ರಾಮನಾಥಪುರ: ರಾಮನಾಥಪುರ ಹೋಬಳಿಯ ಲಕ್ಕೂರು ಗ್ರಾಮದಲ್ಲಿ ನೂತನವಾಗಿ ಆರಂಭಗೊಂಡ ಸರ್ಕಾರಿ ಪ್ರೌಢಶಾಲೆಯ ಉದ್ಘಾಟನಾ ಸಮಾರಂಭವು ಲಕ್ಕೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಸಂಭ್ರಮದ ವಾತಾವರಣ ಮೂಡಿಸಿತು.
ಈ ಭಾಗದಲ್ಲಿ ಹನ್ಯಾಳು ಸರ್ಕಾರಿ ಪ್ರೌಢಶಾಲೆ ಹಾಗೂ ರಾಗಿಮರೂರು ಅನುದಾನಿತ ಪ್ರೌಢಶಾಲೆ ಮಾತ್ರ ಕಾರ್ಯನಿರ್ವಹಿಸುತ್ತಿದ್ದ ಕಾರಣ, ಹತ್ತಕ್ಕೂ ಹೆಚ್ಚು ಗ್ರಾಮಗಳ ವಿದ್ಯಾರ್ಥಿಗಳು 7ನೇ ತರಗತಿ ನಂತರ 2 ಕಿಲೋಮೀಟರ್ಗೂ ಹೆಚ್ಚು ದೂರ ಪ್ರಯಾಣಿಸಿ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ ಇತ್ತು. ಲಕ್ಕೂರು ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸಲು ಹಲವು ವರ್ಷಗಳಿಂದ ಪ್ರಯತ್ನ ನಡೆದಿದ್ದರೂ ವಿವಿಧ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ.

ಈ ಬಾರಿ ಶಾಸಕ ಎ. ಮಂಜು ಅವರ ನಿರಂತರ ಪ್ರಯತ್ನ ಹಾಗೂ ಗ್ರಾಮಸ್ಥರ ಸಹಕಾರದಿಂದ ಹಾಸನ ಜಿಲ್ಲೆಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ಏಕೈಕ ಸರ್ಕಾರಿ ಪ್ರೌಢಶಾಲೆ ಲಕ್ಕೂರು ಗ್ರಾಮಕ್ಕೆ ಮಂಜೂರಾಗಿ ಕಾರ್ಯಾರಂಭ ಮಾಡಿದೆ.
ಲಕ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, 7ನೇ ತರಗತಿ ನಂತರ ದೂರದ ಶಾಲೆಗಳಿಗೆ ತೆರಳಬೇಕಾದ ಸಮಸ್ಯೆ ಎದುರಾಗುತ್ತಿತ್ತು. ಈಗ ಆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿದ್ದು, ಈಗಾಗಲೇ 8ನೇ ತರಗತಿಗೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ.

ಕಾರ್ಯಕ್ರಮಕ್ಕೂ ಮುನ್ನ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕುಂಭಕಳಸ ಹೊತ್ತು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಿ ಶಾಸಕ ಎ. ಮಂಜು ಅವರನ್ನು ಸ್ವಾಗತಿಸಿದರು. ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಸಾರ್ವಜನಿಕರು ಹಾಗೂ ವಿವಿಧ ಗ್ರಾಮಗಳ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಮಾತನಾಡಿದ ಶಾಸಕ ಎ. ಮಂಜು, “ಲಕ್ಕೂರು ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮಂಜೂರಾಗಲು ಹಲವು ಬಾರಿ ಪ್ರಯತ್ನಿಸಿದರೂ ಅಡೆತಡೆಗಳು ಎದುರಾಗಿದ್ದವು. ಈ ಬಾರಿ ಗ್ರಾಮದ ಮುಖಂಡರ ಸಹಕಾರದಿಂದ ಅದು ಸಾಧ್ಯವಾಗಿದೆ. ಹಾಸನ ಜಿಲ್ಲೆಯಲ್ಲಿ ಈ ವರ್ಷ ಲಕ್ಕೂರು ಗ್ರಾಮಕ್ಕಷ್ಟೇ ಹೊಸ ಸರ್ಕಾರಿ ಪ್ರೌಢಶಾಲೆ ಮಂಜೂರಾಗಿದೆ. ಶಾಲೆಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವುದು ಗ್ರಾಮಸ್ಥರ ಜವಾಬ್ದಾರಿಯಾಗಿದೆ. ಮಕ್ಕಳ ಸಂಖ್ಯೆಯ ಕೊರತೆಯಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಈ ಸಂದರ್ಭದಲ್ಲಿ, ಪೋಷಕರು ಯಾವುದೇ ಆಮಿಷಗಳಿಗೆ ಒಳಗಾಗದೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು,” ಎಂದು ಮನವಿ ಮಾಡಿದರು.
ಪ್ರಾಥಮಿಕ ಶಾಲೆಯಿಂದಲೇ ಉತ್ತಮ ದಾಖಲಾತಿ ಆಗುತ್ತಿರುವುದು ಸಂತಸದ ಸಂಗತಿಯಾಗಿದೆ. ಇಲ್ಲಿ ಕಲಿಯುವ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡದಂತೆ ಗುಣಮಟ್ಟದ ಶಿಕ್ಷಣ ನೀಡಿ ಪೋಷಕರ ವಿಶ್ವಾಸ ಗಳಿಸುವಂತೆ ಶಿಕ್ಷಕರಿಗೆ ಅವರು ಸೂಚಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ್, ಗ್ರಾಮದ ಮುಖಂಡರಾದ ಹಿರಣ್ಯ, ಅನಂತರಾಜು, ಗಣೇಶ್ ನಾಯಕ, ವೀಣಾ ರೇವಣ್ಣ, ಎಲ್.ಡಿ. ಚಂದ್ರೇಗೌಡ, ತಿಮ್ಮಯ್ಯ, ಬಸವರಾಜ, ರಾಜು, ಎಲ್.ಎಚ್. ಕಾಳೇಗೌಡ, ಸುರೇಶ್, ಮಂಜು, ಶಿವಣ್ಣಗೌಡ, ಕೆ. ಮಲ್ಲೇಶ್, ರಾಜೇಗೌಡ, ಸುರೇಶ್ ನಾಯಕ ಸೇರಿದಂತೆ ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
