ರಾಮನಾಥಪುರ: ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಹಾಗೂ ಡಿಜಿಟಲ್ ಕಲಿಕಾ ಸೌಲಭ್ಯಗಳು ದೊರೆಯಬೇಕು ಎಂಬ ಉದ್ದೇಶದಿಂದ ಕಳಿಂಗಪ್ಪ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ರಾಮನಾಥಪುರ ಹೋಬಳಿಯ ಹನ್ಯಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಹಾಗೂ ವಿವಿಧ ಶೈಕ್ಷಣಿಕ ಅಪ್ಲಿಕೇಶನ್ಗಳನ್ನು ಕೊಡುಗೆಯಾಗಿ ನೀಡಲಾಯಿತು.
ಕಳಿಂಗಪ್ಪ ವೆಲ್ಫೇರ್ ಅಸೋಸಿಯೇಷನ್ನ ಸಮಾಜ ಸೇವಕ ಕಳಿಂಗಪ್ಪ ಮಂಜುನಾಥ್ ಅವರು ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎ. ಮಂಜು ಅವರ ಮೂಲಕ ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎ. ಮಂಜು, ಸರ್ಕಾರಿ ಶಾಲೆಗಳ ಸಬಲೀಕರಣವೇ ಗ್ರಾಮೀಣ ಶಿಕ್ಷಣದ ಬಲವರ್ಧನೆ. ಗ್ರಾಮೀಣ ಮಕ್ಕಳ ಸಾಧನೆಗೆ ಪ್ರೋತ್ಸಾಹ ನೀಡುವುದು ಉತ್ತಮ ಸಮಾಜ ನಿರ್ಮಾಣದ ಅಡಿಪಾಯವಾಗಿದೆ. ಈ ನಿಟ್ಟಿನಲ್ಲಿ ಕಳಿಂಗಪ್ಪ ಮಂಜುನಾಥ್ ಹಾಗೂ ಕಳಿಂಗಪ್ಪ ವೆಲ್ಫೇರ್ ಅಸೋಸಿಯೇಷನ್ ಕೈಗೊಳ್ಳುತ್ತಿರುವ ಶಿಕ್ಷಣಪರ ಮತ್ತು ಸಮಾಜಮುಖಿ ಕಾರ್ಯಗಳು ಶ್ಲಾಘನೀಯ. ಇಂತಹ ಸೇವೆಗಳು ಇನ್ನಷ್ಟು ಸರ್ಕಾರಿ ಶಾಲೆಗಳ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಲಿ ಎಂದು ಆಶಿಸಿದರು.
ಕಳಿಂಗಪ್ಪ ಮಂಜುನಾಥ್ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೂ ತಂತ್ರಜ್ಞಾನ ಆಧಾರಿತ ಶಿಕ್ಷಣ ದೊರೆಯಬೇಕು. ಕಂಪ್ಯೂಟರ್ ಜ್ಞಾನ ಮತ್ತು ಡಿಜಿಟಲ್ ಕಲಿಕಾ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಶಾಲೆಗೆ ಕಂಪ್ಯೂಟರ್ ಹಾಗೂ ಶೈಕ್ಷಣಿಕ ಅಪ್ಲಿಕೇಶನ್ಗಳನ್ನು ನೀಡಲಾಗಿದೆ ಎಂದರು.
ಹನ್ಯಾಳು ಹಿರಿಯ ವಿದ್ಯಾರ್ಥಿ ಬಳಗದ ಸಂಚಾಲಕ ಅಶೋಕ್ ಹನ್ಯಾಳು ಮಾತನಾಡಿ, ಕಳಿಂಗಪ್ಪ ಮಂಜುನಾಥ್ ಅವರು ಹನ್ಯಾಳು ಸೇರಿದಂತೆ ಅರಕಲಗೂಡು ಹಾಗೂ ಆಲೂರು ತಾಲ್ಲೂಕಿನ ಹಲವು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಅವುಗಳ ಶೈಕ್ಷಣಿಕ ಗುಣಮಟ್ಟ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳ ಮಕ್ಕಳಿಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮಾನವಾದ ಕಲಿಕಾ ಅವಕಾಶಗಳು ದೊರೆಯಬೇಕು ಎಂಬುದು ಅವರ ಆಶಯವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಿ, ಉತ್ತಮ ಸಾಧನೆಗೆ ಪ್ರೇರಣೆ ನೀಡುವ ಉದ್ದೇಶದಿಂದ ಮುಂಬರುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ಟಾಪರ್ ಆಗುವ ವಿದ್ಯಾರ್ಥಿಗಳಿಗೆ ಟ್ಯಾಬ್ಗಳನ್ನು ಉಡುಗೊರೆಯಾಗಿ ನೀಡುವುದಾಗಿ ಕಳಿಂಗಪ್ಪ ಮಂಜುನಾಥ್ ಭರವಸೆ ನೀಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದಲ್ಲಿಯೂ ಡಿಜಿಟಲ್ ತಂತ್ರಜ್ಞಾನ ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದರು.
ಗ್ರಾಮೀಣ ಮಕ್ಕಳಿಗೆ ಆರ್ಥಿಕ ಅಥವಾ ಮೂಲಸೌಕರ್ಯಗಳ ಕೊರತೆಯಿಂದ ಗುಣಮಟ್ಟದ ಶಿಕ್ಷಣ ವಂಚಿತವಾಗಬಾರದು. ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ದೊರೆಯುವ ಶೈಕ್ಷಣಿಕ ಅವಕಾಶಗಳು ಗ್ರಾಮೀಣ ಮಕ್ಕಳಿಗೂ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಮತ್ತು ದಾನಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಉಪನಿರ್ದೇಶಕ ಡಾ. ಅಶೋಕ್ ಹನ್ಯಾಳ್, ಗಂಗೂರು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಡಾ. ದಿಲೀಪ್, ಪಿಡಿಒ ಹೇಮಲತಾ, ಗ್ರಾಮಗಳ ಮುಖಂಡರಾದ ಬಂಕ್ ಮಂಜಣ್ಣ, ಕುಮಾರಸ್ವಾಮಿ, ಜಗದೀಶ್, ಲೋಕನಾಥ್, ಪುನೀತ್, ವಾಸು, ನಾರಾಯಣ, ಕೃಷ್ಣೇಗೌಡ, ಎಚ್.ವಿ. ಈಶ್ವರೇಗೌಡ, ಎಚ್.ವಿ. ರವಿ, ಗುಂಡಣ್ಣ, ಮಂಜುನಾಥ್, ಸುಹಾಸ್, ಉದಯ್, ಸಂತೋಷ್, ಹನುಮೇಶ್, ಅವಿನಾಶ್, ಯತೀಶ್ ಸೇರಿದಂತೆ ಶಿಕ್ಷಕರು, ಗ್ರಾಮಸ್ಥರು ಹಾಗೂ ಎಚ್.ಎನ್. ನಂಜೇಗೌಡರ ಅಭಿಮಾನಿಗಳು ಭಾಗವಹಿಸಿದ್ದರು.
– ಕುಮಾರಸ್ವಾಮಿ ಎಂ.ಎನ್.
