ರಾಮನಾಥಪುರ: ಇಲ್ಲಿನ ಪ್ರಸಿದ್ಧ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಮಹಾ ಆಶ್ಲೇಷ ಬಲಿ ಪೂಜೆ ಹಾಗೂ ವಿಶೇಷ ಸ್ಕಂದ ಷಷ್ಠಿ ಪೂಜಾ ಕಾರ್ಯಕ್ರಮ ಭಕ್ತಿಭಾವದಿಂದ ವಿಜೃಂಭಣೆಯಿಂದ ನಡೆಯಿತು.
ದೇವಾಲಯದ ಸಭಾಂಗಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಬಳಿಕ ಮಹಾಮಂಗಳಾರತಿ ನೆರವೇರಿಸಲಾಯಿತು. ಚೆಂಡೆ ವಾದ್ಯಗಳ ಘೋಷದೊಂದಿಗೆ ಮಹಾ ಆಶ್ಲೇಷ ಬಲಿ ಪೂಜೆ ನೆರವೇರಿದ್ದು, ನೂರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದು ಪೂಜೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ದೇವಾಲಯದ ವೇದಮೂರ್ತಿ ಆದಿತ್ಯ ಭಟ್, ಸನಾತನ ಪರಂಪರೆಯನ್ನು ಸಾರುವ ಇಂತಹ ಧಾರ್ಮಿಕ ಆಚರಣೆಗಳು ನಮ್ಮ ಜೀವನದಲ್ಲಿ ಕೆಟ್ಟದ್ದನ್ನು ದೂರ ಮಾಡಿ ಒಳ್ಳೆಯದನ್ನು ಅಳವಡಿಸಿಕೊಳ್ಳಲು ಪ್ರೇರಣೆಯಾಗಬೇಕು. ಜೀವನದಲ್ಲಿ ಎದುರಾಗುವ ಕಷ್ಟಗಳು ನಿವಾರಣೆಯಾಗಲು ದೈವಭಕ್ತಿಯ ಮೇಲೆ ನಂಬಿಕೆ ಇಟ್ಟು ನಿರಂತರವಾಗಿ ದೇವರ ಆರಾಧನೆ ಮಾಡಬೇಕು ಎಂದು ತಿಳಿಸಿದರು.

ದೇವಾಲಯದಲ್ಲಿ ಪ್ರತಿದಿನ ಮಧ್ಯಾಹ್ನ ಮಹಾಪೂಜೆಯ ನಂತರ ಆಗಮಿಸುವ ಭಕ್ತರಿಗೆ ಮಧ್ಯಾಹ್ನ 2 ಗಂಟೆಯವರೆಗೆ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಮಹಾ ಆಶ್ಲೇಷ ಬಲಿ ಪೂಜಾ ಕಾರ್ಯಕ್ರಮವನ್ನು ದೇವಾಲಯದ ವ್ಯವಸ್ಥಾಪಕ ವೇ. ಸೋಮಶೇಖರ್ ಭಟ್, ಕಾರ್ತಿಕ್ ಸೋಮಯಾಜಿ, ಅಭಿಷೇಕ್ ಭಟ್ ಹಾಗೂ ಪ್ರದೀಪ್ ಬನ್ನಿಂತಾಯ ಅವರು ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಸಿಕೊಟ್ಟರು.
ದೇವಾಲಯದಲ್ಲಿ ನಡೆಯುವ ವಿಶೇಷ ಪೂಜಾ ಸೇವೆಗಳು ಹಾಗೂ ಅನ್ನದಾಸೋಹ ವ್ಯವಸ್ಥೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಭಕ್ತರು ದೇವಾಲಯದ ವ್ಯವಸ್ಥಾಪಕ ವೇ. ಸೋಮಶೇಖರ್ (ಮೊ. 9964546947, 8660436527) ಅಥವಾ ಸಹಾಯಕ ವ್ಯವಸ್ಥಾಪಕ ವೇ. ಅಭಿಷೇಕ್ (ಮೊ. 9482033754) ಅವರನ್ನು ಸಂಪರ್ಕಿಸುವಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
