ರಾಮನಾಥಪುರ : ಭಾರತೀಯ ಸಂಸ್ಕೃತಿ ಪುಣ್ಯಭೂಮಿಯಾದ ಭಾರತ ದೇಶದಲ್ಲಿ ಹುಟ್ಟಿ ವಿಕಾಸಗೊಂಡ ಮಹಾನ್ ಸಂಸ್ಕೃತಿಯಾಗಿದ್ದು, ವಿಶ್ವಕ್ಕೆ ವಿವಿಧತೆಯಲ್ಲಿ ಏಕತೆಯ ಸಂದೇಶವನ್ನು ಸಾರುತ್ತಿದೆ ಎಂದು ಅರೆಮಾದನಹಳ್ಳಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಹೇಳಿದರು.
ರಾಮನಾಥಪುರದ ಐ.ಬಿ. ಸರ್ಕಲ್ನಲ್ಲಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ಭಾರತೀಯ ಸಂತ ಮಹಾ ಪರಿಷತ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸನಾತನ ಪರಂಪರೆಯ ಎಲ್ಲಾ ಸಂತರು ಒಂದೇ ವೇದಿಕೆಯಲ್ಲಿ ಸೇರಿರುವುದು ಹಿಂದೂ ಸಮಾಜದ ಏಕತೆಗೆ ಉತ್ತಮ ಉದಾಹರಣೆಯಾಗಿದೆ ಎಂದರು.

ಯಾರು ತಮ್ಮ ಸಂಪ್ರದಾಯದ ಮೂಲ ತಾಯಿಬೇರನ್ನು ಹಾಗೂ ನಂಬಿಕೆಯ ಪ್ರಧಾನ ಶ್ರದ್ಧಾಕೇಂದ್ರವನ್ನು ಭಾರತ ದೇಶದಲ್ಲಿ ಹೊಂದಿರುತ್ತಾರೋ ಅವರು ಭಾರತೀಯ ಸಂಸ್ಕೃತಿಗೆ ಸೇರಿದವರಾಗಿದ್ದಾರೆ. “ಏಕಂ ಸದ್ ವಿಪ್ರಾಃ ಬಹುಧಾ ವದಂತಿ” ಎಂಬ ತತ್ವದಂತೆ ಸತ್ಯ ಒಂದೇ ಆಗಿದ್ದು, ಅದನ್ನು ತಲುಪುವ ಮಾರ್ಗಗಳು ಅನೇಕ ಎಂಬ ಸಂದೇಶವನ್ನು ಭಾರತೀಯ ಸಂಸ್ಕೃತಿ ಸಾರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹರಿಹರಪುರ ಮಠದ ಪರಮಪೂಜ್ಯ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ, ಬೆಂಗಳೂರು ಶ್ರೀ ಕೈಲಾಸ ಆಶ್ರಮ ಮಠದ ಪರಮಪೂಜ್ಯ ಶ್ರೀ ಜಯೇಂದ್ರಪುರಿ ಮಹಾಸ್ವಾಮೀಜಿ, ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಪುಪ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಅರೆಮಾದನಹಳ್ಳಿ ಮಠದ ಕಿರಿಯ ಶ್ರೀ ಅನಂತ ಶ್ರೀ ಸುಜ್ಞಾನಘನ ವಿದ್ಯಾತೀರ್ಥ ಮಹಾಸ್ವಾಮೀಜಿ, ಕಲ್ಲಹಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎಸ್. ನರಸಿಂಹಮೂರ್ತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಸಾಧು-ಸಂತರು, ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
– ಎಂ.ಎನ್.ಕುಮಾರಸ್ವಾಮಿ.
