ರಾಮನಾಥಪುರ, ಆ.24: ಕಾವೇರಿ ನದಿ ದಂಡೆಯಲ್ಲಿರುವ ರಾಮನಾಥಪುರದ ಶ್ರೀ ಉತ್ತರಾಧಿ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವ ಆ.27ರಿಂದ 31ರವರೆಗೆ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಆರಾಧನಾ ಮಹೋತ್ಸವಕ್ಕೆ ಶಾಸಕ ಎ. ಮಂಜು ಅವರನ್ನು ಆಹ್ವಾನಿಸುವ ಸಲುವಾಗಿ ಶ್ರೀ ರಾಘವೇಂದ್ರಸ್ವಾಮಿ ಮಠದ ವ್ಯವಸ್ಥಾಪಕರಾದ ವೇ. ಕನಕಾಚಾರ್ಯರು ಶಾಸಕರಿಗೆ ಆಹ್ವಾನ ಪತ್ರಿಕೆ ನೀಡಿ, ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಆ.27ರಂದು ಗುರುವಾರ ಸಂಜೆ 7 ಗಂಟೆಗೆ ನಾದಸ್ವರ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8 ಗಂಟೆಗೆ ಪೇಟೆ ಬೀದಿ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಆ.28ರಂದು ಸಂಜೆ 6.30ಕ್ಕೆ ರಾಮನಾಥಪುರ ವಿದ್ಯಾನಿಕೇತನ ಹಾಗೂ ಇತರರಿಂದ ಭರತನಾಟ್ಯ, ಸಂಜೆ 7.15ಕ್ಕೆ ಧಾನ್ಯಪೂಜೆ ಹಾಗೂ ಧ್ವಜಾರೋಹಣ ನೆರವೇರಲಿದೆ.

ಆ.29ರಂದು ಪೂರ್ವಾರಾಧನೆ ಅಂಗವಾಗಿ ಬೆಳಗ್ಗೆ 5.30ಕ್ಕೆ ಸುಪ್ರಭಾತ ಸೇವೆ, 7 ಗಂಟೆಗೆ ಅಷ್ಟೋತ್ತರ ಪಾರಾಯಣ, 8 ಗಂಟೆಗೆ ಪಂಚಾಮೃತ ಅಭಿಷೇಕ ಹಾಗೂ ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ನಡೆಯಲಿದೆ. ಸಂಜೆ ಅರಕಲಗೂಡು ಹಾಗೂ ಸುತ್ತಮುತ್ತಲಿನ ಮಕ್ಕಳಿಂದ ಭರತನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
ಆ.30ರಂದು ಮಧ್ಯಾರಾಧನೆ ಅಂಗವಾಗಿ ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ಬೆಂಗಳೂರಿನ ಕು. ಅಹಿಕ ನಾಗದೀಪ ಅವರ ಸಂಗೀತ ಕಾರ್ಯಕ್ರಮ ಇರಲಿದೆ. ಆ.31ರಂದು ಉತ್ತರಾರಾಧನೆ ಪ್ರಯುಕ್ತ ಸುಪ್ರಭಾತ ಸೇವೆ, ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕದ ಬಳಿಕ ಬೆಳಗ್ಗೆ 10.30ಕ್ಕೆ ಶ್ರೀ ರಾಘವೇಂದ್ರಸ್ವಾಮಿಗಳ ರಥೋತ್ಸವ ಹಾಗೂ ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. ಸಂಜೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ನಾಟ್ಯಸಂಕಲ್ಪ ನೃತ್ಯ ಕಲಾಶಾಲೆಯ ಶ್ರೀಮತಿ ಪ್ರೇಕ್ಷಾ ಭಟ್ ಹಾಗೂ ತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ಆರಾಧನಾ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮಠದ ವ್ಯವಸ್ಥಾಪಕರಾದ ವೇ. ಕನಕಾಚಾರ್ಯರು ಮನವಿ ಮಾಡಿದ್ದಾರೆ.
ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ