ್ ಗೌಡ ಉದ್ಘಾಟಿಸಲಿದ್ದು, ಕ್ಷೇತ್ರದ ಶಾಸಕ ಎಚ್.ಟಿ. ಮಂಜು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೊ. ಸುಜನಾ ಸಾಹಿತ್ಯ ಪ್ರಶಸ್ತಿಯನ್ನು ಖ್ಯಾತ ಸಾಹಿತಿ ಡಾ. ಹಂಪನಾ ಅವರು ಪ್ರದಾನ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂಡಿ ಲಕ್ಷ್ಮೀನಾರಾಯಣ್ ಅವರು “ಮರೆಯಲಾಗದ ಸೃಜನತ್ವ” ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ ಅವರು ಪುಸ್ತಕ ಪರಿಚಯ ನೀಡಲಿದ್ದು, ಅಭಿನಂದನಾ ನುಡಿಗಳನ್ನು ಡಾ. ಮಾ. ರಾಮಕೃಷ್ಣ ವಾಚಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜಿ.ಟಿ. ವೀರಪ್ಪ, ಡಾ. ಕೆ. ನರಸಿಂಹಮೂರ್ತಿ, ಆರ್ಟಿಓ ಮಲ್ಲಿಕಾರ್ಜುನ್, ವಿಜಯರಾಮೇಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿಶ್ರಾಂತ ಪ್ರಾಂಶುಪಾಲ ಕೆ. ಕಾಳೇಗೌಡ, ಪ್ರತಿಷ್ಠಾನದ ಪದಾಧಿಕಾರಿಗಳು ಹಾಗೂ ಹಲವು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್
