ರಾಮನಾಥಪುರ: ಹಳ್ಳಿಮೈಸೂರು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಹಳ್ಳಿಮೈಸೂರು ಹೋಬಳಿಯ ಕೋಗಿಲಹಳ್ಳಿ, ಮಾಳನಾಯಕನಹಳ್ಳಿ, ಬಿದರಕ್ಕ, ಹಿಂದಲಹಳ್ಳಿ, ಕ್ಯಾತನಹಳ್ಳಿ, ಹಳ್ಳಿಮೈಸೂರು, ಮಾಕಬಳ್ಳಿ, ಮುಕ್ಕನಹಳ್ಳಿ, ಮಂಗಳವಾಡಿ ಹಾಗೂ ದೇವರಗುಡ್ಡೆನಹಳ್ಳಿ ಗ್ರಾಮಗಳಲ್ಲಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಲಭ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಎಲ್ಲ ಗ್ರಾಮಗಳಿಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ ಎಂದರು.

ಸರ್ಕಾರದಿಂದ ಕಡಿಮೆ ಅನುದಾನ ಲಭ್ಯವಾಗುತ್ತಿದ್ದರೂ ಎಲ್ಲ ಗ್ರಾಮಗಳಿಗೂ ಸಮರ್ಪಕವಾಗಿ ಹಂಚಿಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯವಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು. ರಸ್ತೆ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಮುಖಂಡರು, ಹಿರಿಯರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
- ಕುಮಾರಸ್ವಾಮಿ ಎಂ.ಎನ್.
