ಬೆಂಗಳೂರು: ನಮ್ಮ ಮನೆ, ಮನದ ಮಾತು ಹಾಗೂ ಹೊರಗಿನ ವ್ಯವಹಾರಗಳಲ್ಲೂ ಕನ್ನಡ ಭಾಷೆಯ ಬಳಕೆ ಹೆಚ್ಚಾಗಬೇಕು. ನಾವು ಪ್ರಾಮಾಣಿಕವಾಗಿ ಕನ್ನಡ ಕಲಿತು, ಮಾತನಾಡಲು ಆರಂಭಿಸಿದಾಗ ಮಾತ್ರ ಪರಭಾಷಿಕರೂ ಕನ್ನಡ ಕಲಿಯಲು ಸಾಧ್ಯ ಎಂದು ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ. ಎಸ್. ರಾಮಲಿಂಗೇಶ್ವರ್ (ಸಿಸಿರಾ) ಅಭಿಪ್ರಾಯಪಟ್ಟರು.
ರಾಜಾಜಿನಗರದ ಜನತಾ ವಿದ್ಯಾಸಂಸ್ಥೆಯ ವಿವೇಕಾನಂದ ಸಮೂಹ ಕಾಲೇಜುಗಳ ವತಿಯಿಂದ ಆಯೋಜಿಸಿದ್ದ ಸುವರ್ಣ ಸಂಭ್ರಮ ವಿವೇಕ ಕನ್ನಡೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಜೀವನದ ಅವಿಭಾಜ್ಯ ಅಂಗ. ನಾವು ಎಲ್ಲೇ ಇದ್ದರೂ ನಮ್ಮತನವನ್ನು ಬಿಟ್ಟುಕೊಡಬಾರದು. ದೇಸೀಯತೆಯನ್ನು ಉಳಿಸಿಕೊಂಡು ಕುವೆಂಪು, ಬೇಂದ್ರೆ, ಬಿ.ಎಂ.ಶ್ರೀ, ತ್ರಿವೇಣಿ ಹಾಗೂ ಜಿ.ಎಸ್.ಎಸ್. ಅವರ ಸಾಹಿತ್ಯದ ಸ್ಫೂರ್ತಿಯನ್ನು ಯುವಜನರಲ್ಲಿ ಮೂಡಿಸಬೇಕು ಎಂದರು.
ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಹುಯಿಲಗೋಳ ನಾರಾಯಣರಾಯರು, ಸಿದ್ಧಪ್ಪ ಕಂಬಳಿ, ಅನಕೃ, ಅಂದಾನಪ್ಪ ದೊಡ್ಡಮೇಟಿ, ಕೆಂಗಲ್ ಹನುಮಂತಯ್ಯ ಹಾಗೂ ಎಸ್. ನಿಜಲಿಂಗಪ್ಪ ಸೇರಿದಂತೆ ಅನೇಕ ಮಹನೀಯರ ಸ್ಮರಣೆಯೇ ಕನ್ನಡ ರಾಜ್ಯೋತ್ಸವದ ನಿಜವಾದ ಸಂಭ್ರಮವಾಗಿದೆ. ಕನ್ನಡ ಮಾತನಾಡಬೇಕು, ಓದಬೇಕು, ಬರೆಯಬೇಕು. ಇಂದಿನಿಂದಲೇ ಕನ್ನಡದಲ್ಲೇ ಸಹಿ ಮಾಡುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಖಜಾಂಚಿ ಎಚ್.ಜಿ. ಬಾಲಗೋಪಾಲ್ ಮಾತನಾಡಿ, ಪ್ರಾಚೀನ ಭಾಷೆಯಾಗಿರುವ ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧಿಸುವ ಜವಾಬ್ದಾರಿ ಅಧ್ಯಾಪಕರ ಮೇಲಿದೆ. ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಮೂಡುವಂತೆ ಬೋಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಅಪ್ಪಾರೆಡ್ಡಿ ಹರೀಶ್ ಮಾತನಾಡಿ, ಮನೆಮಾತು ಯಾವುದೇ ಇರಲಿ, ಕರ್ನಾಟಕದಲ್ಲಿ ವಾಸಿಸುವ ಎಲ್ಲರೂ ಒಂದಾಗಿ ಬಾಳಬೇಕು. ಕನ್ನಡವನ್ನು ಮಾತನಾಡುವ ಮೂಲಕ ಭಾಷೆಯ ಗೌರವ ಹೆಚ್ಚಿಸಬೇಕು ಎಂದರು.

ಆಡಳಿತ ಮಂಡಳಿ ಸದಸ್ಯರಾದ ಐ. ನಾರಾಯಣರೆಡ್ಡಿ, ಎಸ್.ಎನ್. ಲತಾ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಬಿ.ಎಚ್. ಪಂಕಜ, ಪ್ರಾಂಶುಪಾಲರಾದ ಡಾ. ಜಿ.ಪಿ. ಹೇಮಾವತಿ, ಪ್ರೊ. ಎಂ.ಎಚ್. ಬೈರಣ್ಣ ಸೇರಿದಂತೆ ವಿವೇಕಾನಂದ ವಿದ್ಯಾಸಂಸ್ಥೆಯ ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಕನ್ನಡ ನಾಡು-ನುಡಿಯ ಗೀತೆಗಳು ಮತ್ತು ನೃತ್ಯ ಪ್ರದರ್ಶನಗಳು ರಾಜ್ಯೋತ್ಸವ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದವು.
