ಹಾಸನ, ಅ.7: ಮೈಸೂರು ದಸರಾ ಮಹೋತ್ಸವ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯ ಎಲ್ಲಾ ಮಠಗಳ ಪರಮಪೂಜ್ಯ ಸ್ವಾಮೀಜಿಯವರನ್ನು ಕರ್ನಾಟಕ ಸರ್ಕಾರದ ವತಿಯಿಂದ ಆಹ್ವಾನಿಸಲಾಗುತ್ತಿದೆ.
ಜಿಲ್ಲಾಡಳಿತದ ನಿರ್ದೇಶನದಂತೆ ಬುಧವಾರ ಹಾಸನ ಜಿಲ್ಲೆಯ ಹಲವು ಮಠಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಹಾಗೂ ಮಹಾಸಭಾ ಪದಾಧಿಕಾರಿಗಳು ಸ್ವಾಮೀಜಿಯವರಿಗೆ ಗೌರವಪೂರ್ವಕವಾಗಿ ಆಹ್ವಾನ ಪತ್ರಿಕೆ ನೀಡಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಹಾಸನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ. ತಾರಾನಾಥ್, ಹಾಸನ ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಭಾರಿ ಅಧ್ಯಕ್ಷ ಪುನೀತ್ ಪಟೇಲ್ ಹಾಗೂ ಹಾಸನ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಅವರು ಜಿಲ್ಲಾ ಆಡಳಿತದ ಪರವಾಗಿ ಮಠಗಳಿಗೆ ಭೇಟಿ ನೀಡಿ ಆಹ್ವಾನ ಪತ್ರಿಕೆಗಳನ್ನು ಹಸ್ತಾಂತರಿಸಿದರು.
ಹಾಸನ ಜಿಲ್ಲೆಯಲ್ಲಿ ಇರುವ ಒಟ್ಟು 22 ಮಠಗಳಿಗೂ ಆಹ್ವಾನ ಪತ್ರಿಕೆ ನೀಡಿ, ಅಲ್ಲಿನ ಪರಮಪೂಜ್ಯ ಸ್ವಾಮೀಜಿಯವರನ್ನು ಮೈಸೂರು ದಸರಾ ಮಹೋತ್ಸವಕ್ಕೆ ಗೌರವಪೂರ್ವಕವಾಗಿ ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ದಸರಾ ಮಹೋತ್ಸವವು ನಾಡಿನ ಪ್ರಮುಖ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯ ಪ್ರತೀಕವಾಗಿದ್ದು, ಜಿಲ್ಲೆಯ ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಮಹೋತ್ಸವದ ಮೆರುಗು ಹೆಚ್ಚಲಿದೆ ಎಂದು ತಿಳಿಸಲಾಯಿತು.
– ಶಿವಕುಮಾರ್ ಕಟ್ಟಾಯ

