ಹಾಸನ, ಜು. 6: ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕ (ಡಿಜಿಪಿ ಮತ್ತು ಐಜಿಪಿ) ಎಂ.ಎ. ಸಲೀಂ ಅವರು ಜು. 7ರಂದು ಹಾಸನ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಜಿಲ್ಲಾ ಪೊಲೀಸ್ ಕಚೇರಿಗೆ ಆಗಮಿಸಲಿರುವ ಅವರು ಪೊಲೀಸ್ ಸಿಬ್ಬಂದಿಯಿಂದ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಬಳಿಕ ಜಿಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಅಪರಾಧ ಪರಿಶೀಲನಾ ಸಭೆ ನಡೆಸಿ, ಜಿಲ್ಲೆಯ ಕಾನೂನು-ಸುವ್ಯವಸ್ಥೆ, ಅಪರಾಧ ನಿಯಂತ್ರಣ, ತನಿಖಾ ಪ್ರಗತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲಿದ್ದಾರೆ.
ಅನಂತರ ಹಾಸನದ ಪೊಲೀಸ್ ತರಬೇತಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯ ಹಾಗೂ ತರಬೇತಿ ವ್ಯವಸ್ಥೆಗಳನ್ನು ಪರಿಶೀಲಿಸಲಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
