ರಾಮನಾಥಪುರ, ಸೆ.24: ಗಣೇಶೋತ್ಸವದ ಅಂಗವಾಗಿ ರಾಮನಾಥಪುರದ ರಘುಪತಿಕೊಪ್ಪಲು ಬ್ಯಾಕ್ನ ಶ್ರೀ ಕಾಲಭೈರವೇಶ್ವರ ಗಣಪತಿ ಯುವಕರ ಸಂಘದ ವತಿಯಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅನ್ನ ದಾಸೋಹವನ್ನು ಆಯೋಜಿಸಲಾಗಿದೆ ಎಂದು ಸಂಘದ ಮುಖಂಡ ವಿನೋದ್ ತಿಳಿಸಿದ್ದಾರೆ.
ರಾಮನಾಥಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.20ರಂದು ಸಂಜೆ 4 ಗಂಟೆಗೆ ಶ್ರೀಕ್ಷೇತ್ರ ಶಿರದನಹಳ್ಳಿಯ ಶ್ರೀ ಶನಿಸಾರಥಿ ಆಗಮನ ಹಾಗೂ ಉದ್ದೂರು ಗ್ರಾಮದ ಶ್ರೀ ರವಿ ಅವರ ನೇತೃತ್ವದಲ್ಲಿ ಶ್ರೀ ವೀರಭದ್ರೇಶ್ವರ ವೀರಗಾಸೆ ನೃತ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ಗಣಪತಿ ಹೋಮ, ಮಹಾಮಂಗಳಾರತಿ, ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸೆ.30ರಂದು ಶ್ರೀ ಕಾಲಭೈರವೇಶ್ವರ ಗಣಪತಿ ಯುವಕರ ಸಂಘ ಹಾಗೂ ಭಕ್ತಾದಿಗಳ ಸಹಯೋಗದಲ್ಲಿ ಸಾವಿರಾರು ಭಕ್ತರಿಗೆ ಅನ್ನ ದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಅಕ್ಟೋಬರ್ 8ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಗೌರಮ್ಮ-ಗಣೇಶ ಮೂರ್ತಿಯನ್ನು ಬೆಳ್ಳಿರಥದಲ್ಲಿ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿ, ಬಳಿಕ ವಿಸರ್ಜನಾ ಕಾರ್ಯಕ್ರಮ ನೆರವೇರಿಸಲಾಗುವುದು. ಕಾರ್ಯಕ್ರಮದ ನಂತರ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಗಣೇಶೋತ್ಸವದ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಸದಸ್ಯರಾದ ವಿನೋದ್, ಸುನಿ, ರವಿ, ಪ್ರಮೋದ್, ಸತೀಶ್, ಮಂಜು ಸೇರಿದಂತೆ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
– ಕುಮಾರಸ್ವಾಮಿ. ಎಂ.ಎನ್.
