ಬೆಂಗಳೂರು, ಜೂನ್ 21, 2025: ರಾಜ್ಯದಲ್ಲಿ ತಾಯಂದಿರ ಪ್ರಸವ ಸಂಬಂಧಿ ಸಾವಿನ ಪ್ರಮಾಣದಲ್ಲಿ ನಿರೀಕ್ಷಿತವಾದ ಗಣನೀಯ ಇಳಿಕೆ ಸಂಭವಿಸಿದ್ದು, ಆರೋಗ್ಯ ವ್ಯವಸ್ಥೆಯ ಸಾಧನೆಗೆ ಹೊಸ ಮೌಲ್ಯಮಾಪನವಾಗಿ ಪಠ್ಯವಾಗುತ್ತಿದೆ. ಭಾರತದ ರಿಜಿಸ್ಟ್ರಾರ್ ಜನರಲ್ ಪ್ರಕಟಿಸಿರುವ ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಂ (SRS) ವರದಿಯ ಪ್ರಕಾರ, ಕರ್ನಾಟಕದಲ್ಲಿ ತಾಯಿ ಮರಣ ಪ್ರಮಾಣವು ಲಕ್ಷಕ್ಕೆ 58 ರ ಮಟ್ಟಿಗೆ ಇಳಿದಿದೆ.
2011-13ರಲ್ಲಿ ಲಕ್ಸಕ್ಕೆ 133 ಆಗಿದ್ದ ತಾಯಿ ಮರಣ ಪ್ರಮಾಣವು ಕ್ರಮವಾಗಿ 2014-16ರಲ್ಲಿ 108, 2015-17ರಲ್ಲಿ 97, 2016-18ರಲ್ಲಿ 92, 2017-19ರಲ್ಲಿ 83, 2018-20ರಲ್ಲಿ 69, 2019-21ರಲ್ಲಿ 63 ಮತ್ತು ಇತ್ತೀಚಿನ 2020-22 ಅವಧಿಯಲ್ಲಿ 58 ಕ್ಕೆ ತಗ್ಗಿದ್ದು ಗಮನಾರ್ಹ ಬೆಳವಣಿಗೆಯಾಗಿದೆ.
ಈ ಸಮೀಕ್ಷೆಯು ಬಳ್ಳಾರಿಯಲ್ಲಿನ ಬಾಣಂತಿಯರ ಸಾವುಗಳು ಬೆಳಕಿಗೆ ಬರುವದಕ್ಕೂ ಮುಂಚಿನದ್ದಾಗಿದ್ದರೂ, ಆ ಘಟನೆಗಳು ಆರೋಗ್ಯ ಇಲಾಖೆಯನ್ನು ಇನ್ನಷ್ಟು ಎಚ್ಚರವಾಗಿರಿಸಿ ನಿಗಾ ಕ್ರಮ, ಸಾಂಸ್ಥಿಕ ಚಿಕಿತ್ಸಾ ವ್ಯವಸ್ಥೆಯ ಪುನರ್ ಪರಿಶೀಲನೆ ಮತ್ತು ಅನುಷ್ಠಾನಕ್ಕೆ ದಾರಿ ಮಾಡಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಅಭಿಪ್ರಾಯದಂತೆ, ಈ ಟ್ರೆಂಡ್ ಮುಂದುವರಿಯುವ ನಿರೀಕ್ಷೆ ಇದೆ. ತಾಯಿ ಮತ್ತು ಶಿಶು ಆರೋಗ್ಯಕ್ಕಾಗಿ ಕೈಗೊಳ್ಳುತ್ತಿರುವ ಕ್ರಮಗಳು ಇನ್ನು ಮುಂದೆ ಹೆಚ್ಚಾಗಿ ಫಲಕಾರಿಯಾಗಲಿವೆ ಎನ್ನುವುದು ವೈದ್ಯಕೀಯ ಕ್ಷೇತ್ರದ ವಿಶ್ವಾಸ.
