ಹಾಸನ : ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಉಳ್ಳೇನಹಳ್ಳಿ ಗ್ರಾಮದಲ್ಲಿ ಹುಚ್ಚು ನಾಯಿ ಏಕಾಏಕಿ ದಾಳಿ ನಡೆಸಿ ಇಬ್ಬರು ಮಕ್ಕಳು ಸೇರಿದಂತೆ ಎಂಟು ಮಂದಿಗೆ ಗಾಯಗೊಳಿಸಿರುವ ಘಟನೆ ಗುರುವಾರ ನಡೆದಿದೆ.
ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳು ಹಾಗೂ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದ್ದು, ರಾಜು, ರಘು, ಅಂಜಲಿ, ಮಂಜಯ್ಯ ಸೇರಿದಂತೆ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಒಟ್ಟು ಎಂಟು ಮಂದಿ ಗಾಯಾಳುಗಳನ್ನು ತಕ್ಷಣವೇ ಕೊಣನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮಕ್ಕಳು ಹಾಗೂ ಸಾರ್ವಜನಿಕರು ಹೊರಗಡೆ ಓಡಾಡಲು ಭಯಪಡುವಂತಾಗಿದೆ.
ಉಳ್ಳೇನಹಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳನ್ನು ನಿಯಂತ್ರಿಸುವಂತೆ ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ.
ಹುಚ್ಚು ನಾಯಿಯ ದಾಳಿಯ ಬಳಿಕ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಹುಚ್ಚು ನಾಯಿಯನ್ನು ಸೆರೆಹಿಡಿಯಬೇಕು, ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಿ ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
